ಬೆಂಗಳೂರು: ಬೆಂಗಳೂರಿನ ಯಲಹಂಕದ ಆರ್‌ಎನ್‌ಜೆಡ್ ಅಪಾರ್ಟ್‌ಮೆಂಟ್‌ನಲ್ಲಿ ತಾಯಿ ಮತ್ತು ಮಗ ಇಬ್ಬರು ಆತ್ಮಹತ್ಯೆ (Self Harming)ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಭಾರ್ಗವ್ ಪುಲಿವರ್ತ (13), ತಾಯಿ ರಮ್ಯಾ (40) ಮೃತ ದುರ್ದೈವಿಗಳು.
ಮೂಲತಃ ಆಂಧ್ರ ಪ್ರದೇಶದ ರಮ್ಯಾ ಶ್ರೀಧರ್ ಎಂಬುವವರನ್ನು ಪ್ರೀತಿಸಿ, ಅಂತರ್ಜಾತಿ ವಿವಾಹವಾಗಿದ್ದರು. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು. ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಶ್ರೀಧರ್ ಪುಲಿವರ್ತ ಮೂರು ತಿಂಗಳ ಹಿಂದೆ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು. ಫ್ಲ್ಯಾಟ್ ಬಾಡಿಗೆ 45 ಸಾವಿರ, ಮಕ್ಕಳಿಬ್ಬರ ಶಾಲೆ ಫೀಸ್, ಮನೆ ನಿರ್ವಹಣೆ ಖರ್ಚು ಅಂತ ತಿಂಗಳಿಗೆ ಲಕ್ಷ ಲಕ್ಷ ಹಣ ಬೇಕಿತ್ತು. ಇತ್ತ ಹಣ ಹೊಂದಿಸುವುದು ರಮ್ಯಾಳಿಗೆ ಆಗುತ್ತಿರಲಿಲ್ಲ. ಇದೇ ಕಾರಣಕ್ಕೆ ಖಿನ್ನತೆಗೊಳಗಾಗಿದ್ದರು. ಪತಿ ಸತ್ತ ನಂತರ ತಾವು ಸಾಯೋದಾಗಿ ರಮ್ಯಾ ಹಾಗೂ ಮಗ ಭಾರ್ಗವ್ ಹೇಳಿ ಕೊಂಡಿದ್ದರಂತೆ.
ರಮ್ಯಾಳಿಗೆ 19 ವರ್ಷದ ಮಗಳು ಇದ್ದು, ಆಕೆ ಪಿಜಿಯಲ್ಲಿದ್ದುಕೊಂಡು ಓದುತ್ತಿದ್ದಾಳೆ. ಕಳೆದ 9ರ ರಾತ್ರಿ ಮಗಳ ಜತೆಗೆ ಮಾತನಾಡಿ, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಸಾವಿನ ನಂತರ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಕುಟುಂಬವು ಕುಗ್ಗಿ ಹೋಗಿತ್ತು.
ಇದನ್ನೂ ಓದಿ: Murder case : ಪ್ರೀತಿ ವಿಷ್ಯಕ್ಕೆ ಯುವಕನಿಗೆ ಬೆಂಕಿ ಹಚ್ಚಿ ಕೊಂದವರ ವಿರುದ್ಧ ಚಾಜ್೯ ಶೀಟ್ ಸಲ್ಲಿಕೆ
ಮೊದಲು ಮಗ ಆತ್ಮಹತ್ಯೆ ಮಾಡಿಕೊಂಡ ಬಳಿಕ ರಮ್ಯಾ ನೇಣಿನ ಕುಣಿಕೆಯಿಂದ ಬಿಡಿಸಿ ಬೆಡ್ ಮೇಲೆ ಮಲಗಿಸಿದ್ದಾರೆ. ನಂತರ ತಾವು ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಸತ್ತು ನಾಲ್ಕು ದಿನದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೂ ಮುನ್ನ ಪೊಲೀಸ್, ಡಾಕ್ಟರ್ ಮತ್ತು ಮಗಳಿಗೆ ಪತ್ರ ಬರೆದು ನೇಣಿಗೆ ಶರಣಾಗಿದ್ದಾರೆ.
ಎರಡ್ಮೂರು ದಿನದಿಂದ ಮನೆಯಿಂದ ಫೋನ್ ಬಾರದ ಹಿನ್ನೆಲೆಯಲ್ಲಿ ನಿನ್ನೆ ಶುಕ್ರವಾರ ಮಗಳು ಪಿಜಿಯಿಂದ ಮನೆಗೆ ಬಂದಿದ್ದಾಳೆ. ಮನೆ ಬಾಗಿಲು ಎಷ್ಟೇ ತಟ್ಟಿದ್ದರು ತೆರೆಯದೇ ಇದ್ದಾಗ, ತನ್ನ ಬಳಿ ಇದ್ದ ಇನ್ನೊಂದು ಕೀಯಿಂದ ಮನೆಯ ಬಾಗಿಲು ತೆಗೆದಿದ್ದಾಳೆ. ಆಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಯಲಹಂಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ