Site icon Vistara News

Self Harming: ನೇಣಿಗೆ ಶರಣಾದ ಕ್ಯಾಬ್‌ ಚಾಲಕ; ಮಗನ ಶವದ ಮುಂದೆ ಕಣ್ಣೀರಿಡುತ್ತಾ ಕೊನೆಯುಸಿರೆಳೆದ ತಾಯಿ

Self Harming

ಬೆಂಗಳೂರು: ಆ ಮಹಿಳೆ ಭಾನುವಾರ ಅಂತ ಕೊಂಚ ತಡವಾಗಿಯೇ ಎದ್ದಿದ್ದರು. ಬಿಸಿ ಬಿಸಿ ಕಾಫಿ ಮಾಡಿಕೊಂಡು ಮಗನಿಗೆ ಕೊಡಲು ಹೋದಾಕೆಗೆ ಬರಸಿಡಿಲು ಬಡಿದಂತಾಗಿತ್ತು. ಯಾಕೆಂದರೆ ಬಾಳಿ ಬದುಕಬೇಕಿದ್ದ ಮಗ ಫ್ಯಾನಿಗೆ ಕೊರಳೊಡ್ಡಿದ. ಫ್ಯಾನಿನಲ್ಲಿ ನೇತಾಡುತ್ತಿದ್ದ ಮಗನ ಶವ ಕಂಡೊಡನೇ ಹೌಹಾರಿದ್ದರು. ಚೀರಾಡುತ್ತಾ ಅಕ್ಕ-ಪಕ್ಕದವರನ್ನು ಕರೆದಿದ್ದರು. ಆದರೆ ಮಗನ ಶವ ಕಂಡು ಕಣ್ಣೀರುಡುತ್ತಿದ್ದ ಆ ತಾಯಿ ಆ ನೋವಿನಲ್ಲೇ ಜೀವ ಬಿಟ್ಟಿದ್ದಾರೆ. ಈ ಮನಕಲಕುವ ಘಟನೆ ಬೆಂಗಳೂರಿನಲ್ಲಿ (Self Harming) ನಡೆದಿದೆ.

ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನೊರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅರುಣ್ ಕುಮಾರ್ ಮೃತ ದುರ್ದೈವಿ. ಬೆಂಗಳೂರಿನ ಕಾವೇರಿಪುರದ ನಿವಾಸಿಯಾದ ಅರುಣ್‌ ಕುಮಾರ್‌ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅರುಣ್ ಕುಮಾರ್ ಭಾನುವಾರ ಬೆಳಗಿನ ಜಾವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಮಗನ ಅಗಲಿಕೆಯಿಂದ ನೊಂದಿದ್ದ ತಾಯಿ ಮಗನ ಶವದ ಮುಂದೆ ಕಣ್ಣೀರಿಡುತ್ತಾ ಗೋಳಾಡುತ್ತಿದ್ದರು. ಮಗನ ನೋಡುತ್ತಲೆ ತಾಯಿಯು ಕೊನೆಯುಸಿರೆಳೆದಿದ್ದಾರೆ. ಅರುಣ್ ಕುಮಾರ್ ತಾಯಿ ಸರಸ್ವತಿ (78) ಮೃತಪಟ್ಟಿದ್ದಾರೆ.

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ಅರುಣ್‌ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ನೀರವ ಮೌನ ಆವರಿಸಿದೆ.

ಇದನ್ನೂ ಓದಿ: Physical Abuse : ಮದುವೆಯಾಗುವುದಾಗಿ ನಂಬಿಸಿ ಪ್ರಿಯಕರ ಎಸ್ಕೇಪ್; ಆತ್ಮಹತ್ಯೆಗೆ ಯತ್ನಿಸಿದ ಯುವತಿ

ಒಬ್ಬರಿಗೊಬ್ಬರು ತಬ್ಬಿಕೊಂಡು ನೇಣಿಗೆ ಶರಣಾದ ಪ್ರೇಮಿಗಳು

ಆನೇಕಲ್: ಪ್ರೀತಿಗೆ ಪೋಷಕರ (Love Case) ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರೇಮಿಗಳು ಆತ್ಮಹತ್ಯೆಗೆ (Self Harming) ಶರಣಾಗಿದ್ದಾರೆ. ಪ್ರಿಯಕರನ ಮನೆಯ ಫ್ಯಾನಿಗೆ ಇಬ್ಬರು ಒಬ್ಬರಿಗೊಬ್ಬರು ತಬ್ಬಿಕೊಂಡು ನೇಣು ಬಿಗಿದುಕೊಂಡಿದ್ದಾರೆ. ತಮಿಳುನಾಡಿನ ಡೆಂಕಣಿಕೋಟೆಯ ಕೆಳಮಂಗಲ ಸಮೀಪದ ಗೌತಾಲಂ ಗ್ರಾಮದಲ್ಲಿ ಘಟನೆ ನಡೆದಿದೆ.

ಗೌತಾಲಂ ಗ್ರಾಮದ ನರಸಿಂಹಮೂರ್ತಿ (22), ಬಾಚಪ್ಪನಟ್ಟಿ ಗ್ರಾಮದ ಯುವಶ್ರೀ (17) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ನರಸಿಂಹಮೂರ್ತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಯುವಶ್ರೀ ಕೃಷ್ಣಗಿರಿಯ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ಕೆಲ ವರ್ಷಗಳಿಂದ ನರಸಿಂಹ ಮೂರ್ತಿ ಹಾಗೂ ಯುವಶ್ರೀ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿ ವಿಚಾರ ತಿಳಿದ ಯುವತಿ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಮಾತ್ರವಲ್ಲದೇ ಕಳೆದ ತಿಂಗಳು ಯುವತಿ ಪೋಷಕರಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನರಸಿಂಹಮೂರ್ತಿ ಯುವಶ್ರೀಗೆ ಕಿರುಕುಳ ನೀಡುತ್ತಿದ್ದಾನೆಂದು ದೂರು ಕೊಟ್ಟಿದ್ದರು.

ಇದನ್ನೂ ಓದಿ: Actor Darshan : ಕೊಲೆ ಕೇಸ್‌ನಲ್ಲಿ ದರ್ಶನ್‌ ಮೂಲಕವೇ ಪವಿತ್ರಾಗೌಡ ಲಾಕ್‌; ಜತೆಗೆ ಇದ್ದ ಹುಡುಗರನ್ನು ನಂಬಿ ಕೆಟ್ಟೆ ಎಂದ ನಟ!

ಡೆಂಕಣಿಕೋಟೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಯುವತಿ ಪೋಷಕರು ಪ್ರಕರಣ ದಾಖಲಿಸಿದ್ದರು. ಪೊಲೀಸರು ನರಸಿಂಹಮೂರ್ತಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಕಳೆದ ಹತ್ತು‌ ದಿನಗಳ ಹಿಂದೆಯಷ್ಟೇ ನರಸಿಂಹಮೂರ್ತಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ.

ಜೈಲಿನಿಂದ ಹೊರಬಂದ ಬಳಿಕ ಯುವತಿ ಜತೆ ನರಸಿಂಹಮೂರ್ತಿ ನಿರಂತರ ಫೋನ್‌ ಸಂಪರ್ಕ ಬೆಳೆಸಿದ್ದ. ನಿನ್ನೆ ಶನಿವಾರ ಸಂಜೆ ಕಾಲೇಜು ಮುಗಿಸಿ ನರಸಿಂಹಮೂರ್ತಿ ಮನೆಗೆ ಹೋಗಿದ್ದ ಯುವಶ್ರೀ ಇಬ್ಬರು ಆತ್ಮಹತ್ಯೆಗೆ ನಿರ್ಧರಿಸಿದ್ದಾರೆ. ಪ್ರೀತಿಗೆ ಯುವತಿ ಪೋಷಕರು ವಿರೋಧದಿಂದ ಬೇಸತ್ತ ಇವರಿಬ್ಬರು ಬಾಗಿಲು ಹಾಕಿಕೊಂಡು ಮನೆಯೊಳಗೆ ಇಬ್ಬರು ಫ್ಯಾನಿಗೆ ನೇಣಿಗೆ ಶರಣಾಗಿದ್ದಾರೆ.

ಮನೆಯ ಬಾಗಿಲು ತೆರೆಯದೆ ಇದ್ದಾಗ ಅನುಮಾನಗೊಂಡ ಯುವಕನ ಪೋಷಕರು, ಬಾಗಿಲು ಮುರಿದು ಒಳ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಡೆಂಕಣಿಕೋಟೆ ಡಿವೈಎಸ್‌ಪಿ ಶಾಂತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಡೆಂಕಣಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version