ಬೆಂಗಳೂರು: ತನ್ನ ವೃದ್ಧ ಪೋಷಕರ ಆರೈಕೆಗೆ ನಿಯೋಜಿಸಲಾಗಿದ್ದ ಯುವತಿ ಮೇಲೆ ಮನೆ ಮಾಲೀಕ ಅತ್ಯಾಚಾರ ಮಾಡಿದ ಘಟನೆ ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಯುವತಿ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಕೂಡ್ಲು ಬಡಾವಣೆ ನಿವಾಸಿ ಪರಶಿವಮೂರ್ತಿ (47) ಎಂಬಾತನನ್ನು ಬಂಧಿಸಿದ್ದಾರೆ. ಈತ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು, ಕೌಟುಂಬಿಕ ಕಲಹದಿಂದ ಪತ್ನಿ ಹಾಗೂ ಮಕ್ಕಳು ದೂರವಾಗಿದ್ದರು. ಹೀಗಾಗಿ ಮನೆಯಲ್ಲಿದ್ದ ವೃದ್ಧ ಪೋಷಕರ ಆರೈಕೆಗಾಗಿ ಏಜೆನ್ಸಿಯೊಂದರ ಮೂಲಕ ಯುವತಿಯನ್ನು ನೇಮಿಸಿಕೊಂಡಿದ್ದ.
ನ.30ರ ತಡರಾತ್ರಿ ಯುವತಿಯ ಮೇಲೆ ಈತ ಅತ್ಯಾಚಾರ ಎಸಗಿದ್ದು, ಬಳಿಕ ಯುವತಿಯ ಮೊಬೈಲ್ ಕಸಿದುಕೊಂಡು ಯಾರಿಗೂ ವಿಷಯ ಹೇಳದಂತೆ ಬೆದರಿಕೆ ಹಾಕಿದ್ದ. ಅಷ್ಟೇ ಅಲ್ಲದೆ ಯುವತಿಯನ್ನು ಕೂಡಿ ಹಾಕಿ ಮನೆಗೆ ಬೀಗ ಜಡಿದು ಹೋಗಿದ್ದ. ಮರುದಿನ ಬೆಳಗ್ಗೆ ಮತ್ತೆ ಮನೆಗೆ ಬಂದು ಯುವತಿಗೆ ಮೊಬೈಲ್ ನೀಡಿ ಮತ್ತೆ ಬೆದರಿಕೆ ಹಾಕಿದ್ದ. ಮೊಬೈಲ್ ಕೈಗೆ ಸಿಕ್ಕ ಕೂಡಲೇ ಕೆಲಸಕ್ಕೆ ನಿಯೋಜಿಸಿದ್ದ ಏಜೆನ್ಸಿಯನ್ನು ಯುವತಿ ಸಂಪರ್ಕಿಸಿದ್ದಳು. ಫೋನ್ ಮೂಲಕ ಆರೋಪಿ ನಡೆಸಿದ ಹೀನ ಕೃತ್ಯದ ಬಗ್ಗೆ ವಿವರಣೆ ನೀಡಿದ್ದಳು. ಏಜೆನ್ಸಿಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯ ಮನೆ ಬಾಗಿಲು ಒಡೆದು ಯುವತಿಯನ್ನು ರಕ್ಷಿಸಿದ್ದಾರೆ. ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ | Sexual harassment | ಅತ್ಯಾಚಾರದಿಂದ ಬಾಲಕಿ ಗರ್ಭಿಣಿ: ಕಾಫಿ ತೋಟದ ಮಾಲೀಕ ಸಹಿತ ನಾಲ್ವರು ಅರೆಸ್ಟ್