ಬೆಂಗಳೂರು: ಬಿಜೆಪಿಯು 2018ರ ಚುನಾವಣೆ ವೇಳೆ ಮಾಡಿದ್ದ ಘೋಷಣೆಗಳಲ್ಲಿ ಶೇ.10ನ್ನೂ ಈಡೇರಿಸದೆ ಇದೀಗ ಸುಳ್ಳು ಘೋಷಣೆ ಮಾಡುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಘ್ದಾಳಿ ನಡೆಸಿದರು.
ಕಾಂಗ್ರೆಸ್‌ನಿಂದ ಆಯೋಜಿಸಿರುವ ನಾ-ನಾಯಕಿ ಅಭಿಯಾನದ ಅಂಗವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ ನೆರೆದಿದ್ದ ಮಹಿಳೆಯರನ್ನುದ್ದೇಶಿಸಿ ಮಾತನಾಡಿದರು.
ಬಜೆಟ್‌ನಲ್ಲಿ ಮಹಿಳೆಯರಿಗಾಗಿ ಅನೇಕ ಕಾರ್ಯಕ್ರಮಗಳನ್ನು ನೀಡುತ್ತೇವೆ ಎಂದು ಇಂದು ರಾಜ್ಯ ಸರ್ಕಾರ ಜಾಹೀರಾತು ನೀಡಿದೆ. ಬಿಜೆಪಿ ಅಧಿಕಾರಕ್ಕೆ ಬಂದು ಮೂರೂವರೆ ವರ್ಷ ಆಯಿತು. ಮಹಿಳೆಯರಿಗೆ ಒಂದೂ ಕಾರ್ಯಕ್ರಮ ನೀಡಲಿಲ್ಲ.
2018ರಲ್ಲಿ, ಮಹಿಳೆಯರಿಗಾಗಿ 21 ಭರವಸೆಗಳನ್ನು ನೀಡಿದ್ದರು. ಅದರಲ್ಲಿ ಒಂದೂ ಭರವಸೆಯನ್ನು ಈಡೇರಿಸಿಲ್ಲ. ಈಗ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುತ್ತೇವೆ ಎಂದು ಹೇಳಿದ ಮೇಲೆ ಎಚ್ಚರಗೊಂಡಿದ್ದಾರೆ. ಈಗ ಪುಂಖಾನುಪುಂಖವಾಗಿ ಭರವಸೆ ನೀಡಲು ಮುಂದಾಗಿದ್ದಾರೆ. ಆದರೆ ಬಿಜೆಪಿಯವರಷ್ಟು ವಚನಭ್ರಷ್ಟರು ಕರ್ನಾಟಕದ ಇತಿಹಾಸದಲ್ಲಿ ಯಾರೂ ಇರಲಿಲ್ಲ.
2018ರಲ್ಲಿ ಬಿಜೆಪಿ 600 ಭರವಸೆ ನೀಡಿದ್ದರು. ಅದರಲ್ಲಿ 50-60 ಭರವಸೆ ಈಡೇರಿಸಿದ್ದಾರೆ. ಅಂದರೆ ಒಟ್ಟು ಘೋಷಣೆಯ ಶೇ.10 ಘೋಷಣೆಯನ್ನೂ ಈಡೇರಿಸಿಲ್ಲ. ಇಂದು ಮಹಿಳೆಯರನ್ನು, ಸಮಾಜವನ್ನು ದಾರಿ ತಪ್ಪಿಸಲು ಜಾಹೀರಾತಿನ ಮೂಲಕ ಸುಳ್ಳು ಭರವಸೆ ನೀಡುತ್ತಿದ್ದಾರೆ. ಬಿಜೆಪಿ ಯಾವತ್ತೂ ಮಹಿಳೆಯರ ಪರವಾಗಿಲ್ಲ. ಸಂವಿಧಾನ ಬರುವುದಕ್ಕೆ ಮುಂಚಿನಿಂದಲೂ, ಬಂದ ನಂತರವೂ ಬಿಜೆಪಿ ಎಂದಿಗೂ ಮಹಿಳೆಯರ ಪರವಾಗಿಲ್ಲ.
ಬಿಜೆಪಿಯವರು ಮನುಸ್ಮೃತಿಯನ್ನು ಒಪ್ಪಿಕೊಂಡು ಮಹಿಳೆಯರನ್ನು ದಮನಿಸಿದವರು. ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀಡಿದ್ದು ಕಾಂಗ್ರೆಸ್. ಅದೇ ರೀತಿ ವಿಧಾನಸಭೆ, ಸಂಸತ್ತಿನಲ್ಲೂ ಮೀಸಲಾತಿ ನೀಡಬೇಕು ಎಂದು ಮಸೂದೆ ಮಂಡನೆ ಆಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕನಿಷ್ಠ 33% ಮಹಿಳಾ ಮೀಸಲಾತಿ ನೀಡಲಾಗುತ್ತದೆ ಎಂದು ಘೋಷಿಸಿದರು.
ಇದನ್ನೂ ಓದಿ | ನಾ ನಾಯಕಿ | ಪ್ರಿಯಾಂಕಾ, ಎರಡು ಬಾರಿ ಪ್ರಧಾನಿ ಹುದ್ದೆ ತ್ಯಾಗ ಮಾಡಿದ ಸೋನಿಯಾ ಪುತ್ರಿ: ಡಿ.ಕೆ. ಶಿವಕುಮಾರ್ ಬಣ್ಣನೆ