Site icon Vistara News

Shadakshari Transfer : ಶಿವಮೊಗ್ಗದಲ್ಲಿ ನನಗೆ 1 ಅಡಿ ಜಾಗವೂ ಇಲ್ಲ; ಸರ್ಕಾರಕ್ಕೆ ನಷ್ಟ ಆರೋಪಕ್ಕೆ ಷಡಾಕ್ಷರಿ ಉತ್ತರ

CS Shadakshari on transfer

#image_title

ಬೆಂಗಳೂರು: ಶಿವಮೊಗ್ಗದ ಅಬ್ಬಲಗೆರೆಯ ಕೆರೆಯಿಂದ ಮಣ್ಣು ಸಾಗಾಟ (Mud transport Scam) ಮಾಡಿ ಖಾಸಗಿ ಲೇಔಟ್‌ಗೆ ತುಂಬಿಸಿದ ಪ್ರಕರಣವೇ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ (State Government Employees Association President) ಸಿ.ಎಸ್‌. ಷಡಾಕ್ಷರಿ (CS Shadakashari) ಅವರ ವರ್ಗಾವಣೆಗೆ (Shadakshari Transfer) ಕಾರಣ ಎಂದು ಹೇಳಲಾಗಿದೆ. ಅಥವಾ ಆ ಪ್ರಕರಣವನ್ನು ಮುಂದಿಟ್ಟುಕೊಂಡು ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ ಈ ಪ್ರಕರಣದ ಬಗ್ಗೆ ಷಡಾಕ್ಷರಿ ಅವರು ಹೇಳುವುದೇನು? ಎಂಬ ಕುತೂಹಲ ಎಲ್ಲರಿಗೂ ಇದೆ. ಅವರು ಹೇಳುವ ಪ್ರಕಾರ, ಅಬ್ಬಲಗೆರೆ ಮಣ್ಣು ಸಾಗಾಟ ಪ್ರಕರಣದಲ್ಲಿ ನನ್ನ ಮೇಲಿನ ಆರೋಪಕ್ಕೆ ಲೋಕಾಯುಕ್ತವೇ ಕ್ಲೀನ್‌ ಚಿಟ್‌ (Lokayukta Clean Chit) ಕೊಟ್ಟಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯೇ ನನ್ನ ಪಾತ್ರವಿಲ್ಲ ಎಂದಿದೆ. ಅದಕ್ಕಿಂತಲೂ ಹೆಚ್ಚಾಗಿ ಶಿವಮೊಗ್ಗದಲ್ಲಿ ನನ್ನದು ಎಂದು ಹೇಳಬಹುದಾದ ಒಂದು ಅಡಿ ಆಸ್ತಿಯೂ ಇಲ್ಲ ಎಂದಿದ್ದಾರೆ. ವಿಸ್ತಾರ ನ್ಯೂಸ್‌ ಜತೆಗೆ ಮಾತನಾಡಿದ ಅವರು ಇದರ ಪೂರ್ಣ ವಿವರವನ್ನು ನೀಡಿದ್ದಾರೆ.

ಮೊದಲು ಷಡಾಕ್ಷರಿ ಅವರ ಮೇಲಿರುವ ಆರೋಪವೇನು ಎಂದು ಗಮನಿಸೋಣ

ಮಣ್ಣುಸಾಗಾಟ ಪ್ರಕರಣದಲ್ಲಿ ಭಾಗಿಯಾಗಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿದ ಆರೋಪ ಎದುರಿಸುತ್ತಿರುವ ಷಡಾಕ್ಷರಿ ಅವರನ್ನು ವರ್ಗಾವಣೆ ಮಾಡಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು.

-ಶಿವಮೊಗ್ಗ ತಾಲೂಕು, ಅಬ್ಬಲಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಬ್ಬಲಗೆರೆ ಗ್ರಾಮದ ಸರ್ವೆ ನಂ.119ರಲ್ಲಿ ಮುದ್ದಣ್ಣನ ಕೆರೆಯಲ್ಲಿ ಅಕ್ರಮವಾಗಿ ಮಣ್ಣನ್ನು ತೆಗೆದು ಖಾಸಗಿ ಲೇಔಟ್ ಗೆ ಸಾಗಿಸಿರುವ ಬಗ್ಗೆ ಸರ್ಕಾರಕ್ಕೆ ಪಾವತಿಸಬೇಕಾಗಿರುವ ಮಣ್ಣಿನ ಒಟ್ಟು ರಾಯಲ್ಟಿ ಮೊತ್ತವನ್ನು ಪಾವತಿಸದೆ ಸರ್ಕಾರದ ಬೊಕ್ಕಸಕ್ಕೆ ರೂ. 71,45,920/-ಗಳನ್ನು ನಷ್ಟ ಉಂಟು ಮಾಡಲಾಗಿದೆ.

-ಈ ಬಗ್ಗೆ ಹಾಗೂ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದ ಸರ್ಕಾರದ ಆದೇಶವನ್ನು ಉಲ್ಲಂಘಿಸಿದ ಬಗ್ಗೆ ಕಾರ್ಯಪಾಲಕ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಜಿಲ್ಲಾ ಪಂಚಾಯತ್ ಶಿವಮೊಗ್ಗ ಇವರು ವರದಿ ನೀಡಿರುತ್ತಾರೆ.

-ಈ ಪ್ರಕರಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್‌. ಷಡಾಕ್ಷರಿ ಅವರ ನಿರ್ದೇಶನದಂತೆ ಗ್ರಾಮ ಪಂಚಾಯತ್ ಮತ್ತು ಗಣಿ ಇಲಾಖೆಯವರು ನಡೆದುಕೊಂಡಿರುವ ಬಗ್ಗೆ ಆಕ್ಷೇಪಣೆಗಳು ವ್ಯಕ್ತವಾಗಿರುತ್ತವೆ.

– ಇದೇ ವೇಳೆ ಸರ್ಕಾರಿ ನೌಕರರ ಸಂಘದ ರಾಜ್ಯ ಸರಿಷತ್ ಸದಸ್ಯರಾದ ಬಿ ಗಂಗಾಧರ ಮತ್ತು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ ಅವರು ಹಾಗೂ ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳು ಸದರಿ ಘಟನೆಯ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟವರ ಮೇಲೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿರುತ್ತಾರೆ.

– ಈ ಬಗ್ಗೆ ಪ್ರಧಾನ ನಿರ್ದೇಶಕರು, ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆ, ಬೆಂಗಳೂರು ಇವರು ಜಂಟಿ ನಿರ್ದೇಶಕರ ಕಛೇರಿ, ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ, ಶಿವಮೊಗ್ಗ ಇಲ್ಲಿ ಲೆಕ್ಕಾಧೀಕ್ಷಕರಾಗಿರುವ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ. ಎಸ್. ಪಡಕ್ಟರಿ, ಈ ಪ್ರಕರಣದಲ್ಲಿ ಭಾಗಿಯಾಗಿರುವುದರಿಂದ ಇವರನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿವಮೊಗ್ಗ ಜಿಲ್ಲೆಯಿಂದ ಬೇರೆಡೆಗೆ ವರ್ಗಾಯಿಸುವ ಕುರಿತು ಸರ್ಕಾರದ ಆರ್ಥಿಕ ಇಲಾಖೆಯನ್ನು ಕೋರಿರುತ್ತಾರೆ.

– ಸದರಿಯವರು ಜಿಲ್ಲೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ತಮ್ಮ ಇಚ್ಚೆಯಂತೆ ಕಾರ್ಯನಿರ್ವಹಿಸಲು ಒತ್ತಡ ಹೇರುವುದರಿಂದ ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿಯು ಉಂಟಾಗಿರುವುದಾಗಿ ದಿನಾಂಕ: 16-09-2023ರಲ್ಲಿ ನಡೆದ ಜಿಲ್ಲಾ ಪರಿಶೀಲನಾ ಸಭೆಯ ಚರ್ಚೆಯಲ್ಲಿ ಪ್ರಸ್ತಾಪವಾಗಿರುತ್ತದೆ. ಆದ್ದರಿಂದ ಈ ಬಗ್ಗೆ ಸಂಬಂಧ ಪಟ್ಟವರ ಮೇಲೆ ಕ್ರಮಕೈಗೊಳ್ಳಲು ಕೋರುತ್ತೇನೆ.

ವಿಸ್ತಾರ ನ್ಯೂಸ್‌ ಜತೆ ಷಡಾಕ್ಷರಿ ಅವರು ಹಂಚಿಕೊಂಡ ಅಭಿಪ್ರಾಯದ ಆಡಿಯೊ

https://vistaranews.com/wp-content/uploads/2023/11/WhatsApp-Audio-2023-11-08-at-09.44.59-2.mp3

ಶಿವಮೊಗ್ಗದಲ್ಲಿ ನನಗೆ ಒಂದು ಸಣ್ಣ ಜಾಗವೂ ಇಲ್ಲ ಎಂದ ಷಡಾಕ್ಷರಿ

ಕಾರ್ಯಾಂಗ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯಾಧ್ಯಕ್ಷನಿಗೆ ವರ್ಗಾವಣೆ ಮಾಡಿದ್ದಾರೆ. ಎಲ್ಲಿಗೇ ವರ್ಗಾವಣೆ ಮಾಡಿದ್ರು ಅಧ್ಯಕ್ಷ ಸ್ಥಾನಕ್ಕೆ ಕುತ್ತು ಇಲ್ಲ ಎಂದು ಷಡಾಕ್ಷರಿ ಅವರು ಸ್ಪಷ್ಟಪಡಿಸಿದ್ದಾರೆ.

ʻʻನನ್ನ ಮೇಲೆ ಕೆಲ ಆರೋಪಗಳಿವೆ ಅಂತ ಸಚಿವರು ಪತ್ರ ಬರೆದಿದ್ದಾರೆ. ಆದರೆ ಆ ಎಲ್ಲ ಆರೋಪಗಳು ಸುಳ್ಳು. ಈಗಾಗಲೇ ಲೋಕಾಯುಕ್ತ ಈ ಬಗ್ಗೆ ತನಿಖೆ ನಡೆಸಿ ನನಗೆ ಕ್ಲೀನ್‌ ಚಿಟ್‌ ನೀಡಿದೆ. ಇದನ್ನು ತಿಳಿದೂ ಸಚಿವರು ಯಾಕೆ ಪತ್ರ ಬರೆದರೋ ಗೊತ್ತಿಲ್ಲʼʼ ಎಂದು ಷಡಾಕ್ಷರಿ ಹೇಳಿದ್ದಾರೆ.

ʻʻಶಿವಮೊಗ್ಗ ದಲ್ಲಿ ನನ್ನದಾದ ಒಂದು ಅಡಿ ಜಾಗವೂ ಇಲ್ಲ. ಇನ್ನು ಲೇಔಟ್‌ಗೆ ಮಣ್ಣು ಹೇಗೆ ಹೊಡೆಯಲಿ? ಅಷ್ಟಾದರೂ ಈ ಆರೋಪಗಳಿಂದ ಮುಕ್ತನಾಗಿದ್ದೇನೆʼʼ ಎಂದಿರುವ ಅವರು, ಈ ರೀತಿ ಆರೋಪಗಳು ಬಂದಾಗ, ಪತ್ರ ಬಂದಾಗ ಮುಖ್ಯಮಂತ್ರಿಗಳು ನನ್ನ ಬಳಿ ವಿವರಣೆ ಕೇಳಿದರೆ ಖಂಡಿತವಾಗಿಯೂ ಕೊಡುತ್ತಿದ್ದೆʼʼ ಎಂದಿದ್ದಾರೆ.

ಈಗಲೂ ಕಾಲ ಮಿಂಚಿಲ್ಲ. ನಾನು ಸಿಎಂ ಭೇಟಿ ಮಾಡ್ತೀನಿ. ವರ್ಗಾವಣೆ ಮರುಪರಿಶೀಲನೆ ಮಾಡುವಂತೆ ಮನವಿ ಮಾಡ್ತೀನಿ. ಸಿಎಂ ಸಮಸ್ಯೆ ಬಗೆಹರಿಸದಿದ್ರೆ ಮುಂದಿನ ಕಾನೂನು ಹೋರಾಟ ಇದ್ದೇ ಇದೆ. ಆದರೆ, ಎಲ್ಲವನ್ನೂ ಶಾಂತಿ, ಸಮಾಧಾನ, ಪ್ರೀತಿಯಿಂದ ಎದುರಿಸಬೇಕು ಎನ್ನುವ ನಿಲುವು ನನ್ನದು. ಹಾಗಾಗಿ ಸರಿಯಾದ ಕ್ರಮವನ್ನು ಪಾಲಿಸಿಕೊಂಡೇ ಮುಂದೆ ಹೋಗುತ್ತೇನೆ. ಅವರಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡುತ್ತೇನೆʼʼ ಎಂದು ಷಡಾಕ್ಷರಿ ಹೇಳಿದ್ದಾರೆ.

Exit mobile version