ಬೆಂಗಳೂರು: ಇಬ್ಬರು ಮಹಿಳಾ ಅಧಿಕಾರಿಗಳ ನಡುವಿನ ವಾಕ್ಸಮರ (Sindhuri Vs Roopa) ಸೋಷಿಯಲ್ ಮೀಡಿಯಾ ಮತ್ತು ಮಾಧ್ಯಮದಲ್ಲಿ ತಾರಕಕ್ಕೇರಿದೆ. ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಮಾಡಿರುವ ಆರೋಪಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ʻರೂಪಾಗೆ ಮಾನಸಿಕ ಸ್ಥಿತಿ ಸರಿ ಇಲ್ಲʼ ಎಂದಿದ್ದರು.
ಆದರೆ, ರೂಪಾ ಅವರು ರೋಹಿಣಿ ಅವರು ಡಿ.ಕೆ. ರವಿ ಸತ್ತಿದ್ದು ಮಾನಸಿಕ ರೋಗದಿಂದ ಎಂದು ಹೇಳಿದ್ದೆಂಬಂತೆ ಪ್ರತಿಕ್ರಿಯೆ ನೀಡಿದ್ದಾರೆ. ಜತೆಗೆ ಡಿ.ಕೆ. ರವಿ ಮತ್ತು ಸಿಂಧೂರಿ ನಡುವಿನ ಪ್ರೇಮ ಸಲ್ಲಾಪ ಸಿಬಿಐ ಕೊಟ್ಟ ಫೈನಲ್ ರಿಪೋರ್ಟ್‌ನಲ್ಲಿದೆ ಎಂದು ಕೆಣಕಿದ್ದಾರೆ.
ಡಿ. ರೂಪಾ ನೀಡಿರುವ ಪ್ರತಿಕ್ರಿಯೆ ಇಲ್ಲಿದೆ
ʻʻʻನೀವು ಕೆಲವರು ರೋಹಿಣಿ ಸಿಂಧೂರಿ ಕಳಿಸಿದ ಸಾಲುಗಳನ್ನು, ಅವರ ಪತ್ರಿಕಾ ಪ್ರಕಟಣೆ ಕಳಿಸಿದ್ದೀರಿ. ಅದರಲ್ಲಿ ಆಕೆ ಹೇಳುತ್ತಾರೆ, ಡಿಕೆ ರವಿ ಸತ್ತದ್ದು mental illnessನಿಂದ ಅಂತ. ರವಿಯನ್ನು ಇಷ್ಟು ನಿಕೃಷ್ಟವಾಗಿ ಹೀಯಾಳಿಸಿದರೆ?ʼʼ ಎಂದು ಕೇಳಿದ್ದಾರೆ.
ʻʻನನ್ನ ಪ್ರಶ್ನೆ ಇಷ್ಟೇ…ರೋಹಿಣಿ ಸಿಂಧೂರಿ ಯಾಕೆ ರವಿಯನ್ನು ಬ್ಲಾಕ್ ಮಾಡಲಿಲ್ಲ. ಅವರಿಬ್ಬರ ಪ್ರೇಮ ಸಲ್ಲಾಪ ಸಿಬಿಐ ಕೊಟ್ಟ ಫೈನಲ್ ರಿಪೋರ್ಟ್ ನಲ್ಲಿ ಎಲ್ಲರ ಕೈ ಸೇರಿದೆ. ಒಬ್ಬ ಪುರುಷ ಎಲ್ಲೆ ಮೀರಿ ನಡೆದಾಗ ಈಕೆ ಜವಾಬ್ದಾರಿಯುತ ಹೆಣ್ಣು ಮಗಳಾಗಿ ಯಾಕೆ ಬ್ಲಾಕ್ ಮಾಡಲಿಲ್ಲ? ಅಂದರೆ ಉತ್ತೇಜನ ಕೊಟ್ಟಂತೆ ಅಲ್ಲವೇ? ಅದೇ ರೀತಿ ಐಎಎಸ್ ಧಿಕಾರಿಗಳಿಗೆ ಕಳಿಸಿದ ಆ ರೀತಿಯ ಚಿತ್ರಗಳು ಉತ್ತೇಜನ ಕೊಡುವುದು ಎಂದು ಅರ್ಥ ಆಗುವುದಿಲ್ಲವೇ? ಈ ರೀತಿಯ ಚಿತ್ರಗಳನ್ನು ಯಾವ ಯಾವ ಅಧಿಕಾರಿಗೆ, ಯಾಕೆ ಕಳಿಸಿದರು, ಹಾಗೂ ಸೇವಾ ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ಸ್ಪಷ್ಟೀಕರಣ ನೀಡಲಿʼʼ ಎಂದು ಕೇಳಿದ್ದಾರೆ.
ʻʻಸಂಧಾನಕ್ಕೆ ಎಂಎಲ್‌ಎ ಬಳಿ ಹೋದದ್ದು ಯಾಕೆ. ಯಾವ ಭ್ರಷ್ಟಾಚಾರ ಮುಚ್ಚಿ ಹಾಕಿಕೊಳ್ಳಲು ಅಥವಾ ಯಾವ ಅನೈತಿಕ ನಡತೆ ಮುಚ್ಚಲು? ಉತ್ತರಿಸಿ. ನನಗೆ ಬೇಡ, ಸರ್ಕಾರಕ್ಕೆ ಉತ್ತರಿಸಿʼʼ ಎಂದಿರುವ ರೋಹಿಣಿ ಸಿಂಧೂರಿ, ಯಾವ ವೇದಿಕೆಗೆ ಹೋದರೂ, ಸತ್ಯ ಸತ್ಯವೇ. ಸತ್ಯ ಮಣಿಸಲು ಸಾಧ್ಯವಿಲ್ಲ. ಈ ಬಾರಿ ಸಾಧ್ಯವಿಲ್ಲ ಎಂದು ಡಿ. ರೂಪಾ ಹೇಳಿದ್ದಾರೆ.
ಡಿ. ರೂಪಾ ಅವರ ಹೇಳಿಕೆ, ಆರೋಪಗಳಿಗೆ ರೋಹಿಣಿ ಸಿಂಧೂರಿ ಕೊಟ್ಟಿರುವ ಉತ್ತರದ ಪೂರ್ಣ ಪಾಠ ಇಲ್ಲಿದೆ
ಜವಾಬ್ದಾರಿಯುತ ಸ್ಥಾನದಲ್ಲಿರುವವರು ವೈಯಕ್ತಿಕ ಹಗೆಯನ್ನು ಸಾಧಿಸಲು ಹೊರಡುವುದು ಸಮಾಜಕ್ಕೆ ಬಹಳಷ್ಟು ಅಪಾಯಕಾರಿ. ರೂಪಾ ಐಪಿಎಸ್ ಅವರು, ಜವಾಬ್ದಾರಿಯುತ ಸ್ಥಾನದಲ್ಲಿದ್ದು, ನನ್ನ ಮೇಲೆ ವೈಯಕ್ತಿಕ ಹಗೆಯನ್ನು ಸಾಧಿಸಲು ಮಾನಸಿಕ ಸ್ಥಿಮಿತೆಯನ್ನು ಕಳೆದುಕೊಂಡಿರುವವರ ರೀತಿಯಲ್ಲಿ ಆಡುತ್ತಿದ್ದಾರೆ.
ಐಪಿಎಸ್ ರೂಪಾ ಅವರದ್ದು, ಇದೊಂದು ಅಭ್ಯಾಸವಾಗಿ ಬಿಟ್ಟಿದೆ. ಅವರು ಇತ್ತೀಚಿನ ವರ್ಷಗಳಲ್ಲಿದ್ದ ಎಲ್ಲಾ ಹುದ್ದೆಗಳಲ್ಲಿ ಇದೇ ರೀತಿಯ ಆರೋಪ ರಹಿತ ಆಧಾರ ರಹಿತ ಆರೋಪಗಳನ್ನು ಮಾಡುವ ಮೂಲಕ ಮಾಧ್ಯಮಗಳ ಗಮನ ಸೆಳೆಯುವ ಹಾಗೂ ತಾವು ದ್ವೇ಼ಷಿಸುವ ವ್ಯಕ್ತಿಗಳ ಮೇಲೆ ವೈಯಕ್ತಿಕವಾಗಿ ಹಗೆತನ ಸಾಧಿಸಲು ಪ್ರಯತ್ನಿಸುತ್ತಾರೆ. ಅವರು ಯಾವಾಗಲೂ ಸುದ್ದಿಯಲ್ಲಿರಬೇಕು ಎನ್ನುವುದನ್ನ ಬಯಸುತ್ತಾರೆ ಹಾಗೂ ಅದಕ್ಕೆ ಬೇಕಾದಂತಹ ಪೋಸ್ಟ್‌ಗಳನ್ನು ತಮ್ಮ ಸಾಮಾಜಿಕ ಮಾಧ್ಯಮದ ಪುಟಗಳಲ್ಲಿ ಹಾಕುವ ಮೂಲಕ ಸುದ್ದಿಯ ಕೇಂದ್ರಬಿಂದುವಾಗುತ್ತಾರೆ.
ಜವಾಬ್ದಾರಿಯುತ ಸ್ಥಾನದಲ್ಲಿದ್ದು ಒಳ್ಳೆಯ ಕೆಲಸಗಳ ಕಡೆ ಗಮನ ಹರಿಸುವುದನ್ನ ಬಿಟ್ಟು ಒಬ್ಬ ವ್ಯಕ್ತಿ ಅಥವಾ ಇನ್ನೊಬ್ಬರನ್ನ ಗುರಿಯಾಗಿಸಿಕೊಂಡು ಅವರ ತೇಜೋವಧೆ ಮಾಡುವುದೇ ಅವರ ಪ್ರಾಥಮಿಕ ಕೆಲಸ ಎಂದು ತೋರಿಸುತ್ತದೆ. ಅದರಲ್ಲೂ ನನ್ನ ವಿರುದ್ದ ಯಾವುದೋ ವೈಯಕ್ತಿಕ ಹಗೆಯನ್ನಿಟ್ಟುಕೊಂಡು ಸುಳ್ಳು, ವೈಯಕ್ತಿಕ ನಿಂದನೆಯ ಅಭಿಯಾನವನ್ನು ನಡೆಸುತ್ತಿದ್ದಾರೆ.
ನನ್ನ ಸಾಮಾಜಿಕ ಮಾಧ್ಯಮಗಳಿಂದ ಹಾಗೂ ವಾಟ್ಸ್ ಆಪ್ ಸ್ಟೇಟಸ್‌ಗಳಿಂದ ಸ್ಕ್ರೀನ್ ಶಾಟ್‌ಗಳ ಮೂಲಕ ಸಂಗ್ರಹಿಸಿರುವ ಫೋಟೋಗಳನ್ನ ನನ್ನ ತೇಜೋವಧೆ ಮಾಡಲು ರೂಪಾ ಐಪಿಎಸ್ ಅವರು ಬಳಸಿದ್ದಾರೆ. ಈ ಫೋಟೋಗಳನ್ನು ನಾನು ಕಳುಹಿಸಿದ್ದೇನೆ ಎನ್ನುವ ಅಧಿಕಾರಿಗಳ ಹೆಸರನ್ನ ಬಹಿರಂಗಪಡಿಸಬೇಕು ಹಾಗೂ ಅವುಗಳ ಬಗ್ಗೆ ತನಿಖೆ ನಡೆಯಬೇಕು ಎನ್ನುವುದನ್ನ ನಾನು ಆಗ್ರಹಿಸುತ್ತೇನೆ.
ಇದನ್ನೂ ಓದಿ : Sindhuri Vs Roopa : ರೂಪಾಗೆ ಮಾನಸಿಕ ಕಾಯಿಲೆ, ನಾನು ಯಾರಿಗೆ ಫೋಟೊ ಕಳಿಸಿದ್ದೆ ಅಂತ ಹೇಳಲಿ: ರೋಹಿಣಿ ಸಿಂಧೂರಿ ತಿರುಗೇಟು