Site icon Vistara News

Siddaramaiah: ಗೋಮಾಳಗಳನ್ನು ಆರ್‌ಎಸ್‌ಎಸ್‌ಗೆ ನೀಡುತ್ತಿದೆ ಬಿಜೆಪಿ ಸರ್ಕಾರ: ಹಾಲು ಉತ್ಪಾದಕರ ಪರವಾಗಿ ಸಿದ್ದರಾಮಯ್ಯ ಬ್ಯಾಟಿಂಗ್‌

Siddaramaiah accuses BJP government of transferring government land to RSS

#image_title

ಬೆಂಗಳೂರು: ರಾಜ್ಯದ ಹಾಲು ಉತ್ಪಾದಕ ರೈತರು ಹಾಗೂ ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಭ್ರಷ್ಟ ಬಿಜೆಪಿಯೆ ನೇರ ಕಾರಣ ಎಂದಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, (Siddaramaiah) ಬಿಜೆಪಿ ಸರ್ಕಾರವು ಗೋಮಾಳಗಳನ್ನು ಆರ್‌ಎಸ್‌ಎಸ್‌ಗೆ ಪರಭಾರೆ ಮಾಡುತ್ತಿದೆ ಎಂದಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿದ್ದರಾಮಯ್ಯ, ಈ ಮಾರ್ಚ್‍ನಲ್ಲಿ ಪ್ರತಿ ದಿನ 99 ಲಕ್ಷ ಲೀಟರುಗಳಷ್ಟು ಹಾಲು ಸಂಗ್ರಹವಾಗಬೇಕಾಗಿದ್ದ ಕಡೆ ಕೇವಲ 71 ಲಕ್ಷ ಲೀಟರುಗಳಷ್ಟು ಹಾಲನ್ನು ಮಾತ್ರ ಕೆಎಂಎಫ್ ಸಂಗ್ರಹಿಸುತ್ತಿದೆ. ಇದೂ ಕೂಡ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಪ್ರಸ್ತುತ ಪ್ರತಿ ದಿನ ಸುಮಾರು 28 ಲಕ್ಷ ಲೀಟರುಗಳಷ್ಟು ಹಾಲಿನ ಉತ್ಪಾದನೆ ಕಡಿಮೆಯಾಗಿದೆ.

ಇದರಿಂದಾಗಿ ರಾಜ್ಯದ ಪಶುಪಾಲಕರಿಗೆ ಪ್ರತಿ ದಿನ ಸುಮಾರು 11 ಕೋಟಿ ರೂಪಾಯಿಗಳಷ್ಟು ಹಣ ಕೈತಪ್ಪಿ ಹೋಗುತ್ತಿದೆ. ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಸಂಸಾರಗಳನ್ನು ನಡೆಸಲು ಹೈನುಗಾರಿಕೆ ಒಂದು ಪ್ರಮುಖ ಸಾಧನವಾಗಿತ್ತು. ಇದಕ್ಕೆ ಯಾರು ಹೊಣೆ? ಕೇಂದ್ರ ಮತ್ತು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಮತ್ತು ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರ್ಕಾರಗಳ ಹಾದಿ ತಪ್ಪಿದ ಅಡ್ಡ ಕಸುಬಿ ನೀತಿಗಳೆ ನೇರ ಕಾರಣ ಇದಕ್ಕೆ ಕಾರಣವಲ್ಲವೆ?

ಗುಜರಾತ್ ಮೂಲದ ರಾಜಕಾರಣಿಗಳು ಮತ್ತು ವ್ಯಾಪಾರಿಗಳ ಕಣ್ಣು ನಮ್ಮ ಕೆಎಂಎಫ್ ಮೇಲೆ ಬಿದ್ದಾಗಿನಿಂದ ರಾಜ್ಯದ ಹೈನು ಉದ್ಯಮಕ್ಕೆ ಗರ ಬಡಿದಂತಾಗಿದೆ. ಇವರಿಂದಾಗಿ ರಾಜ್ಯದ ರೈತರಿಗೂ ಸಂಕಷ್ಟ ಬಂದೊದಗಿದೆ. ಕೊಳ್ಳುವ ಗ್ರಾಹಕರೂ ವಿಪರೀತ ಸಂಕಷ್ಟ ಅನುಭವಿಸುತ್ತಿದ್ದಾರೆ. ನಂದಿನಿ ಮಳಿಗೆಗಳಲ್ಲಿ ಕಲಬೆರಕೆ ತುಪ್ಪವೂ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಜನರು ದೂರುತ್ತಿದ್ದಾರೆ. ಜನರಿಗೆ ಉತ್ತಮ ನಂದಿನಿ ತುಪ್ಪ ಸೇರಿದಂತೆ ಗುಣಮಟ್ಟದ ಪದಾರ್ಥಗಳು ಸಿಗುತ್ತಿಲ್ಲ. ಕೊಳ್ಳುವ ಗ್ರಾಹಕರ ಕೈ ಸುಡುವಷ್ಟು ಮಟ್ಟಿಗೆ ಬೆಲೆಗಳು ಏರಿಕೆಯಾಗಿವೆ.

ಬಿಜೆಪಿಯ ದುಷ್ಟ ಆಡಳಿತದಿಂದಾಗಿ ನಮ್ಮ ನಾಡಿನ ಪ್ರತಿಷ್ಠಿತ ಸಂಸ್ಥೆಯಾದ ಕೆಂಎಂಎಫ್‍ಗೆ ಇಂದು ಈ ಗಂಡಾಂತರ ಬಂದೊದಗಿದೆ. ಕೇಂದ್ರದ ಮೋದಿ ಸರ್ಕಾರ ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್‍ಗಳಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ತಯಾರಿ ನಡೆಸಿತ್ತು. ರೈತರು ವಿರೋಚಿತ ಪ್ರತಿಭಟಿಸಿದ ಕಾರಣದಿಂದ ತಾತ್ಕಾಲಿಕವಾಗಿ ಮೋದಿ ಸರ್ಕಾರ ಹಿಂದೆ ಸರಿದಿದೆ.

ಈ ದುಷ್ಟ ಬಿಜೆಪಿ ಸರ್ಕಾರ ಸರ್ಕಾರಿ ಕಾವಲು ಜಮೀನುಗಳನ್ನು, ಡಿನೋಟಿಫೈ ಮಾಡಿ ಉಳ್ಳವರಿಗೆ, ಆರೆಸ್ಸೆಸ್ಸಿನವರಿಗೆ, ಬಂಡವಾಳಿಗರಿಗೆ ಹಂಚಲು ಪ್ರಾರಂಭಿಸಿದೆ. ಟಿಪ್ಪುಸುಲ್ತಾನನ ದೂರದೃಷ್ಟಿಯ ಕಾರಣದಿಂದ ಹಳೆ ಮೈಸೂರು ಭಾಗದಲ್ಲಿ ಲಕ್ಷಾಂತರ ಎಕರೆ ಭೂಮಿಯನ್ನು ‘ಅಮೃತ್ ಮಹಲ್ ಕಾವಲು’ಗಳೆಂದು ಮೀಸಲಿರಿಸಲಾಗಿತ್ತು. ಇದರಲ್ಲಿ ಚಿತ್ರದುರ್ಗ ಜಿಲ್ಲೆಯೊಂದರಲ್ಲೆ 23189 ಎಕರೆಗೂ ಹೆಚ್ಚಿನ ಭೂಮಿಯನ್ನು ಅಮೃತ್ ಮಹಲ್ ಕಾವಲ್ ಎಂದು ಕಾಯ್ದಿರಿಸಿದ್ದ. ಬ್ರಿಟಿಷ್ ಸರ್ಕಾರ, ಮೈಸೂರು ಅರಸರ ಆಡಳಿತಗಳೂ ಕೂಡ ಕಾವಲುಗಳನ್ನು ಕಾಪಾಡಿಕೊಂಡು ಬಂದಿದ್ದವು.

ಇದನ್ನೂ ಓದಿ: Karnataka Election 2023: ಚಾಮುಂಡೇಶ್ವರಿಯಲ್ಲಿ ಜಿಟಿಡಿ ಹಣಿಯಲು ಸಿದ್ದರಾಮಯ್ಯ ಮಾಸ್ಟರ್‌ ಪ್ಲ್ಯಾನ್;‌ ಜಾತಿ ಅಸ್ತ್ರ ಪ್ರಯೋಗ

ಸ್ವಾತಂತ್ರ್ಯಾನಂತರದ ಸರ್ಕಾರಗಳು ಅನಿವಾರ್ಯ ಕಾರಣಗಳಲ್ಲದೆ ಇನ್ನಿತರೆ ಉದ್ದೇಶಗಳಿಗೆ ಈ ಜಮೀನುಗಳನ್ನು ಮುಟ್ಟಿರಲಿಲ್ಲ. ಆದರೆ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಈ ಜಮೀನುಗಳ ಮೇಲೆ ಕಣ್ಣು ಹಾಕಿದೆ. ಚಿತ್ರದುರ್ಗದ ಪಶುಪಾಲಕರ ಬೆನ್ನಿಗೆ ಇರಿಯಲು ನಿಂತಿರುವ ಈ ಸರ್ಕಾರ ಸಾವಿರಗಟ್ಟಲೆ ಎಕರೆಗಳನ್ನು ಡಿನೋಟಿಫೈ ಮಾಡಲು ಮುಂದಾಗಿದೆ. ಇದು ಅಕ್ಷಮ್ಯ. ಜಾನುವಾರುಗಳ ಸಂರಕ್ಷಣೆ ಮತ್ತು ಅವುಗಳಿಗೆ ಆಹಾರವಿಲ್ಲದಂತೆ ಮಾಡುವುದು ಇವೆರಡೂ ಸಹ ಎಂದಿಗೂ ಜೊತೆಯಾಗಿ ಸಾಗಲು ಸಾಧ್ಯವಿಲ್ಲ. ಆದರೂ ಜನದ್ರೋಹಿಯಾದ ಬಿಜೆಪಿ ಹುಲ್ಲುಗಾವಲುಗಳನ್ನು ಜನರಿಂದ ಕಿತ್ತುಕೊಳ್ಳಲು ಮುಂದಾಗಿದೆ.

ಆರೆಸ್ಸೆಸ್ಸಿಗೆ ಸರ್ಕಾರಿ ಜಮೀನುಗಳನ್ನು ಮನಸೋ ಇಚ್ಛೆ ನೀಡಲಾಗುತ್ತಿದೆ. ನಮ್ಮ ರೈತರ ಜಾನುವಾರುಗಳು ಮೇಯಲು ಜಾಗ ಇಲ್ಲದಂತಾಗಿದೆ. ಇದನ್ನು ಕೂಡಲೆ ನಿಲ್ಲಿಸಿ ರಾಜ್ಯದಲ್ಲಿರುವ ಎಲ್ಲ ಮೇವಿನ ಕ್ಷೇತ್ರಗಳನ್ನು ಉಳಿಸಬೇಕು. ಸರ್ಕಾರ ಕೂಡಲೆ ಮಧ್ಯ ಪ್ರವೇಶಿಸಿ ರೈತರು ಮತ್ತು ಗ್ರಾಹಕರ ಇಬ್ಬರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕವಾಗಿ ಸಮಸ್ಯೆಗಳನ್ನು ಪರಿಹರಿಸಬೇಕು. ಪಶುಭಾಗ್ಯ ಯೋಜನೆಯನ್ನು ಸಶಕ್ತಗೊಳಿಸಬೇಕು. ರೈತರಿಗೆ ಸಂಭವಿಸುತ್ತಿರುವ ನಷ್ಟವನ್ನು ಸರ್ಕಾರ ತುಂಬಿಕೊಡಬೇಕು. ಹಿಂಡಿ ಬೂಸಾ ಸೇರಿದಂತೆ ಎಲ್ಲ ಪಶು ಆಹಾರಗಳ ಬೆಲೆಯನ್ನು ಕಡಿಮೆ ಮಾಡಿ ರಿಯಾಯಿತಿ ದರದಲ್ಲಿ ಒದಗಿಸಬೇಕು. ಹಿಂಡಿಯ ಮೇಲಿನ ಜಿಎಸ್‍ಟಿಯನ್ನು ಕೂಡಲೆ ರದ್ದು ಮಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Exit mobile version