ಬೆಂಗಳೂರು: ʼರಸ್ತೆಗುಂಡಿಮುಕ್ತ ನಗರʼ ಘೋಷಣೆಯನ್ನು ಜೂನ್ 6ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭರವಸೆ ನೀಡಿದ್ದಾರೆ. ದುರಸ್ತಿ ಕಾಮಗಾರಿ ಮಾಡಲಾಗುತ್ತಿದ್ದು, ಸರ್ಕಾರವು ಪಾಲಿಕೆಯ 110 ಹಳ್ಳಿಗಳ ವ್ಯಾಪ್ತಿಯಲ್ಲಿ ಜಲಮಂಡಳಿ ಕೈಗೊಂಡಿರುವ ಕಾಮಗಾರಿಯಿಂದ ಹಾಳಾದ ರಸ್ತೆ ಸರಿಪಡಿಸಲು ₹1 ಸಾವಿರ ಕೋಟಿ ನೀಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇಲ್ಲಿ ವರೆಗೆ 5,500 ಗುಂಡಿಗಳನ್ನು ಮುಚ್ಚಲಾಗಿದೆ. 5 ದಿನಗಳೊಳಗಾಗಿ ಬಾಕಿ 5,100 ಕ್ಕೂ ಅಧಿಕ ಗುಂಡಿಗಳನ್ನು ಮುಚ್ಚಲಾಗುವುದು ಎಂದು ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಬಿಬಿಎಂಪಿ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಮುಖ್ಯ ಇಂಜಿನಿಯರ್ ಬಿ.ಎಸ್. ಪ್ರಹ್ಲಾದ್ ರಸ್ತೆಗುಂಡಿ ಮುಚ್ಚುವ ಪೈಥಾನ್ ಯಂತ್ರ ನಿರ್ವಹಣೆ ಮಾಡುತ್ತಿದ್ದರು. ಪೈಥಾನ್ ಯಂತ್ರ ನೀಡಿದ ಸಂಸ್ಥೆ ನಿರ್ದೇಶಕರ ಮೇಲೆ ಹಲ್ಲೆ ಮಾಡಿರುವ ಆರೋಪ ಇವರ ವಿರುದ್ಧ ಕೇಳಿ ಬಂದಿದೆ. ಹೀಗಾಗಿ, ಪೈಥಾನ್ ಯಂತ್ರದ ನಿರ್ವಹಣೆಯ ಹೊಣೆಯನ್ನು ವಿಭಾಗದ ಮುಖ್ಯ ಮುಖ್ಯ ಯೋಜನಾ ಇಂಜಿನಿಯರ್ ಲೋಕೇಶ್‌ಗೆ ವಹಿಸಲಾಗಿದೆ. ಪ್ರಹ್ಲಾದ್ ವಿರುದ್ಧ ಕೈಗೊಂಡ ಕ್ರಮದ ಕುರಿತು ಮಾಹಿತಿ ನೀಡುವಂತೆ ಹೈಕೋರ್ಟ್ ಸೂಚಿಸಿದೆ. ಕಾವೇರಿ 5ನೇ ಹಂತದ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಹಾಳಾದ ರಸ್ತೆಗಳನ್ನು ಜಲಮಂಡಳಿಯೇ ದುರಸ್ತಿ ಮಾಡುತ್ತದೆ ಎಂದು ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಇದನ್ನೂ ಓದಿ: BBMP ನೂತನ ಮುಖ್ಯ ಆಯುಕ್ತರಿಂದ ಸಿಟಿ ರೌಂಡ್ಸ್: ಕಾಮಗಾರಿಗಳ ಪರಿಶೀಲಿಸಿದ ತುಷಾರ್ ಗಿರಿನಾಥ್