Site icon Vistara News

Shivamogga Clash | ಸರ್ಕಾರವನ್ನು ಬಲವಾಗಿ ಸಮರ್ಥಿಸಿಕೊಂಡ ಕೆ.ಎಸ್‌. ಈಶ್ವರಪ್ಪ

ಈಶ್ವರಪ್ಪ

ಬೆಂಗಳೂರು: ಸ್ವಾತಂತ್ರ್ಯ ವೀರ ಸಾವರ್ಕರ್‌ ಹಾಗೂ ಟಿಪ್ಪು ಸುಲ್ತಾನ್‌ ಭಾವಚಿತ್ರ ವಿಚಾರದಲ್ಲಿ ಶಿವಮೊಗ್ಗದಲ್ಲಿ ಗಲಭೆ (Shivamogga Clash) ನಡೆದ ಹಿನ್ನೆಲೆಯಲ್ಲೆ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಹಿಂದೆ ನಡೆದ ಬಿಜೆಪಿ ಕಾರ್ಯಕರ್ತರ ಆಕ್ರೋಶ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವನ್ನು ಬಲವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ರೇಸ್‌ಕೋರ್ಸ್‌ ನಿವಾಸಕ್ಕೆ ಆಗಮಿಸಿದ ಈಶ್ವರಪ್ಪ ಸುಮಾರು ಹೊತ್ತು ಚರ್ಚಿಸಿದರು. ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಶಿವಮೊಗ್ಗ ಪ್ರಕರಣದಲ್ಲಿ 6 ಜನ ಗೂಂಡಾಗಳು ಪ್ರೇಮ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರೇಮ್ ಸಿಂಗ್ ಆಸ್ಪತ್ರೆಯಲ್ಲಿದ್ದಾನೆ. ಅವನು ಸಾವು ಬದುಕಿನ ಮಧ್ಯೆ ಹೊರಾಟ ಮಾಡುತ್ತಾ ಇದ್ದಾನೆ ಎಂದೂ ವೈದ್ಯರು ಹೇಳಿದ್ದಾರೆ. ಏನೂ ಹೇಳುವುದಕ್ಕೆ ಆಗುವುದಿಲ್ಲ ಎಂದೂ ತಿಳಿಸಿದ್ದಾರೆ ಎಂದರು.

ಆರೋಪಿಗಳ ಬಂಧನ ಹಾಗೂ ಗುಂಡೇಟಿನ ಕುರಿತು ಪ್ರತಿಕ್ರಿಯಿಸಿ, ಈವರೆಗೆ ಮೂವರನ್ನು ಬಂಧನ ಮಾಡಲಾಗಿದ, ಇನ್ನೂ ಮೂವರು ಸಿಕ್ಕಿಲ್ಲ. ನಮ್ಮ ಶಿವಮೊಗ್ಗ ಜನ ಶಾಂತಿಪ್ರಿಯರ ಊರು. ಹೊರಗಡೆಯಿಂದ ಬಂದ ಜನರಿಂದ ಈ ಕೃತ್ಯ ನಡೆದಿದೆ. ಈಗ ಈ ಘಟನೆ ಬಗ್ಗೆ ಸಿಎಂ ಜತೆ ಚರ್ಚೆ ನಡೆಸಿದ್ದೇನೆ. ಈ ಘಟನೆ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸಿಎಂ ಹಾಗೂ ಗೃಹ ಸಚಿವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ‌. ಕೃತ್ಯ ಎಸಗಿದವರನ್ನು ಕೂಡಲೇ ಬಂಧಿಸುವ ಕೆಲಸವನ್ನು ಸರ್ಕಾರ ಮಾಡಿದೆ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತಿದೆ. ಪೊಲೀಸ್ ಇಲಾಖೆ ಸಾಕಷ್ಟು ಶ್ರಮ ಹಾಕಿ ಕೆಲಸ ಮಾಡುತ್ತಿದ್ದಾರೆ. ಇಷ್ಟೆಲ್ಲ ಘಟನೆ ಆದರೂ ಎಲ್ಲಿಯೂ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಸರ್ಕಾರ ಹಾಗೂ ಪೊಲೀಸರನ್ನು ಬಲವಾಗಿ ಸಮರ್ಥನೆ ಮಾಡಿಕೊಂಡರು.

ಕೆಲವು ಮುಸ್ಲಿಂ ಗೂಂಡಾಗಳಿಂದ ಈ ರೀತಿ ಆಗುತ್ತಿದೆ. ಮುಸ್ಲಿಂ ನಾಯಕರು ಅಂಥವರನ್ನು ಕರೆದು ಬುದ್ಧಿ ಹೇಳಬೇಕು. ಇಲ್ಲವೆಂದರೆ ಅಂತಹ ಗೂಂಡಾಗಳನ್ನು ಸರ್ಕಾರ ಹಾಗೂ ಹಿಂದು ಸಮಾಜವೇ ನೋಡಿಕೊಳ್ಳುತ್ತದೆ. ಈ ಘಟನೆಯಲ್ಲಿ ಭಾಗಿಯಾದವನು ಎಸ್‌ಡಿಪಿಐ ಕಾರ್ಯಕರ್ತ ಹಾಗೂ ಕಾಂಗ್ರೆಸ್‌ ಪಾಲಿಕೆ ಸದಸ್ಯೆಯ ಪತಿ. ಎಸ್‌ಡಿಪಿಐ ಬ್ಯಾನ್‌ ಮಾಡುವ ಕುರಿತೂ ಸಿಎಂ ಜತೆಗೆ ಚರ್ಚೆ ಮಾಡಿದ್ದೇನೆ. ಶೀಘ್ರವೇ ಇದು ಕಾರ್ಯರೂಪಕ್ಕೆ ಬರುತ್ತದೆ ಎಂಬ ನಂಬಿಕೆ ಇದೆ ಎಂದರು.

ಮಾಧುಸ್ವಾಮಿ ಹೇಳಿದ್ದು ತಪ್ಪು

ಸರ್ಕಾರ ನಡೆಯುತ್ತಾ ಇಲ್ಲ, ಎಲ್ಲವನ್ನೂ ಮ್ಯಾನೇಜ್‌ ಮಾಡುತ್ತಿದೆ ಎಂಬ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಕೆ.ಎಸ್‌. ಈಶ್ವರಪ್ಪ, ಮಾಧುಸ್ವಾಮಿ ಈ ರೀತಿ ಹೇಳಿರುವುದು ನಿಜಕ್ಕೂ ತಪ್ಪು. ಅವರು‌ ಕಾನೂನನ್ನು ಚೆನ್ನಾಗಿ ಅರಿತಿರುವರು. ಅವರು ಈ ಮಾತನ್ನು ಯಾವ ಅರ್ಥದಲ್ಲಿ ಹೇಳಿದ್ದಾರೆಯೋ ಗೊತ್ತಿಲ್ಲ. ಆದರೆ ನಾನು ಅವರ ಜತೆ ಈ ಬಗ್ಗೆ ಖಾಸಗಿಯಾಗಿ ಮಾತಾಡುತ್ತೇನೆ ಎಂದು ತಿಳಿಸಿದರು.

ಗಣಪತಿ ಉತ್ಸವಕ್ಕೆ ಅಡ್ಡ ಬಂದರೆ ಸಹಿಸುವುದಿಲ್ಲ

ಚಾಮರಾಜಪೇಟೆ ಮೈದಾನದಲ್ಲಿ ಗಣಪತಿ ಉತ್ಸವ ಆಚರಿಸುವ ಕುರಿತು ಪ್ರತಿಕ್ರಿಯಿಸಿದ ಕೆ.ಎಸ್‌. ಈಶ್ವರಪ್ಪ, ಹಿಂದುಗಳ ಗಣಪತಿ ಉತ್ಸವದ ಅಡ್ಡ ಬಂದರೆ ಸರಿಯಿರುವುದಿಲ್ಲ. ನೀವು ನಿಮ್ಮ ಹಬ್ಬ ಮಾಡುವುದಿಲ್ಲವೇ? ನಾವು ಬೆಂಬಲ ಅದಕ್ಕೆ ಬೆಂಬಲ ಕೊಡುವುದಿಲ್ಲವೇ? ನಮ್ಮ ಹಬ್ಬದ ತಂಟೆಗೆ ಬರಬೇಡಿ ಎಂದರು.

ಇದನ್ನೂ ಓದಿ | Shimogga tense | ಶಿವಮೊಗ್ಗ ಪ್ರಕರಣದ ಎಫೆಕ್ಟ್‌ ಬೆಂಗಳೂರಿಗೆ ತಟ್ಟದಂತೆ ಕಟ್ಟೆಚ್ಚರ

Exit mobile version