Site icon Vistara News

Soundarya Jagadish : ಪಾರ್ಟ್ನರ್ಸ್ ದೋಖಾಕ್ಕೆ 60 ಕೋಟಿ ರೂ. ನಷ್ಟ ; ಸೌಂದರ್ಯ ಜಗದೀಶ್‌ ಡೆತ್‌ನೋಟ್‌ನಲ್ಲಿ ಬಯಲಾಯ್ತು ಸತ್ಯ

Soundarya Jagadish Cheating by soundarya Constructions Business Partners

ಬೆಂಗಳೂರು: ಕನ್ನಡ ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagadish) ಕಳೆದ ಏಪ್ರಿಲ್‌ 14ರಂದು ಮಹಾಲಕ್ಷ್ಮಿ ಲೇಔಟ್‌ನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಆತ್ಮಹತ್ಯೆ ಕೇಸ್‌ಗೆ ಸ್ಫೋಟಕ ತಿರುವು ಸಿಕ್ಕಿದ್ದು, ಬ್ಯುಸಿನೆಸ್‌ ಪಾರ್ಟ್ನರ್ಸ್ ದೋಖಾ ಬಯಲಾಗಿದೆ.

ಬ್ಯುಸಿನೆಸ್ ಪಾರ್ಟನರ್ಸ್ ಸುರೇಶ್, ಹೊಂಬಣ್ಣ ಹಾಗೂ ಸುಧೀಂದ್ರ ಎಂಬುವವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಸೌಂದರ್ಯ ಜಗದೀಶ್‌ ಮೃತಪಟ್ಟ ಒಂದು ತಿಂಗಳ ನಂತರ ಅವರ ರೂಮಿನಲ್ಲಿ ಡೆತ್‌ನೋಟ್‌ ಪತ್ತೆಯಾಗಿದೆ. ಸೌಂದರ್ಯ ಜಗದೀಶ್‌ ಬರೆದ ಡೆತ್‌ನೋಟ್‌ನಲ್ಲಿ ಸೌಂದರ್ಯ ಕನ್‌ಸ್ಟ್ರಕ್ಷನ್ಸ್‌ನ ಸಹ ಪಾಲುದಾರರಿಂದ ಸುಮಾರು 60 ಕೋಟಿ ರೂ. ಹಣ ನಷ್ಟವಾಗಿದ್ದು, ಮೋಸ ಮಾಡಿದ್ದಾರೆ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.

ಹೀಗಾಗಿ ಸೌಂದರ್ಯ ಜಗದೀಶ್‌ ಪತ್ನಿ ಶಶಿರೇಖಾ ಡೆತ್‌ನೋಟ್‌ ಪತ್ತೆ ಆಗುತ್ತಿದ್ದಂತೆ ಪಾಲುದಾರರ ವಿರುದ್ಧ ದೂರು ದಾಖಲಿಸಿದ್ದಾರೆ. ಸುರೇಶ್‌ ಹಾಗೂ ಹೊಂಬಣ್ಣ ಸೇರಿ ಸೌಂದರ್ಯ ಜಗದೀಶ್‌ ಆತ್ಮಹತ್ಯೆ ಮಾಡಿಕೊಳ್ಳಲು ನೇರವಾಗಿ ಕಾರಣಕರ್ತರಾಗಿದ್ದಾರೆ. ಇವರಿಬ್ಬರು ಜಗದೀಶ್‌ ಅವರೊಂದಿಗೆ ಸೇರಿಕೊಂಡು ಸೌಂದರ್ಯ ಕನ್‌ಸ್ಟ್ರಕ್ಷನ್ಸ್‌ ಕಂಪೆನಿಯನ್ನು ನಡೆಸಿಕೊಂಡು ಹೋಗುತ್ತಿದ್ದರು. ಈ ವೇಳೆ ಜಗದೀಶ್‌ ಅವರಿಂದ ಹಣವನ್ನು ಹೂಡಿಕೆ ಮಾಡಿಸಿ ಕಂಪನಿಯು ಲಾಭದಲ್ಲಿದ್ದರು ನಷ್ಟದಲ್ಲಿದೆ ಎಂದು ಸುಳ್ಳು ಹೇಳಿದ್ದರು. ಮಾತ್ರವಲ್ಲದೇ ಸುಳ್ಳು ಹೇಳಿ ಕುಟುಂಬದ ಆಸ್ತಿಗಳನ್ನು ಬ್ಯಾಂಕ್‌ನಲ್ಲಿ ಅಡಮಾನ ಇರಿಸಿದ್ದಾರೆ. ಅದರ ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡಿದ್ದಾರೆ.

ಇದನ್ನೂ ಓದಿ: Bank fraud: ಕಾರವಾರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ‌ ಹಗರಣ! 54 ಕೋಟಿ ರೂ. ಗುಳುಂ; ಮ್ಯಾನೇಜರ್ ಸಾವಿಂದ ಹೊರಬಂತು ಅವ್ಯವಹಾರ!

ನಂತರ ಇಲ್ಲ-ಸಲ್ಲದ ಸಬೂಬು ಹೇಳಿ ಖಾಲಿ ಚೆಕ್‌ ಹಾಗೂ ಖಾಲಿ ಹಾಳೆಗಳ ಮೇಲೆ ಜಗದೀಶ್‌ ಅವರ ಸಹಿಯನ್ನು ನಕಲು ಮಾಡಿಕೊಂಡು ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಿದರೆ ಜಗದೀಶ್‌ ಅವರಿಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಯಾವುದೋ ವಿಷಯಕ್ಕೆ ಜಗದೀಶ್‌ ಅವರನ್ನು ಬ್ಲಾಕ್‌ಮೇಲ್‌ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಲು ಕಂಪನಿಯು ನಷ್ಟದಲ್ಲಿದೆ ಎಂದು ಹೇಳಿ ಹಣವನ್ನು ಕೊಡದೆ ಮೋಸ ಮಾಡಿದ್ದಾರೆ ಎಂದು ಶಶಿರೇಖಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪತಿ ಸೌಂದರ್ಯ ಜಗದೀಶ್‌ ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಒಂದು ವಾರದ ಹಿಂದೆ ಸುರೇಶ್‌ ಹಾಗೂ ಹೊಂಬಣ್ಣ ನಿರಂತರವಾಗಿ ಫೋನ್‌ ಮಾಡಿದ್ದರು. ಇವರ ಕರೆ ಬಂದಾಗ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದು, ಇದರಿಂದ ಮನನೊಂದು ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜಗದೀಶ್‌ ಪತ್ನಿ ಶಶಿರೇಖಾ ಆರೋಪಿಸಿದ್ದಾರೆ.

ಬ್ಯುಸಿನೆಸ್‌ ಪಾರ್ಟ್ನಸ್‌ಗಳಿಂದ ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ಪತಿ ಸೌಂದರ್ಯ ಜಗದೀಶ್‌ ಸಾವಿಗೆ ಸುರೇಶ್‌, ಹೊಂಬಣ್ಣ ಹಾಗೂ ಸೌಂದರ್ಯ ಕನ್‌ಸ್ಟ್ರಕ್ಷನ್ಸ್‌ ಕಂಪೆನಿಯ ಮ್ಯಾನೇಜರ್‌ ಸುದೀಂದ್ರ ಕಾರಣ ಎಂದು ಪತ್ನಿ ಶಶಿರೇಖಾ ದೂರು ನೀಡಿದ್ದಾರೆ. ಸದ್ಯ ಈ ಡೆತ್‌ನೋಟ್ ಆಧರಿಸಿ ಪತ್ನಿ ಶಶಿರೇಖಾ ಮಹಾಲಕ್ಷ್ಮಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version