ಬೆಂಗಳೂರು: ಡಿಸೆಂಬರ್ ಆರಂಭವಾಗುತ್ತಿದ್ದಂತೆಯೇ ಕೇರಳದ ಪುಣ್ಯ ಕ್ಷೇತ್ರ ಶಬರಿಮಲೆಗೆ (Shabarimale yatre) ಹೋಗುವ ಯಾತ್ರಿಕರ ಸಂಖ್ಯೆ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಯಾತ್ರಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್ (KSRTC Bus) ವ್ಯವಸ್ಥೆಯನ್ನು ಮಾಡಲು ಮುಂದಾಗಿದೆ. ಡಿಸೆಂಬರ್ 1ರಿಂದ ವಿಶೇಷ ಬಸ್ ಸೌಲಭ್ಯವನ್ನು (Special bus Service) ಒದಗಿಸಲಾಗುತ್ತಿದ್ದು, ಯಾತ್ರಾರ್ಥಿಗಳು ಇದನ್ನು ಉಪಯೋಗ ಮಾಡಿಕೊಳ್ಳಬಹುದು (Shabarimale Bus) ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.
ಡಿಸೆಂಬರ್ 1ರಿಂದ ಬೆಂಗಳೂರಿನಿಂದ ಶಬರಿಮಲೆಗೆ ವೋಲ್ವೋ ಬಸ್ ಕಾರ್ಯಾಚರಣೆ ನಡೆಸಲಿದೆ. ಬೆಂಗಳೂರಿಂದ ನೀಲಕ್ಕಲ್ (ಪಂಪಾ, ಶಬರಿಮಲೈ) ಮಾರ್ಗವಾಗಿ ವೋಲ್ವೋ ಮತ್ತು ರಾಜಹಂಸ ಬಸ್ ಸಂಚರಿಸಲಿದೆ ಎಂದು ತಿಳಿಸಿರುವ ಕೆ.ಎಸ್.ಆರ್.ಟಿ.ಸಿಯು ವೋಲ್ವೊ ಬಸ್ನ ಟಿಕೆಟ್ ದರ, ಮಾರ್ಗ, ಸಂಚಾರದ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ದರ ಎಷ್ಟು, ಯಾವ ಹೊತ್ತಿಗೆ ಹೊರಡುತ್ತದೆ?
ಕೆ.ಎಸ್.ಆರ್.ಟಿಸಿ ವೋಲ್ವೋ ಬಸ್ ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1.50ಕ್ಕೆ ಹೊರಡಲಿದೆ. ಮರುದಿನ ಬೆಳಿಗ್ಗೆ 6.45ಕ್ಕೆ ಪಂಪಾ ತಲುಪಲಿದೆ. ಅದೇ ದಿನ ಸಂಜೆ ಪಂಪಾದಿಂದ ಹೊರಟು ಮರುದಿನ ಬೆಳಿಗ್ಗೆ 10 ಗಂಟೆಗೆ ಬೆಂಗಳೂರು ತಲುಪಲಿದೆ. ವೋಲ್ವೋ ಬಸ್‌ನಲ್ಲಿ ಒಂದು ಟಿಕೆಟ್‌ನ ದರ 1600 ರೂ. ಆಗಿರುತ್ತದೆ.
ರಾಜಹಂಸ ಬಸ್ (ನಾನ್‌ಎಸಿ) ಬಸ್ ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 8.15ಕ್ಕೆ ಪಂಪಾ ತಲುಪಲಿದೆ. ಆ ದಿನ ಸಂಜೆ 5 ಗಂಟೆಗೆ ಪಂಪಾದಿಂದ ಹೊರಟು ಮರುದಿನ ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ತಲುಪಲಿದೆ. ರಾಜಹಂಸದಲ್ಲಿ ಬೆಂಗಳೂರಿನಿಂದ ಶಬರಿಮಲೆಗೆ ಪ್ರತಿ ಟಿಕೆಟ್ ಬೆಲೆ 940 ರೂ. ಆಗಿದೆ.
ಡಿಸೆಂಬರ್ ತಿಂಗಳಲ್ಲಿ ಶಬರಿಮಲೆ ಸನ್ನಿಧಿಯಲ್ಲಿ ಮಂಡಲೋತ್ಸವ ನಡೆಯಲಿದ್ದು, ಆ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಯಾತ್ರಿಕರು ಶಬರಿಮಲೆಗೆ ಭೇಟಿ ನೀಡುತ್ತಾರೆ. ಆ ಬಳಿಕ ಜನವರಿ 14ರಂದು ಮಕರ ವಿಳಕ್ಕು (ಮಕರ ಜ್ಯೋತಿ) ನಡೆಯುತ್ತದೆ. ಆ ಸಂದರ್ಭದಲ್ಲಿ 48 ದಿನಗಳ ಕಾಲ ಮಾಲಾ ಧಾರಣೆ ಮಾಡಿ ವ್ರತಧಾರಿಗಳಾದ ಭಕ್ತರು ದೇವರ ದರ್ಶನಕ್ಕೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಹೊಸ ಬಸ್ ಸೇವೆ ಅನುಕೂಲಕರವಾಗಲಿದೆ.
ಇದನ್ನೂ ಓದಿ : Shobha Karandlaje: ಶಬರಿಮಲೆಗೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ
ಬಸ್ ಟಿಕೆಟ್ ಬುಕಿಂಗ್ ಹೇಗೆ?
ಶಬರಿಮಲೆಗೆ ಹೋಗುವ ಬಸ್‌ಗಳ ಬುಕಿಂಗ್‌ನ್ನು ಕೆಎಸ್‌ಆರ್‌ಟಿಸಿ ಅಧಿಕೃತ ವೆಬ್ಸೈಟ್ (www.ksrtc.in) ಮೂಲಕ ಮಾಡಬಹುದು. ಅದಲ್ಲದೆ ಎಲ್ಲಾ ಜಿಲ್ಲಾ ಮತ್ತು ತಾಲೂಕು ಮಟ್ಟದ ಕೆಎಸ್‌ಆರ್‌ಟಿಸಿ ಟಿಕೆಟ್ ಕೌಂಟರ್‌ಗಳಲ್ಲಿ ಟಿಕೆಟ್ ಕಾಯ್ದಿರಿಸಬಹುದು. ಕರ್ನಾಟಕ ರಾಜ್ಯದಾದ್ಯಂತ ಮತ್ತು ನೆರೆಯ ರಾಜ್ಯಗಳ ಪ್ರಮುಖ ಕಡೆಗಳಲ್ಲಿ ಒಟ್ಟು 707 ಟಿಕೆಟ್ ಕೌಂಟರ್‌ಗಳು ಇವೆ.