ಬೆಂಗಳೂರು: ತಾಲೂಕು ಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದವರಿಗೆ ದೇಶದ ಆರ್ಥಿಕತೆ ಹೇಗೆ ಅರ್ಥ ಆಗುತ್ತದೆ ಎಂದು ಟೀಕಿಸಿದ್ದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಪ್ರಯಿಕ್ರಿಯೆ ನೀಡಿದ ಸಿದ್ದರಾಮಯ್ಯ, ಹೌದು ನಾನು ಆರ್ಥಿಕ ತಜ್ಞ ಅಲ್ಲ. ಜಿಲ್ಲಾ ನ್ಯಾಯಾಲಯದಲ್ಲಿ ಪ್ರಾಕ್ಟಿಸ್ ಮಾಡಿರುವ ವಕೀಲ. ಹೈಕೋರ್ಟ್, ಸುಪ್ರೀಂಕೋರ್ಟ್‌ನಲ್ಲೂ ಪ್ರಾಕ್ಟಿಸ್ ಮಾಡಿಲ್ಲ. ನಾನು ಆರ್ಥಿಕತೆ ಬಗ್ಗೆ ಮಾತನಾಡಿರೋದು ತಪ್ಪು, ಸರಿ ಅಂತ ಹೇಳಲು ಪ್ರತಾಪ್ ಸಿಂಹ ಆರ್ಥಿಕ ತಜ್ಞನ? ಯಡಿಯೂರಪ್ಪ, ಬೊಮ್ಮಾಯಿ ಆರ್ಥಿಕ ತಜ್ಞರ? ನಾನು ಓದಿದ ಲಾ ಬಗ್ಗೆ ಪ್ರಶ್ನಿಸಲು ಪ್ರತಾಪ್ ಸಿಂಹ, ಮೋದಿ ಇಬ್ಬರೂ ವಕೀಲರಾ? ಮೋದಿ, ಪ್ರತಾಪ್ ಸಿಂಹನಿಗೆ ಆರ್ಥಿಕತೆ ಬಗ್ಗೆ ಏನು ಗೊತ್ತಾಗುತ್ತದೆ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ | ತಾಲೂಕು ಕೋರ್ಟ್ ಲಾಯರ್ ಸಿದ್ದುಗೆ ಎಕಾನಮಿ ಅರ್ಥ ಆಗಲ್ಲ ಎಂದ ಪ್ರತಾಪ್ ಸಿಂಹ
ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ಮುಂದುವರಿಸಿದ ಸಿದ್ದಾರಾಮಯ್ಯ, ಪ್ರತಾಪ್ ಸಿಂಹ ಸುಮ್ಮನೆ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಗೂ ಪ್ರತಾಪ್ ಸಿಂಹಗೂ ಏನು ಸಂಬಂಧ ? ಪ್ರತಾಪ್ ಸಿಂಹ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ಕಿಲೋಮೀಟರ್ ಹೆದ್ದಾರಿ ಬರುತ್ತೆ? ನಾನು ಮೈಸೂರಿಗೆ ಏನು ಮಾಡಿದ್ದೇನೆ, ಅವರು ಏನು ಮಾಡಿದ್ದಾರೆ ಎಂದು ಚರ್ಚೆಗೆ ಬರಲಿ.
ಚರ್ಚೆಗೆ ನಾನು ಬರುವುದಿಲ್ಲ, ನಮ್ಮ ಪಕ್ಷದ ವಕ್ತಾರರನ್ನು ಕಳುಹಿಸುತ್ತೇನೆ. ದಾಖಲೆ ಸಮೇತ ಬಂದು ಚರ್ಚೆ ಮಾಡಲಿ. ಮೈಸೂರು ವಿಮಾನ ಉನ್ನತೀಕರಣ ಯಾರ ಕಾಲದಲ್ಲಿ ಆಗಿದ್ದು? ಆ ಪ್ರತಾಪ್ ಸಿಂಹನಿಗೆ ಏನು ಗೊತ್ತು? ಎಂದು ಪ್ರಶ್ನೆಗಳನ್ನು ಮುಂದಿಟ್ಟರು.
ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಕುರಿತಂತೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹಾಗೂ ಪ್ರತಾಪ್ ಸಿಂಹ ನಡುವೆಯೂ ಆಗಾಗ್ಗೆ ವಾಗ್ವಾದ ನಡೆಯುತ್ತಿರುತ್ತದೆ. ತಮ್ಮ ಕ್ಷೇತ್ರದಲ್ಲೆ ಹೆಚ್ಚು ಹೆದ್ದಾರಿ ಹಾದುಹೋಗಿದ್ದರೂ ಪ್ರತಾಪ್ ಸಿಂಹ ಸುಖಾಸುಮ್ಮನೆ ಮೂಗುತೂರಿಸುತ್ತಾರೆ ಎಂದು ಸುಮಲತಾ ಆರೋಪಿಸಿದ್ದಾರೆ. ರಸ್ತೆ ಯೋಜನೆ ಮಂಜೂರು ಮಾಡಿಸುವಲ್ಲಿ ತಮ್ಮ ಪಾತ್ರವೇ ಇದೆ ಎಂದು ಪ್ರತಾಪ್ ಸಿಂಹ ಸಹ ಪ್ರತ್ಯುತ್ತರ ನೀಡಿದ್ದಾರೆ. ಮುಂದಿನ ದಸರಾದೊಳಗೆ ಹೆದ್ದಾರಿ ಪೂರ್ಣಗೊಳಿಸುವುದಾಗಿ ಪ್ರತಾಪ್ ಸಿಂಹ ಇತ್ತೀಚೆಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದರು.
ಇದನ್ನೂ ಓದಿ | ಮುಂದಿನ ದಸರಾದೊಳಗೆ ಬೆಂಗಳೂರು- ಮೈಸೂರು ದಶಪಥ ಪೂರ್ಣ: ಪ್ರತಾಪ್‌ಸಿಂಹ