ಬೆಂಗಳೂರು: ಮೆದುಳಿನ ರಕ್ತನಾಳ ಒಡೆದು ರಕ್ತ ಸೋರುವ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಯ ಪ್ರಾಣವನ್ನು ಸಿಲಿಕಾನ್ ಸಿಟಿ ಆಸ್ಪತ್ರೆ ವೈದ್ಯರು (Silicon City Hospital) ಉಳಿಸಿದ್ದಾರೆ. ಒಂದು ಲಕ್ಷದಲ್ಲಿ ಇಬ್ಬರಿಗೆ ಮಾತ್ರ ಬರುವ ಈ ಅಪರೂಪದ ಕಾಯಿಲೆಯು ಬಾಲಕಿಗೆ ಕೊನೆ ಹಂತದಲ್ಲಿತ್ತು. ಇದನ್ನೇ ಸವಾಲಾಗಿ ಸ್ವೀಕರಿಸಿದ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಬಾಲಕಿ ಜೀವ ಉಳಿಸಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನೆರನಹಳ್ಳಿ ಗ್ರಾಮದ ನೆರನಹಳ್ಳಿಯ ಬಾಬು ಮತ್ತು ಲಾವಣ್ಯ ದಂಪತಿ ಮಗಳು ಸ್ನೇಹಾ ಅಪಾಯದಿಂದ ಪಾರಾದವಳು . ಕಳೆದ ಮೇ 3ರಂದು ಚೆನ್ನಾಗಿದ್ದ ಸ್ನೇಹಾ ಇದ್ದಕ್ಕಿದ್ದಂತೆ ವಾಂತಿ ಮಾಡಿಕೊಂಡು ಒದ್ದಾಡಿದ್ದಳು. ಮಗಳ ಪರಿಸ್ಥಿತಿ ಕಂಡು ಭಯಗೊಂಡ ಪೋಷಕರು ಮುಳಬಾಗಿಲಿನ ಖಾಸಗಿ ಆಸ್ಪತ್ರೆಗೆ ತೋರಿಸಿದ್ದರು. ಆದರೆ ಅಲ್ಲಿನ ವೈದ್ಯರು ನಿಮ್ಮ ಮಗಳಿಗೆ ನರರೋಗಕ್ಕೆ ಸಂಬಂಧಿಸಿದ ಕಾಯಿಲೆ ಇದೆ ಎಂದಿದ್ದರು.
ತಡ ಮಾಡದೆ ಅಲ್ಲಿಂದ ಬೆಂಗಳೂರಿಗೆ ಮಗಳು ಸ್ನೇಹಾಳನ್ನು ಕರೆತಂದು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ವೇಳೆ ತಲೆ ಮೆದುಳಿನ ರಕ್ತನಾಳ ಒಡೆದು ರಕ್ತ ಸೋರುವ ಈ ಕಾಯಿಲೆ ಇದೆ ಎಂದು ಗೊತ್ತಾಗಿತ್ತು. ಸ್ನೇಹಾಳಿಗೆ ಬಂದ ಈ ಕಾಯಿಲೆ ಅದಾಗಲೇ ಯಾರಿಗೂ ತಿಳಿಯದಂತೆ ಕೊನೆ ಹಂತ ತಲುಪಿತ್ತು. ಹೀಗಾಗಿ ನಿಮ್ಹಾನ್ಸ್ ವೈದ್ಯರು ನಿಮ್ಮ ಮಗಳನ್ನು ಬದುಕಿಸುವುದು ಕಷ್ಟ ವಾಪಸ್ ಕರೆದುಕೊಂಡು ಹೋಗಿ ಎಂದು ಕೈ ಚೆಲ್ಲಿದ್ದರು.
ಇದರಿಂದ ಮತ್ತಷ್ಟು ಗಾಬರಿಗೊಂಡ ಬಾಬು, ಲಾವಣ್ಯ ದಂಪತಿಗೆ ಆ್ಯಂಬುಲೆನ್ಸ್ ಚಾಲಕ ಸಮಾಧಾನಪಡಿಸಿದ್ದಾರೆ. ಬಳಿಕ ಹೊಸಕೋಟೆಯಲ್ಲಿರುವ ಸಿಲಿಕಾನ್ ಸಿಟಿ ಆಸ್ಪತ್ರೆಗೆ ಹೋಗುವಂತೆ ಹೇಳಿದ್ದಾರೆ. ನುರಿತ ವೈದ್ಯರು ಇರುವ ನಿಮ್ಹಾನ್ಸ್ ಆಸ್ಪತ್ರೆಯಲ್ಲೆ ಮಗುವನ್ನು ಬದುಕಿಸುವುದು ಕಷ್ಟ ಎಂದಿರುವಾಗ ಬೇರೊಂದು ಆಸ್ಪತ್ರೆಗೆ ಹೋಗಿ ಏನು ಪ್ರಯೋಜನ ಎಂದು ಸ್ನೇಹಿತರು, ಸಂಬಂಧಿಕರು ಹೇಳಿದ್ದಾರೆ. ಆದರೆ ಮಗಳು ಉಳಿಯುತ್ತಾಳೆ ಎಂದಾಗ ಬಾಬು, ಲಾವಣ್ಯ ದಂಪತಿ ಕ್ಷಣವೂ ಯೋಚಿಸದೇ ಸಿಲಿಕಾನ್ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ: Money Guide: ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಮುನ್ನ ವಿವಿಧ ಬ್ಯಾಂಕ್‌ಗಳ ಬಡ್ಡಿದರ ಪರಿಶೀಲಿಸಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಸಿಲಿಕಾನ್ ಸಿಟಿ ಆಸ್ಪತ್ರೆ ವೈದ್ಯರಾದ ಡಾ.ಸುಪ್ರಿತ್ ಮತ್ತು ಡಾ.ಮನೋಹರ್‌ರವರ ನರರೋಗ ತಜ್ಞರ ತಂಡ, ಅಚ್ಚರಿ ಪಡುವ ರೀತಿ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿ ಮಗುವಿನ ಜೀವ ಉಳಿಸಿದ್ದಾರೆ.
ವೈದ್ಯ ಲೋಕದಲ್ಲಿ ಅಚ್ಚರಿ ಎನಿಸುವ ಅನೇಕ ಕಾಯಿಲೆಗಳಿವೆ. ಒಂದು ಕಡೆ ವೈದ್ಯರಿಗೆ ಕೆಲವು ಕಾಯಿಲೆ ಸವಾಲಾದರೆ, ಕೆಲವು ಕಾಯಿಲೆಯ ಸಕ್ಸಸ್ ರೇಟ್ ವೈದ್ಯರನ್ನು ಮತ್ತಷ್ಟು ಒಳ್ಳೆಯ ಕೆಲಸ ಮಾಡಲು ಪ್ರೇರೇಪಿಸುತ್ತದೆ. ಹೊಸಕೋಟೆ ಸಿಲಿಕಾನ್ ಸಿಟಿ ವೈದ್ಯರ ಸೇವೆಯೇ ಸಾಕ್ಷಿಯಾಗಿದೆ.
ಲಕ್ಷದಲ್ಲಿ ಇಬ್ಬರಿಗೆ ಕಾಣಿಸಿಕೊಳ್ಳುವ “ಅರ್ಟೆರಿಯೊ ವೀನಸ್ ಮಾಲ್ಪರ್ಮೇಷನ್- Alterio Venous Malformation (ಮೆದುಳು ನರಗಳಲ್ಲಿ ಗುಳ್ಳೆಗಳಾಗಿ ಒಡೆದು ಹೋಗಿ ರಕ್ತ ಸೋರುವ ಕಾಯಿಲೆ) ಎಂಬ ಕಾಯಿಲೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಡು ಬಡವರಾದ ಅಂಗವಿಕಲರಾದ ಬಾಬು ಲಾವಣ್ಯ ದಂಪತಿ ಇನ್ನೇನು ನಮ್ಮ ಒಬ್ಬಳೆ ಮಗಳು ನಮ್ಮಿಂದ ದೂರ ಆಗುತ್ತೆ ಎಂಬ ಆತಂಕವನ್ನು ಸಿಲಿಕಾನ್ ಸಿಟಿ ಆಸ್ಪತ್ರೆ ವೈದ್ಯರು ದೂರ ಮಾಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ