ಬೆಂಗಳೂರು: ದ್ವಿಚಕ್ರ ವಾಹನಗಳು ಹಾಗೂ ನಾಲ್ಕು ಚಕ್ರದ ವಾಹನಗಳಿಗಾಗಿ ಬೆಂಗಳೂರಿನಲ್ಲಿ ತನ್ನ ಮೊದಲ ಚಾರ್ಜಿಂಗ್ (Ev Charging Station) ಕೇಂದ್ರಗಳನ್ನು ಆರಂಭಿಸುವ ಮೂಲಕ ‘ಶೆಲ್’ ಕಂಪನಿಯು ಭಾರತದಲ್ಲಿ ವಿದ್ಯುತ್ ಚಾಲಿತ (ಇ.ವಿ.) ವಾಹನಗಳ ಚಾರ್ಜಿಂಗ್ ಉದ್ಯಮವನ್ನು ಪ್ರವೇಶಿಸಿದೆ. ಶೆಲ್ ಕಂಪನಿಯು ಈಗ ವಿಶ್ವದಲ್ಲಿ ಸುಮಾರು ಒಂದು ಲಕ್ಷ ಚಾರ್ಜಿಂಗ್ ಕೇಂದ್ರಗಳನ್ನು ಹೊಂದಿದೆ. ಭಾರತದಲ್ಲಿ 2030ರೊಳಗೆ ಒಟ್ಟು 10 ಸಾವಿರಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸುವ ಆಲೋಚನೆ ಹೊಂದಿದೆ.
ಶೆಲ್ ಚಾರ್ಜಿಂಗ್ ಕೇಂದ್ರಗಳು ಸುರಕ್ಷಿತ, ಪರಿಸರಸ್ನೇಹಿ ಮತ್ತು ಏಕೀಕೃತ ಸೇವೆಗಳನ್ನು ಗ್ರಾಹಕರಿಗೆ ಒದಗಿಸಲಿವೆ. ಶೆಲ್ ರೀಚಾರ್ಜ್ ಕೇಂದ್ರಗಳಲ್ಲಿ ಬಳಕೆಯಾಗುವ ವಿದ್ಯುತ್ ಶೇಕಡ 100 ರಷ್ಟು ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದನೆ ಆಗಿರುತ್ತದೆ. ಆರಂಭದ ಮೊದಲ ಹಂತವಾಗಿ ಶೆಲ್ ಕಂಪನಿಯು, ಬೆಂಗಳೂರಿನ ಯಶವಂತಪುರ, ಮಾರತಹಳ್ಳಿ, ಹಳೆ ಮದ್ರಾಸ್ ರಸ್ತೆ, ಬ್ರೂಕ್‌ಪೀಲ್ಡ್ ಮತ್ತು ಕನಕಪುರ ರಸ್ತೆಯಲ್ಲಿ ಇರುವ ಬಂಕ್‌ಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸುವ ಯೋಜನೆ ಹೊಂದಿದೆ.
ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ಅಸ್ಸಾಂ ಮತ್ತು ಆಂಧ್ರಪ್ರದೇಶದ ಮಾರುಕಟ್ಟೆ ಮಾತ್ರವೇ ಅಲ್ಲದೆ ಹೊಸ ಮಾರುಕಟ್ಟೆಗಳಿಗೂ ಇ.ವಿ. ಚಾರ್ಜಿಂಗ್ ಮೂಲಸೌಕರ್ಯವನ್ನು ವಿಸ್ತರಿಸುವ ಆಲೋಚನೆಯನ್ನು ಶೆಲ್ ಹೊಂದಿದೆ. ಶೆಲ್ ಪೆಟ್ರೋಲ್ ಬಂಕ್, ಜನರು ಹೆಚ್ಚಾಗಿ ಭೇಟಿ ನೀಡುವ ಸ್ಥಳಗಳು, ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್‌ಗಾಗಿಯೇ ಸ್ಥಾಪಿಸಲಾಗಿರುವ ಹಬ್‌ಗಳು, ಮನೆಗಳು, ಹೋಟೆಲ್ ಅಥವಾ ರೆಸ್ಟೋರೆಂಟ್‌ನಂಥ ಸ್ಥಳಗಳಲ್ಲಿ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡಲಾಗಿರುವ ಚಾರ್ಜಿಂಗ್ ಸೌಲಭ್ಯವನ್ನು ಕಂಪನಿಯು ಒದಗಿಸಲಿದೆ.
ಜನರು ಹೆಚ್ಚಾಗಿ ಭೇಟಿ ನೀಡುವ ಸ್ಥಳಗಳಲ್ಲಿ ಹಾಗೂ ಇ.ವಿ. ಚಾರ್ಜಿಂಗ್‌ಗಾಗಿಯೇ ಇರುವ ಹಬ್‌ಗಳಲ್ಲಿ ಶೆಲ್ ಕಂಪನಿಯು 100 ಕಿಲೊ ವ್ಯಾಟ್ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಡಿ.ಸಿ. (ಡೈರೆಕ್ಟ್ ಕರೆಂಟ್) ಫಾಸ್ಟ್ ಚಾರ್ಜರ್ ಅಳವಡಿಸಲಿದೆ. ಇದರಿಂದಾಗಿ ವಾಹನಗಳನ್ನು ಬೇಗನೆ ಚಾರ್ಜ್ ಮಾಡಿಕೊಳ್ಳಲು ಸಾಧ್ಯವಾಗಲಿದೆ.
ರಿಚಾರ್ಜ್ ಹೇಗೆ?
ಗ್ರಾಹಕರು ಈ ಚಾರ್ಜಿಂಗ್ ಸೌಲಭ್ಯವನ್ನು ‘ಶೆಲ್ ರೀಚಾರ್ಜ್ ಇಂಡಿಯಾ’ ಆ್ಯಪ್ ಮೂಲಕ ಪಡೆದುಕೊಳ್ಳಬಹುದು. ಈ ಆ್ಯಪ್ ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಸ್ಮಾರ್ಟ್‌ಫೋನ್‌ಗಳಿಗೆ ಲಭ್ಯವಿದೆ. ಈ ಆ್ಯಪ್ ಮೂಲಕ ಸಮೀಪದ ಚಾರ್ಜಿಂಗ್ ಕೇಂದ್ರ ಎಲ್ಲಿಗೆ ಎಂಬುದನ್ನು ನೋಡಲು ಸಾಧ್ಯ. ವಾಹನವನ್ನು ವಿದ್ಯುತ್ ಯೂನಿಟ್, ಬ್ಯಾಟರಿ ಪರ್ಸೆಂಟೇಜ್ ತೋರಿಸುತ್ತದೆ. ಅಲ್ಲದೆ, ಸಮಯದ ಆಧಾರದಲ್ಲಿ ಚಾರ್ಜ್ ಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ತ್ವರಿತವಾಗಿ ಹಣ ಪಾವತಿಸಲು ಸಹ ಈ ಆ್ಯಪ್ ಮೂಲಕ ಸಾಧ್ಯವಿದೆ. ಬ್ಯಾಟರಿ ಎಷ್ಟು ಚಾರ್ಜ್ ಆಗಿದೆ ಎಂಬುದಾಗಿಯೂ ತಿಳಿದುಕೊಳ್ಳುವುದಕ್ಕೆ ಸಾಧ್ಯವಿದೆ.
ಶೆಲ್ ಮೊಬಿಲಿಟಿ ಇಂಡಿಯಾ ನಿರ್ದೇಶಕ ಸಂಜಯ್ ವರ್ಕೆ ಮಾತನಾಡಿ, ‘ಸೇವಾ ಕೇಂದ್ರಿತ ಹಾಗೂ ಗ್ರಾಹಕ ಕೇಂದ್ರಿತ ಕಂಪನಿಯಾಗಿ ನಾವು ವಿದ್ಯುತ್ ಚಾಲಿತ ವಾಹನಗಳ ಮಾಲೀಕರಿಗಾಗಿ ವಿಶ್ವದರ್ಜೆಯ ಸೌಲಭ್ಯವನ್ನು ನಮ್ಮ ಪರಿಣತಿ ಹಾಗೂ ಸಾಮರ್ಥ್ಯವನ್ನು ಬಳಸಿ ಅಭಿವೃದ್ಧಿಪಡಿಸಿದ್ದೇವೆ. ಶೆಲ್ ರಿಚಾರ್ಜ್ ಯೋಜನೆಯು ಗ್ರಾಹಕರಿಗೆ ಅತ್ಯಂತ ಸುರಕ್ಷಿತವಾದ, ಪರಿಸರ ಪೂರಕವಾದ ಮತ್ತು ಏಕೀಕೃತವಾದ ಸೇವೆಗಳನ್ನು ಒದಗಿಸುತ್ತದೆ,” ಎಂದು ಹೇಳಿದ್ದಾರೆ.
ಇದನ್ನೂ ಓದಿ | XUV 400 | ಮಹೀಂದ್ರಾದ ಮೊಟ್ಟ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ; ಏನೆಲ್ಲ ಫೀಚರ್‌ಗಳಿವೆ?