Site icon Vistara News

ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ ಹಗರಣದ ತನಿಖೆ ಚುರುಕುಗೊಳಿಸಲು ಒತ್ತಾಯ

ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌

ಬೆಂಗಳೂರು: ಎರಡೂವರೆ ವರ್ಷಗಳ ಹಿಂದೆಯೇ ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ ಹಗರಣ ಬಯಲಿಗೆ ಬಂದಿದೆ. ಆದರೆ ಇದುವರೆಗೂ ಪೂರ್ಣ ಪ್ರಮಾಣದ ಹಣ ಠೇವಣಿದಾರರಿಗೆ ಬಂದಿಲ್ಲ. ಈ ಕುರಿತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೋರಾಟ ನಡೆಸುತ್ತೇವೆ ಎಂದು ಡಾ. ಶಂಕರ ಗುಹಾ ದ್ವಾರಕಾನಾಥ್ ಬೆಳ್ಳೂರು ಹೇಳಿದ್ದಾರೆ.

ಬ್ಯಾಂಕ್ ಠೇವಣಿದಾರರು ಮತ್ತು ಷೇರುದಾರರ ಹಿತರಕ್ಷಣಾ ವೇದಿಕೆಯ ಮುಖ್ಯ ಪೋಷಕ ಡಾ. ಶಂಕರ ಗುಹಾ ದ್ವಾರಕಾನಾಥ್ ಬೆಳ್ಳೂರು ನೇತೃತ್ವದಲ್ಲಿ ಠೇವಣಿದಾರರು ಬಸವನಗುಡಿಯಲ್ಲಿರುವ ಬ್ಯಾಂಕ್‌ ಮುಂದೆ ಬುಧವಾರ ಜಮಾಯಿಸಿ ಪೂರ್ತಿ ಹಣ ಹಿಂತಿರುಗಿಸುವಂತೆ ಒತ್ತಾಯಿಸಿದರು.

ಹಗರಣವನ್ನು ಸಿಬಿಐಗೆ ಒಪ್ಪಿಸಿ ಎಂದು ಒತ್ತಾಯಿಸಿದರೂ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ. ಡಿಐಸಿಜಿಸಿ ವಿಮೆಯ ಹಣ ಕೊಡುವುದನ್ನು ಬಿಟ್ಟು ಸರ್ಕಾರಗಳು ಈ ಹಗರಣದ ವಿಷಯದಲ್ಲಿ ತೀರಾ ನಿರ್ಲಕ್ಷ್ಯ ವಹಿಸಿವೆ. ಸ್ಥಳೀಯ ಶಾಸಕ ರವಿಸುಬ್ರಮಣ್ಯ ಹಾಗೂ ಸಂಸದ ತೇಜಸ್ವಿ ಸೂರ್ಯ ಕೇವಲ ಡಿಐಸಿಜಿಸಿ ಕಥೆ ಹೇಳುವುದನ್ನು ಬಿಟ್ಟು ಬೇರೆ ಏನನ್ನೂ ಮಾಡಲಿಲ್ಲ ಎಂದು ಗುಹಾ ಆರೋಪಿಸಿದರು.

ಶ್ರೀ ಗುರುಸಾರ್ವಭೌಮ ಸೊಸೈಟಿಯಲ್ಲಿ 400 ಕೋಟಿ ರೂಪಾಯಿ ಹಗರಣ ನಡೆದಿದೆ. ಕೇಂದ್ರದ ನಾಯಕರಿಗೆ ಈ ಹಗರಣದ ತೀವ್ರತೆ ಬಹುಶಃ ತಿಳಿದಿಲ್ಲ ಎಂದು ಠೇವಣಿದಾರರು ಆಕ್ರೋಶ ಹೊರಹಾಕಿದರು. ಇದುವರೆಗೂ ಯಾವುದೇ ಬ್ಯಾಂಕ್‌ನ ಸಿಬ್ಬಂದಿ ವರ್ಗದವರನ್ನಾಗಲಿ, ದೊಡ್ಡ ಮಟ್ಟದ ಸುಸ್ತಿದಾರರನ್ನೂ ಸಿಐಡಿಯವರು ವಶಕ್ಕೆ ಪಡೆದಿಲ್ಲ. ಸಿಬ್ಬಂದಿ ವರ್ಗದಲ್ಲಿ ಪ್ರಮುಖ ಪಾತ್ರ ವಹಿಸಿರುವವರು ಮತ್ತು ಆಡಿಟರ್ ಅನಂತಕೃಷ್ಣನ್ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ, ಬ್ಯಾಂಕ್ ಮ್ಯಾನೇಜರ್‌ ಬರ್ಬರ ಹತ್ಯೆ

Exit mobile version