ಬೆಂಗಳೂರು: ನಮ್ಮಲ್ಲಿ ಚಾಕು, ಚೂರಿ ಇದೆ, ಹಿಂದುಗಳ ರಕ್ತ ಕುಡೀತೇವೆ (Will drink hindus blood) ಅಂತ ನೀವೇನಾದರೂ ಹೊರಟಿದ್ದರೆ ನೆನಪಿಟ್ಟುಕೊಳ್ಳಿ, ನಾವೇನು ಚಾಕು ಚೂರಿನಾ ಬರೀ ಉಳ್ಳಾಗಡ್ಡಿ ಹಚ್ಚಲು ಇಟ್ಟುಕೊಂಡಿಲ್ಲ (We are using knife not only to cut onions) ಎಂದು ಧಮ್ಕಿ ಹಾಕಿದ್ದಾರೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda pateel Yatnal).
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬುಧರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 11 ಕಡೆ ಗಣೇಶ ಚತುರ್ಥಿ ಕಾರ್ಯಕ್ರಮಕ್ಕೆ ಹೋಗಿದ್ದೇನೆ. ಹಿಂದೂಗಳಿಂದ ಕಲ್ಲೆಸೆತ, ಚಾಕು, ಚೂರಿ ಪ್ರದರ್ಶನ ನಡೆದಿಲ್ಲ. ಪ್ರಚೋದನೆಯ ಘೋಷಣೆ ಕೇಳಿಲ್ಲ. ಆದರೆ, ಶಾಂತಿ ಸಂದೇಶ ಕೊಡುವ ಧಾರ್ಮಿಕ ಕಾರ್ಯಕ್ರಮದಲ್ಲಿ (Shivamogga violence) ನಮ್ಮೆಲ್ಲರನ್ನು ನಾಶ ಮಾಡುವುದಾಗಿ, ರಕ್ತ ಕುಡಿಯುವುದಾಗಿ ತಿಳಿಸಿದ್ದಾರೆ. ಇದು ಖಂಡನೀಯ ಎಂದರು.
ಕೇರಳ, ಕಾಶ್ಮೀರ ಇಸ್ಲಾಮಿಕ್ ರಾಜ್ಯವಾದ ಮಾದರಿಯಲ್ಲೇ ಕರ್ನಾಟಕದಲ್ಲೂ ಅದೇ ವಾತಾವರಣ ಸೃಷ್ಟಿ ಮಾಡಲು ಮುಸ್ಲಿಮರನ್ನು ಪ್ರಚೋದನೆ ಮಾಡುವ ಕೆಲಸ ಸಿದ್ದರಾಮಯ್ಯರ ಸರಕಾರ ಇವತ್ತು ಮಾಡುತ್ತಿದೆ ಎಂದು ಆಕ್ಷೇಪಿಸಿದರು.
ಒಂದಿಷ್ಟು ಜನರು ಅಟ್ಟಹಾಸದಿಂದ ಮೆರೆಯಬೇಕಿದ್ದರೆ ಈ ಸರಕಾರ ಹಿಂದೂಗಳ ರಕ್ಷಣೆ ಮಾಡುತ್ತಿದೆಯೇ ಎಂದು ಕೇಳಿದರು. ಪ್ರಿಯಾಂಕ್ ಖರ್ಗೆಗೆ ನಾಚಿಕೆ ಆಗಬೇಕು. ಖರ್ಗೆಯವರು ಇದಕ್ಕೆ ಉತ್ತರ ಕೊಡಬೇಕು. ಹಿಂದೂಗಳ, ಸನಾತನದ ಬಗ್ಗೆ ಬಂದರೆ ಇವರು ಅಪ್ಪ- ಮಗ ಕೂಡಿ ಹೇಳಿಕೆ ಕೊಡುತ್ತಾರೆ. ಕೋಲಾರದಲ್ಲಿ ತಮ್ಮ ಸಮುದಾಯದ ಸಂಸದರ ವಿರುದ್ಧ ಎಸ್ಪಿ ಉದ್ಧಟತನದಿಂದ ವರ್ತಿಸಿದರೆ, ಕುತ್ತಿಗೆ ಪಟ್ಟಿ ಹಿಡಿದು ಹೊರಹಾಕಿದರೆ ಖರ್ಗೆ ಮಾತನಾಡಿಲ್ಲ. ಇದನ್ನು ತಾಲಿಬಾನಿ ಸರಕಾರ ಎನ್ನದಿರಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.
ರಾಜ್ಯದಲ್ಲಿ ಹಿಂದುಗಳ ರಕ್ಷಣೆ ಮಾಡಲು ಯಾರಿದ್ದಾರೆ?
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಕರ್ನಾಟಕದಲ್ಲಿ ತಾಲಿಬಾನ್ ಸರಕಾರ ಅಧಿಕಾರ ವಹಿಸಿಕೊಂಡಂತಾಗಿದೆ ಎಂದು ಹೇಳಿದ ಅವರು, ಇವತ್ತು ನಡೆಯುತ್ತಿರುವ ಘಟನೆಗಳಿಂದ ಕರ್ನಾಟಕದಲ್ಲಿ ಹಿಂದೂಗಳ ರಕ್ಷಣೆ ಮಾಡುವವರು ಯಾರು ಎಂಬ ಪ್ರಶ್ನೆ ಉದ್ಭವಿಸಲು ಕಾರಣವಾಗಿದೆ ಎಂದು ತಿಳಿಸಿದರು.
ಹೊಸ ಸರಕಾರ ಬಂದ ಬಳಿಕ ಮತಾಂಧ ಮುಸ್ಲಿಂ ಯುವಕರು ಪಾಕಿಸ್ತಾನದ ಪರ ಘೋಷಣೆ ಕೂಗುವುದು, ನಮ್ಮ ದೇವಸ್ಥಾನಗಳ ಮುಂದೆ ಗೋವಿನ ತಲೆ ತಂದಿಡುವುದು ಹೆಚ್ಚಾಗಿದೆ. ಇನ್ನು ಮೇಲೆ ನಮ್ಮ ಸರಕಾರ ಇದೆ; ಮುಸ್ಲಿಂ ಸರಕಾರ ಇದೆ. ನಮಗೆ ಯಾರೂ ಏನೂ ಮಾಡುವುದಿಲ್ಲ ಎಂಬ ಸ್ಥಿತಿ ಬಂದಿದೆ ಎಂದರು.
ರಾಗಿಗುಡ್ಡದಲ್ಲಿ ಖಡ್ಗ ಪ್ರತಿಷ್ಠಾಪನೆಗೆ ಬಿಟ್ಟಿದ್ಯಾಕೆ?
ಶಿವಮೊಗ್ಗದ ರಾಗಿಗುಡ್ಡದಲ್ಲಿ ಸಂಭಾವ್ಯ ಗಲಭೆಯ ಪೂರ್ಣ ಮಾಹಿತಿ ಪೊಲೀಸ್ ಇಲಾಖೆಗೆ ಇತ್ತು. ಅನುಮತಿ ಇಲ್ಲದೆ ಬೃಹತ್ ಖಡ್ಗ ಪ್ರತಿಷ್ಠಾಪಿಸಿದ್ದಾರೆ. ಅಖಂಡ ಭಾರತದ ನಕ್ಷೆಯಲ್ಲಿ ಹಸಿರು ಬಣ್ಣ ಬಳಿದು ಔರಂಗಜೇಬನನ್ನು ವೈಭವೀಕರಿಸಿದ್ದಾರೆ. ಇಷ್ಟೆಲ್ಲ ಆಗಲು ಪೊಲೀಸ್ ಇಲಾಖೆ ಬಿಟ್ಟಿದ್ಯಾಕೆ ಎಂದು ಕೇಳಿದರು.
ಗೃಹ ಸಚಿವ ಪರಮೇಶ್ವರ್ ಬಗ್ಗೆ ಗೌರವ ಇತ್ತು
ಗೃಹ ಸಚಿವರ ಬಗ್ಗೆ ಹಿಂದೆ ಗೌರವ ಇತ್ತು. ಅವರು ಈ ಬಾರಿ ಸಚಿವರಾದ ಬಳಿಕ ನೀಡುತ್ತಿರುವ ಹೇಳಿಕೆಗಳು ಅವರ ವೈಫಲ್ಯವನ್ನು ತೋರಿಸುತ್ತವೆ. ಇದನ್ನು ಕ್ಷುಲ್ಲಕ ಘಟನೆ ಎನ್ನುತ್ತಾರೆ; ಸಹಜವಾಗಿ ನಡೆಯುತ್ತವೆ ಎನ್ನುತ್ತಾರೆ. ಒಬ್ಬ ಎಸ್ಪಿಯನ್ನೇ ಹೊಡೆಯಲು ಬರುವ ಪರಿಸ್ಥಿತಿ ನಿರ್ಮಾಣವಾದರೆ ಪೊಲೀಸರಲ್ಲಿ ನೈತಿಕ ಬಲ ಉಳಿಯಲು ಸಾಧ್ಯವೇ? ಪೊಲೀಸರಲ್ಲಿ ಲಾಠಿ ಇದೆ, ರಿವಾಲ್ವರ್, ಶಸ್ತ್ರಾಸ್ತ್ರಗಳಿದ್ದರೂ ಕಲ್ಲೆಸೆತ ಕಂಡರೂ ಮೌನ ಪ್ರೇಕ್ಷಕರಾದುದು ಯಾಕೆ? ಅವರಿಗೆ ಅಧಿಕಾರ ಕೊಟ್ಟಿಲ್ಲವೇ ಎಂದು ಗೃಹ ಸಚಿವರು ಹೇಳಲಿ ಎಂದು ಒತ್ತಾಯಿಸಿದರು.
ಭಯೋತ್ಪಾದಕರನ್ನು ಬ್ರದರ್ಸ್ ಅಂದವನಿಗೆ ನಾಚಿಕೆ ಆಗೋದಿಲ್ವೇ?
ಮಂಗಳೂರಿನಲ್ಲಿ ಉಗ್ರನೊಬ್ಬ ಕುಕ್ಕರ್ ಬ್ಲಾಸ್ಟ್ ಮಾಡಿದಾಗ ಬಂಧಿತರನ್ನು ಇನ್ನೊಸೆಂಟ್ ಬ್ರದರ್ಸ್ ಎಂದಿದ್ದ ಪುಣ್ಯಾತ್ಮನಿಗೆ ನಾಚಿಕೆ ಆಗುವುದಿಲ್ಲವೇ? ಎಂದು ಯತ್ನಾಳ್ ಪ್ರಶ್ನಿಸಿದರು ಕರ್ನಾಟಕದಲ್ಲಿ ಐಸಿಸ್ ಚಟುವಟಿಕೆಯನ್ನು ಪ್ರತಿಷ್ಠಾಪಿಸಲು ಪ್ರಯೋಗ ನಡೆದಿದೆ ಎಂದು ಎನ್‍ಐಎ ಹೇಳಿದೆ. ಹುಬ್ಬಳ್ಳಿಯಲ್ಲಿ ಮಂಗಳವಾರ ದೆಹಲಿ ಪೊಲೀಸರು 3 ಜನರನ್ನು ಬಂಧಿಸಿದ್ದಾರೆ. ಪೊಲೀಸ್ ಠಾಣೆಗೆ ನುಗ್ಗಿ ಒಬ್ಬ ಪೊಲೀಸನ ಕತ್ತನ್ನು ಮುರಿದು, ಮಹಿಳಾ ಪೊಲೀಸ್ ಮೇಲೆ ದೌರ್ಜನ್ಯ, ಠಾಣೆಗೆ ಬೆಂಕಿ ಹಾಕಿದ ಪ್ರಕರಣ ವಾಪಸ್ ಪಡೆಯಲು ಸಚಿವರೇ ಪತ್ರ ಬರೆದಿದ್ದಾರೆ. ಈ ರೀತಿ ಆದರೆ ಪೊಲೀಸರು ಕೆಲಸ ಮಾಡಲು ಸಾಧ್ಯವೇ ಎಂದು ಕೇಳಿದರು.
ಕೆಜೆ ಹಳ್ಳಿ, ಡಿಜೆ ಹಳ್ಳಿಯಲ್ಲಿ ನಡೆದ ದಲಿತ ಶಾಸಕನ ಮನೆ ಮೇಲಿನ ಬೆಂಕಿ ಪ್ರಕರಣವನ್ನೂ ವಾಪಸ್ ಪಡೆಯಲು ಮುಂದಾಗಿದ್ದಾರೆ. ನೀವು ಕೇವಲ ಮುಸ್ಲಿಮರ ಮತದಿಂದಲೇ ಅಧಿಕಾರಕ್ಕೆ ಬಂದಿದ್ದೀರಾ? ಮುಸ್ಲಿಮರಿಗಷ್ಟೇ ಸಬ್ಸಿಡಿ ನೀಡುತ್ತಿದ್ದೀರಲ್ಲವೇ ಎಂದು ಪ್ರಶ್ನೆಗಳನ್ನು ಮುಂದಿಟ್ಟರು.
ಅರೆಹುಚ್ಚನನ್ನು ಪ್ರಧಾನಿ ಮಾಡಲು ಹುಚ್ಚರ ಪ್ರಯತ್ನ
ಕೇವಲ ಲೋಕಸಭಾ ಚುನಾವಣೆ ಸಲುವಾಗಿ ಯಾವನೋ ಒಬ್ಬ ಅರೆಹುಚ್ಚನನ್ನು ಪ್ರಧಾನಿ ಮಾಡಬೇಕೆಂದು ಈ ಹುಚ್ಚರು ಕೂಡಿ ದೇಶ ಹಾಳು ಮಾಡಲು ಮುಂದಾಗಿದ್ದಾರೆ. ಇದಕ್ಕೆ ಈ ದೇಶದ ಜನರು ಅವಕಾಶ ಕೊಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಿಂದೂ, ಸನಾತನ ಧರ್ಮದ ಕುರಿತು ಡೆಂಗ್ಯೂ, ಮಲೇರಿಯಾ ಎನ್ನುವವರು ಕ್ರಾಸ್‍ಬ್ರೀಡ್‍ಗಳು, ಹಂದಿಮಿಶ್ರಿತ ಜರ್ಸಿ ಆಕಳಿನಂತೆ ಎಂದು ಟೀಕಿಸಿದರು. ಇದು ಅತಿರೇಕ ಆಗುತ್ತಿದೆ. ಇನ್ನು ಮುಂದೆ ನಡೆಯುವುದಿಲ್ಲ ಎಂದು ನುಡಿದರು.
ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸಿ.ಟಿ.ರವಿ, ಶಾಸಕ ಅರವಿಂದ ಬೆಲ್ಲದ್, ಮಾಜಿ ಶಾಸಕ ಪಿ.ರಾಜೀವ್, ವಿಧಾನಪರಿಷತ್ ಸದಸ್ಯ ಅ. ದೇವೇಗೌಡ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.