Site icon Vistara News

Suicide Case | ಶಾಸಕ ಅರವಿಂದ ಲಿಂಬಾವಳಿಯನ್ನು ಅರೆಸ್ಟ್‌ ಮಾಡಬೇಕು: ಸಿದ್ದರಾಮಯ್ಯ ಒತ್ತಾಯ

Siddaramaiah demands arrest of MLA Aravinda limbavali in suicide-case

ಬೆಂಗಳೂರು: ಉದ್ಯಮಿ ಪ್ರದೀಪ್‌ ಆತ್ಮಹತ್ಯೆ ಪ್ರಕರಣದಲ್ಲಿ ಪಾರದರ್ಶಕ ತನಿಖೆ ನಡೆಯಲಿ, ಸಾಕ್ಷಿನಾಶ ಆಗದಂತೆ ತಡೆಯಲು ಶಾಸಕ ಅರವಿಂದ ಲಿಂಬಾವಳಿ ಅವರನ್ನು ಪೊಲೀಸರು ಬಂಧಿಸಲಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಎರಡು ದಿನದ ಹಿಂದೆ ಕಾರಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಉದ್ಯಮಿ ಕಗ್ಗಲೀಪುರದ ಪ್ರದೀಪ್ ಅವರ ನಿವಾಸಕ್ಕೆ ಕೆಪಿಸಿಸಿ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲ, ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಅವರೊಂದಿಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಇದು ನಡೆಯಬಾರದ ಘಟನೆ. ಹಣಕಾಸಿನ ವ್ಯವಹಾರದಲ್ಲಿ ಇಂತಹ ಘಟನೆ ಆಗಿದೆ. ಪತ್ನಿ ಪ್ರದೀಪ್‌ಗೆ ನ್ಯಾಯ ಕೊಡಿಸಿ ಎಂದು ಅವರ ಪತ್ನಿ ಹೇಳಿದ್ದಾರೆ. 1.5 ಕೋಟಿ ರೂ. ಹೂಡಿಕೆ ಮಾಡಿದ್ದೆವು, ಒಂದೇ ಒಂದು ಪೈಸೆ ಲಾಭ ಬಂದಿಲ್ಲ. ನಮ್ಮ ಹಣ ವಾಪಸ್ ಕೊಡಿ ಎನ್ನುವುದು ಇವರ ವಾದ.

ಲಿಂಬಾವಳಿ ಈ ಭಾಗದ ಶಾಸಕರು. ಸೆಟ್ಲಮೆಂಟ್‌ಗೆ ಪ್ರಯತ್ನ ಮಾಡಿದ್ದಾರೆ. ಡೆತ್ ನೋಟ್‌ನಲ್ಲಿ 6 ಜನರ ಹೆಸರು ಇದೆ. ಲಿಂಬಾವಳಿ ಹೆಸರೂ ಇದೆ. ಈಗಾಗಲೇ ಎಫ್‌ಐಆರ್‌ ದಾಕಲಾಗಿದ್ದು, ಪೊಲೀಸರು ಹಣವನ್ನು ವಾಪಸ್ ಕೊಡಿಸಬೇಕು.

ಕೂಡಲೇ ಎಲ್ಲ‌ರನ್ನೂ ಬಂಧಿಸಬೇಕು. ಸಾವಿಗೆ ಕಾರಣವಾದರ ಮೇಲೆ ಕಾನೂನು ಕ್ರಮ ಆಗಬೇಕು. ಶಿಕ್ಷೆ ಆಗುವಂತೆ ಮಾಡಬೇಕು. ಶಾಸಕರೇ ಇರಲಿ, ಯಾರೇ ಇರಲಿ, ತಪ್ಪು ಯಾರೇ ಮಾಡಿದರೂ ತಪ್ಪೆ. ಕಾನೂನು ಪ್ರಕಾರ ಕ್ರಮ ಆಗಬೇಕು. ಶಾಸಕರನ್ನೂ ಬಂಧನ ಮಾಡಬೇಕು. ಇಲ್ಲದೇ ಹೋದರೆ ಸಾಕ್ಷಿ ನಾಶ ಮಾಡಬಹುದು. ಪೊಲೀಸರು ಪ್ರದೀಪ್‌ ಅವರ ಮನೆಯವರ ಮೊಬೈಲ್ ಕೇಳುತ್ತಿದ್ದಾರಂತೆ. ಹೀಗೆಲ್ಲ ಮಾಡುವುದು ಸರಿಯಲ್ಲ ಎಂದರು.

ಸಂತೋಷ್ ‌ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಾಗ, ಇದಕ್ಕೆ ಕೆ.ಎಸ್‌. ಈಶ್ವರಪ್ಪ ಕಾರಣ ಎಂದು ಹೇಳಿದರು. 3 ತಿಂಗಳಲ್ಲಿ ಬಿ ರಿಪೋರ್ಟ್ ಕೊಟ್ಟರು. ಇದೇ ಪರಿಸ್ಥಿತಿ ಈ ಕೇಸ್‌ನಲ್ಲಿಯೂ ಆಗಬಾರದು. ಸರ್ಕಾರ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು. ಈ ಸರ್ಕಾರದ ಅವಧಿಯಲ್ಲಿ ಅನೇಕ ಜನ ಸಾಯುವುದು, ದಯಾ ಮರಣ ಕೋರುವುದು ಆಗುತ್ತಿದೆ.‌ ಇದಕ್ಕೆ ಭ್ರಷ್ಟಾಚಾರ ಕಾರಣ. ಭ್ರಷ್ಟಾಚಾರದ ವಿರುದ್ದ ಕ್ರಮ ಆಗದೇ ಇರುವುದಕ್ಕೆ ಹೀಗೆ ಆಗುತ್ತಿದೆ. ಈ ಪ್ರಕರಣದಲ್ಲಿ ಪ್ರದೀಪ್ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದರು.

ಇದನ್ನೂ ಓದಿ | Suicide case | ಮೂರು ಡೆತ್‌ ನೋಟ್‌ ಬರೆದಿಟ್ಟ ಪ್ರದೀಪ್; ಲಿಂಬಾವಳಿ ಹೆಸರು ದಾಖಲಿಸದಂತೆ ಒತ್ತಡ?

Exit mobile version