ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ (Bangalore Central Constituency) ಕಾಂಗ್ರೆಸ್ ಅಭ್ಯರ್ಥಿಯಾಗಬೇಕು ಎಂಬ ನಾಯಕರ ಬೇಡಿಕೆಯನ್ನು (Parliament Election) ತಿರಸ್ಕರಿಸುತ್ತಲೇ ಬಂದಿದ್ದ ಮಾಜಿ ಶಾಸಕಿ ಸೌಮ್ಯ ರೆಡ್ಡಿ (Sowmya Reddy) ಅವರು ಕೊನೆಗೂ ಸ್ಪರ್ಧೆ ಮಾಡಲು ಒಪ್ಪಿದ್ದಾರೆ. ಎಲ್ಲ ಕಡೆಯಿಂದ ಬಂದ ಒತ್ತಡದ ಬಳಿಕ ಸೌಮ್ಯ ರೆಡ್ಡಿ ಅವರ ತಂದೆ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಅವರು ಬುಧವಾರ ಬೆಂಗಳೂರು ದಕ್ಷಿಣ ಕ್ಷೇತ್ರದ ಪ್ರಮುಖರ ಸಭೆಯನ್ನು ಕರೆದಿದ್ದರು. ಅದರಲ್ಲಿ ಸೌಮ್ಯ ರೆಡ್ಡಿ ಅವರೇ ಸ್ಪರ್ಧೆ ಮಾಡಬೇಕು ಎಂಬ ಒತ್ತಡ ಕೇಳಿಬಂದ ಹಿನ್ನೆಲೆಯಲ್ಲಿ ಸೌಮ್ಯ ರೆಡ್ಡಿ ಅವರು ಸ್ಪರ್ಧೆಗೆ ಒಪ್ಪಿಗೆ ಸೂಚಿಸಿದ್ದಾರೆ.
ಕಳೆದ ವಿಧಾನಭಾ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ಸ್ಪರ್ಧಿಸಿ ಮತ ಎಣಿಕೆ ಗೊಂದಲದ ಬಳಿಕ ಅಂತಿಮವಾಗಿ 16 ಮತಗಳಿಂದ ಸೌಮ್ಯ ರೆಡ್ಡಿ ಸೋಲನುಭವಿಸಿದ್ದರು. ಅಂದಿನಿಂದಲೇ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಎಂದು ಕಾಂಗ್ರೆಸ್ ವಲಯದಲ್ಲಿ ಸುದ್ದಿಯಾಗಿತ್ತು. ಆದರೆ, ರಾಮಲಿಂಗಾ ರೆಡ್ಡಿ ಮತ್ತು ಸೌಮ್ಯಾ ರೆಡ್ಡಿ ಇಬ್ಬರೂ ಸ್ಪರ್ಧೆಗೆ ಮಾಡುವುದಿಲ್ಲ ಎಂದು ಹೇಳುತ್ತಲೇ ಬರುತ್ತಿದ್ದರು. ಇದೀಗ ಸಭೆಯ ಬಳಿಕ ಅವರಿಗೆ ಒಂದು ಮಟ್ಟದ ಸ್ಪಷ್ಟತೆ ಸಿಕ್ಕಿದೆ.
Sowmya Reddy : ಸರ್ವೇಗಳಲ್ಲಿ ಸೌಮ್ಯ ರೆಡ್ಡಿ ಪರ ಒಲವು ಇತ್ತು ಎಂದ ರೆಡ್ಡಿ
ವಿಸ್ತಾರ ನ್ಯೂಸ್ ಜತೆಗೆ ಮಾತನಾಡಿದ ಸೌಮ್ಯ ರೆಡ್ಡಿ ಅವರ ತಂದೆ, ಸಾರಿಗೆ ಸಚಿವ ರಾಮ ಲಿಂಗಾ ರೆಡ್ಡಿ ಅವರು, ವಿಧಾನ ಸಭಾ ಚುನಾವಣೆಯ ಫಲಿತಾಂಶದ ವಿಚಾರದಲ್ಲಿ ಕೋರ್ಟ್ ಹೋಗಿದ್ದೇವೆ. ಕೋರ್ಟ್‌ನಲ್ಲಿ ನಮ್ಮ ಪರವಾಗಿ ತೀರ್ಪು ಬರುವ ನಿರೀಕ್ಷೆ ಇದೆ. ಲೋಕಸಭಾ ಚುನಾವಣೆಗೆ ಸಂಬಂಧಿಸಿ ನಡೆಸಿದ ಸರ್ವೇಗಳಲ್ಲಿ ಸೌಮ್ಯ ರೆಡ್ಡಿ ಪರವಾಗಿ ಯೇ ಹೆಚ್ಚಿನ ಒಲವು ಕಂಡುಬಂದಿದೆ. ಹೀಗಾಗಿ ಸೌಮ್ಯ ರೆಡ್ಡಿ ಅಭ್ಯರ್ಥಿ ಆಗಬೇಕು ಅಂತ ಕಾಂಗ್ರೆಸ್ ರಾಜ್ಯ ಚುನಾವಣಾ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಒತ್ತಡ ಮಾಡಿದರು. ಬುಧವಾರ ಆರು ವಿಧಾನ ಸಭಾ ಕ್ಷೇತ್ರಗಳ ಮುಖಂಡರ ಅಭಿಪ್ರಾಯ ಸಂಗ್ರಹ ಮಾಡಿದೆ. ಬಹುತೇಕ ಎಲ್ಲ ಮುಖಂಡರು ಸಹ ಸೌಮ್ಯ ರೆಡ್ಡಿ ಅಭ್ಯರ್ಥಿ ಆಗಬೇಕು ಅಂತ ಹೇಳಿದ್ದಾರೆ. ಮುಖಂಡರು ಸಹ ಅದನ್ನೇ ಹೇಳಿದ್ದರಿಂದ ಅವರ ಅಭಿಪ್ರಾಯವನ್ನು ಸುರ್ಜೇವಾಲಾ ಮತ್ತು ಪಕ್ಷದ ಗಮನಕ್ಕೆ ತರುತ್ತೇನೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.
ಇದನ್ನೂ ಓದಿ : MP Pratap Simha: ನಾನು ಜೀವ ಇರುವವರೆಗೂ ಮೋದಿ ಭಕ್ತ, ಬಂಡಾಯ ಸ್ಪರ್ಧೆ ಮಾಡಲ್ಲ ಎಂದ ಪ್ರತಾಪ್ ಸಿಂಹ
ಲೋಕಸಭೆ ಸ್ಪರ್ಧೆ ಯೋಜನೆಯೇ ಮಾಡಿರಲಿಲ್ಲ ಎಂದ ಸೌಮ್ಯ ರೆಡ್ಡಿ
ʻʻಬೆಂಗಳೂರು ದಕ್ಷಿಣ ಕ್ಷೇತ್ರದ ಎಲ್ಲ ಮುಖಂಡರ ಬಂದಿದ್ದರು. ಸುಮಾರು ಆರು ತಿಂಗಳಿಂದ ನನ್ನನ್ನು ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡುತ್ತಲೇ ಇದ್ದರು. ನಮ್ಮ ಉಸ್ತುವಾರಿ ರಣದೀಪ್ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಿಲ್ಲಬೇಕು ಎಂದು ಹೇಳಿದರು. ಸಭೆಗೆ ಬಂದ ಎಲ್ಲಾ ಮುಖಂಡರು ನಿಲ್ಲಬೇಕು ಎಂದು ಒತ್ತಾಯ ಮಾಡಿದರುʼʼ ಎಂದು ಸಭೆಯ ಬಳಿಕ ವಿಸ್ತಾರ ನ್ಯೂಸ್ ಜತೆ ಮಾತನಾಡಿದ ಸೌಮ್ಯ ರೆಡ್ಡಿ ಹೇಳಿದರು.
ʻʻಪಕ್ಷದ ಒಬ್ಬ ಸಿಪಾಯಿಯಾಗಿ ಪಕ್ಷದ ಮುಖಂಡರು, ಕಾರ್ಯಕರ್ತ ಹೇಳಿದಂತೆ ನಾನು ಮಾಡುತ್ತೇನೆ. ನಾನು ಎಲ್ಲಿ ಹೋಗುತ್ತೇನೋ ಅಲ್ಲಿ ಎಲ್ಲರೂ ಸ್ಪರ್ಧೆ ಮಾಡಿ ಎಂದು ಹೇಳುತ್ತಿದ್ದರು. ಕೋರ್ಟ್‌ನಲ್ಲಿ ನ್ಯಾಯ ಸಿಗುತ್ತದೆ ಎಂದು ನಂಬಿ ಲೊಕಸಭೆ ಸ್ಪರ್ಧೆ ಯೋಚನೆ ಮಾಡಿರಲಿಲ್ಲ. ಮೊನ್ನೆ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ತಂದೆ ಸಮಯ ಕೇಳಿದ್ಧರು. ಬುಧವಾರ ಬೆಳಗ್ಗೆ ನಡೆದ ಕಾರ್ಯಕರ್ತರ ಸಭೆಯಲ್ಲೂ ಅಭಿಪ್ರಾಯ ವ್ಯಕ್ತವಾಗಿದೆʼʼ ಎಂದು ಸೌಮ್ಯ ರೆಡ್ಡಿ ಹೇಳಿದರು.
ʻʻಸುಮಾರು ಹತ್ತು ವರ್ಷದಿಂದ ಬಿಜೆಪಿ ಅವಕಾಶ ಕೊಟ್ಟು ಜನ ನೋಡಿದ್ದಾರೆ. ನೋಡಿ ನೋಡಿ ಜನರಿಗೆ ಬೇಸರ ಆಗಿದೆ. ಜನಪ್ರತಿನಿಧಿಯಾಗಿ ಜನರನ್ನ ಪ್ರತಿನಿಧಿಸಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡೋರು ಬರಬೇಕು ಎಂಬ ಅಭಿಪ್ರಾಯ ಜನರಿಗಿದೆ. ನಾನು 100% ನಂಬಿದ್ದೇನೆ, ಜನರ ಕೈಯಲ್ಲಿದೆ. ಖಂಡಿತ ಆಶೀರ್ವಾದ ಮಾಡುತ್ತಾರೆ ಎಂದುಕೊಂಡಿದ್ದೇನೆʼʼ ಎಂದು ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ ಬಳಿಕ ಸೌಮ್ಯ ರೆಡ್ಡಿ ಹೇಳಿದರು.