ಬೆಂಗಳೂರು: ವಾಣಿಜ್ಯ ಸಂಸ್ಥೆಗಳಿಗೆ 24/7 ಕಾರ್ಯಾಚರಣೆ ನಡೆಸಲು ಅನುಮತಿ ಕೊಡಲು ಸಾಧ್ಯವಿಲ್ಲ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಮತ್ತು ಭದ್ರತೆಯ ದೃಷ್ಟಿಯಿಂದ ಈ ನಿರ್ಧಾರ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ದಿನದ 24 ಗಂಟೆಯೂ ಹೋಟೆಲ್ ತೆರೆಯೋ ವಿಚಾರವಾಗಿ ಈಗಾಗಲೇ ಒಮ್ಮೆ ಪೊಲೀಸ್ ಇಲಾಖೆ ಅನುಮತಿ ನೀಡಿತ್ತು. ಆದರೆ ಈಗ ಪೊಲೀಸ್ ಇಲಾಖೆಯೂ ನಿರಾಕರಿಸುತ್ತಿದೆ. 24/7 ಹೋಟೆಲ್ ತೆರೆಯಲು 15 ದಿನದೊಳಗೆ ಅನುಮತಿ ನೀಡದಿದ್ದರೆ ಸಿಎಂ ಭೇಟಿ ಮಾಡಿ ದೂರು ನೀಡುವುದಾಗಿ ಹೋಟೇಲ್ ಮಾಲೀಕರು ತಿಳಿಸಿದ್ದಾರೆ.
ಹೋಟೆಲ್‌ಗಳು 24/7 ತೆರೆಯಲು ಮುಂಬೈಯಲ್ಲಿ ಸರ್ಕಾರದ ಅನುಮತಿ ಇರುವಂತೆಯೇ ಬೆಂಗಳೂರಿನಲ್ಲೂ ಅವಕಾಶ ನೀಡಬೇಕು ಎಂದು ಪೊಲೀಸ್ ಇಲಾಖೆಯನ್ನು ಹೋಟೆಲ್ ಮಾಲೀಕರು ಈ ಹಿಂದೆ ಒತ್ತಾಯಿಸಿದ್ದರು. ಹೋಟೆಲ್ ಮಾಲೀಕರ ಮನವಿಯನ್ನು ಸ್ವೀಕರಿಸಿದ್ದ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಹೋಟೆಲ್ ಓಪನ್ ಇರುವುದಕ್ಕೆ ಅನುಮತಿ ನೀಡಿದ್ದರು. ಹೋಟೆಲ್‌ನಲ್ಲಿ 10 ಜನರಿಗಿಂತ ಹೆಚ್ಚು ಸಿಬ್ಬಂದಿ ಇದ್ದರೆ ಮಾತ್ರ ಹೋಟೆಲ್ ತೆರೆದಿರಬೇಕು ಎಂದು ಹೇಳಿದ್ದರು. ಗ್ರಾಹಕರ ಅನುಕೂಲಕ್ಕಾಗಿ ಹೊಟೇಲ್‌ನಲ್ಲಿ ಸೇವೆ ಲಭ್ಯವಿರಲಿದೆ ಎಂದು ಪ್ರತಾಪ್ ರೆಡ್ಡಿ ತಿಳಿಸಿದ್ದರು.
ಆದರೆ ಇದೀಗ ಇದೇ ರೀತಿ ಬೇಡಿಕೆಯನ್ನು ವಾಣಿಜ್ಯ ಸಂಸ್ಥೆಗಳು ಮುಂದಿಟ್ಟಿವೆ. ಈ ಕುರಿತಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ ಇ.ವಿ. ರಮಣ ರೆಡ್ಡಿ ಸಮ್ಮುಖದಲ್ಲಿ ಜೂನ್ 14 ರಂದು ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಮಾತನಾಡಿದ ವಿವಿಧ ಉದ್ಯಮಿಗಳು, 10 ಅಥವಾ ಅದಕ್ಕಿಂತ ಹೆಚ್ಚಿನ ವ್ಯಕ್ತಿಗಳು ಕಾರ್ಯನಿರ್ವಹಿಸುವ ಎಲ್ಲ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳನ್ನು 24/77 ತೆರೆಯಲು ಸರ್ಕಾರ ಅನುಮತಿ ನೀಡಿದೆ. ಆದರೆ, ಪೊಲೀಸರು ಕಳೆದ ಮೂರು ವರ್ಷಗಳಿಂದಲೂ ನಿಗದಿತ ಅವಧಿಗೂ ಮುನ್ನವೇ ಬಾಗಿಲು ಮುಚ್ಚಿಸುತ್ತಿದ್ದು, ಇದರಿಂದ ವ್ಯವಹಾರಕ್ಕೆ ನಷ್ಟ ಉಂಟಾಗುತ್ತಿದೆ. ನಮಗೆ, ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು ಅನುಮತಿ ನೀಡುವಂತೆ ಆಗ್ರಹಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಅಪರ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ, ವಾಣಿಜ್ಯ ಸಂಸ್ಥೆಗಳ ಒತ್ತಾಯವನ್ನು ಪರಿಗಣಿಸಿ, ಈ ಬಗ್ಗೆ ಪೊಲೀಸ್ ಇಲಾಖೆ, ಬಿಬಿಎಂಪಿ, ಕಾರ್ಮಿಕ ಇಲಾಖೆ, ಆಮದು ಮತ್ತು ರಫ್ತು ವಿಭಾಗದೊಂದಿಗೆ ಚರ್ಚಿಸಲಾಗಿದೆ. ಪ್ರಸ್ತುತ ಲಭ್ಯವಿರುವ ಪೊಲೀಸ್ ಇಲಾಖೆಯ ಸಂಪನ್ಮೂಲಗಳಿಂದ ದಿನ 24 ಗಂಟೆಗಳ ಕಾಲ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಕಷ್ಟ ಎಂದು ಚರ್ಚೆಯಲ್ಲಿ ತಿಳಿದುಬಂದಿದೆ. ಹೀಗಾಗಿ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಪೂರ್ಣಾವಧಿಯ ಕಾರ್ಯಾಚರಣೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ರಮಣ ರೆಡ್ಡಿ ತಿಳಿಸಿದರು.
ಆದರೆ, ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು, ಹೆದ್ದಾರಿಗಳು ಮುಂತಾದ ಜನಸಂದಣಿ ಸ್ಥಳಗಳಲ್ಲಿ 24/7 ಹೋಟೆಲ್‌ಗಳು ಹಾಗೂ ಇತರೆ ಅಂಗಡಿಗಳು ತೆರೆದಿರಲು ಅನುಮತಿ ನೀಡಲಾಗಿದೆ. ಬೆಂಗಳೂರು ನಗರದಲ್ಲಿ ಬೆಳಗ್ಗೆ 6 ರಿಂದ ರಾತ್ರಿ 1 ಗಂಟೆವರೆಗೆ ಕಾರ್ಯ ನಿರ್ವಹಿಸಲು ಅನುಮತಿ ಇದೆ ಎಂದು ರಮಣ ರೆಡ್ಡಿ ಹೇಳಿದರು.
ಇದನ್ನೂ ಓದಿ: Night life | ಬೆಂಗಳೂರಲ್ಲಿ ಮಧ್ಯರಾತ್ರಿವರೆಗೂ ಹೊಟೇಲ್ ಓಪನ್: ಎಷ್ಟೊತ್ತಿಗೆ ಕ್ಲೋಸ್?