Site icon Vistara News

ST Somashekhar : ಕಾಂಗ್ರೆಸ್‌ MLC ಅಭ್ಯರ್ಥಿ ಪರ ಪ್ರಚಾರ ಮಾಡಿದ್ದು ನಿಜ, ಏನೀಗ ಎಂದ ಸೋಮಶೇಖರ್‌

ST Somashekhar

ಬೆಂಗಳೂರು: ‌ಬೆಂಗಳೂರು ಶಿಕ್ಷಕರ ಕ್ಷೇತ್ರದ (Bangalore Teachers Constituency) ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪುಟ್ಟಣ್ಣ (Congress Candidate puttanna) ಪರವಾಗಿ ಪ್ರಚಾರ ಮಾಡಿದ ಯಶವಂತಪುರದ ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್‌ (BJP MLA ST Somashekhar) ಅವರು, ʻಹೌದು ಪ್ರಚಾರ ಮಾಡಿದ್ದೇನೆ. ಏನೀಗʼ ಎಂಬರ್ಥದಲ್ಲಿ ಬಿಜೆಪಿಗೆ ಸವಾಲು ಹಾಕಿದ್ದಾರೆ (Somashekhar Challenges BJP). ಇದೇ ವೇಳೆ ಬಿಜೆಪಿ ಮತ್ತು ಜೆಡಿಎಸ್‌ನ ಮೈತ್ರಿ ಅಭ್ಯರ್ಥಿ ಎ.ಪಿ. ರಂಗನಾಥ್‌ ಅವರು ಕಳೆದ ಚುನಾವಣೆಯಲ್ಲಿ ತನ್ನ ವಿರುದ್ಧ ಮಾತ್ರವಲ್ಲ ಎಲ್ಲ ಬಿಜೆಪಿ ನಾಯಕರ ವಿರುದ್ಧವೂ ಪ್ರಚಾರ ಮಾಡಿದ್ದರು. ಅಂಥವರ ಪರವಾಗಿ ನಾನು ಮತ ಯಾಚನೆ ಮಾಡಬೇಕಾ? ಎಂದೂ ಕೇಳಿದ್ದಾರೆ! ಈ ಮೂಲಕ ಕಾಂಗ್ರೆಸ್‌ಗೆ ಸನಿಹವಾಗಿರುವ ಎಸ್‌.ಟಿ. ಸೋಮಶೇಖರ್‌ ಅವರು ಬಿಜೆಪಿ ನಾಯಕರಿಗೆ ತೀವ್ರ ತಲೆನೋವು ತಂದಿದ್ದಾರೆ.

ಸೋಮವಾರ ಸಂಜೆ ಬಿಜೆಪಿಯ ಶಾಸಕಾಂಗ ಪಕ್ಷ ಸಭೆ ನಿಗದಿಯಾಗಿತ್ತು. ಆದರೆ, ಎಸ್‌.ಟಿ. ಸೋಮಶೇಖರ್‌ ಅವರು ಸಭೆಗೆ ಹಾಜರಾಗಿರಲಿಲ್ಲ. ಬದಲಾಗಿ ಅದೇ ಹೊತ್ತಿಗೆ ನಡೆದ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದರು. ಪುಟ್ಟಣ್ಣ ಅವರಿಗೆ ಮತ ನೀಡುವಂತೆ ನೇರವಾಗಿಯೇ ಮನವಿ ಮಾಡಿದ್ದಾರೆ. ಮಾತ್ರವಲ್ಲ, ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿರುವ ಎ.ಪಿ. ರಂಗನಾಥ್‌ ಅವರಿಗೆ ಮಗ ನೀಡದಂತೆಯೂ ಕೇಳಿಕೊಂಡಿದ್ದರು.

ಸೋಮಶೇಖರ್‌ ಅವರ ಈ ನಡೆಗೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಸೋಮಶೇಖರ್‌ ಅವರು ಈ ರೀತಿ ಮಾಡಿದ್ದರೆ ಅದು ತಪ್ಪು ಎಂದು ಮಾಜಿ ಡಿಸಿಎಂ ಡಾ. ಸಿಎನ್‌ ಅಶ್ವತ್ಥ ನಾರಾಯಣ ಅವರು ಹೇಳಿದರೆ, ಜೆಡಿಎಸ್‌ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು, ಒಬ್ಬ ವ್ಯಕ್ತಿಯನ್ನು ಇಷ್ಟೊಂದು ಗಂಭೀರವಾಗಿ ಪರಿಗಣಿಸಬಾರದು, ಅಶೋಕಣ್ಣ, ವಿಜಯೇಂಧ್ರ ಅಶ್ವಥಣ್ಣ ಎಲ್ಲಾ ಸೇರಿ ಎಪಿ ರಂಗನಾಥ್ ಅವರ ಗೆಲುವಿನ ಶ್ರಮ ಹಾಕ್ತಿದ್ದಾರೆ. ಹೀಗಾಗಿ ಯಾರೋ ಒಬ್ಬ ವ್ಯಕ್ತಿಯನ್ನಿಟ್ಟುಕೊಂಡು ಮಾತಾಡೋದು ಸೂಕ್ತ ಅಲ್ಲ ಎಂದಿದ್ದಾರೆ.

ಮೈತ್ರಿ ಅಭ್ಯರ್ಥಿ ವಿರುದ್ದ ಎಸ್.ಟಿ ಸೋಮಶೇಖರ್ ಕೆಂಡಾಮಂಡಲ

ಇದೆಲ್ಲ ಮುಗಿದ ಮೇಲೆ ಎಸ್.ಟಿ. ಸೋಮಶೇಖರ್‌ ಅವರು ತಾನೇಕೆ ಪುಟ್ಟಣ್ಣ ಪರವಾಗಿ ಪ್ರಚಾರ ಮಾಡಿದ್ದೆ ಎನ್ನುವುದರ ಬಗ್ಗೆ ತಾವೇ ಸ್ಪಷ್ಟನೆ ನೀಡಿದ್ದಾರೆ. ಮತ್ತು ಬಿಜೆಪಿ ನಾಯಕರು ಹಾಗೂ ಮೈತ್ರಿ ಅಭ್ಯರ್ಥಿ ವಿರುದ್ಧವಾಗಿ ಕಿಡಿ ಕಾರಿದ್ದಾರೆ.

ʻʻಈಗ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿರುವ ಎ.ಪಿ ರಂಗನಾಥ್ ಕಳೆದ ಚುನಾವಣೆಯಲ್ಲಿ ನಮ್ಮ ವಿರುದ್ಧವೇ ಪ್ರಚಾರ ಮಾಡಿದ್ದರು. ನಮಗೆ ಸ್ವಾಭಿಮಾನ ಇಲ್ವಾ? ಇವರು ಅಶ್ವಥ್ ನಾರಾಯಣ ವಿರುದ್ಧವೂ ಪ್ರಚಾರ ಮಾಡಿದ್ದರು. ವಿಜಯೇಂದ್ರ ಯಡಿಯೂರಪ್ಪ ವಿರುದ್ಧವೇ ಎ.ಪಿ ರಂಗನಾಥ ಪ್ರಚಾರ ಮಾಡಿದ್ದರು. ಅಂಥವರ ಪರವಾಗಿ ನಾವು ಮಾತನಾಡಬೇಕಾʼʼ ಎಂದು ಹೇಳಿದರು. ಅದರ ಜತೆಗೆ, ಎ.ಪಿ ರಂಗನಾಥ ಅವರು ತಮ್ಮ ವಿರುದ್ಧ ಮಾತನಾಡಿದ ವಿಡಿಯೊ ತೋರಿಸಿದರು.

ಇದನ್ನೂ ಓದಿ: Ashok Chavan: ಬಿಜೆಪಿ ಸೇರಿದ ಕಾಂಗ್ರೆಸ್ ನಾಯಕ ಅಶೋಕ್ ಚವಾಣ್; ರಾಜ್ಯಸಭೆಗೆ ಸ್ಪರ್ಧೆ

ಬಿಜೆಪಿ ನಾಯಕರು ಪ್ರಚಾರ ಮಾಡಿದ್ದರೂ ನನಗೆ ಮಾಹಿತಿಯೇ ಇಲ್ಲ!

ʻʻನನ್ನ ಕ್ಷೇತ್ರದಲ್ಲಿ ಎಲ್ಲ ಬಿಜೆಪಿ ನಾಯಕರು ಪ್ರಚಾರ ಮಾಡಿದ್ದಾರೆ. ಆದರೆ, ನನಗೆ ಮಾಹಿತಿಯೇ ಇಲ್ಲ. ಹಾಗಿರುವಾಗ 24 ಗಂಟೆ ನಮ್ಮ ವಿರುದ್ಧ ಅಪಪ್ರಚಾರ ಮಾಡಿದವರ ಬಗ್ಗೆ ನಾವು ಕ್ಯಾಂಪೇನ್ ಮಾಡಬೇಕಾ?ʼʼ ಎಂದು ಕೇಳಿದ ಸೋಮಶೇಖರ್‌, ʻʻಪಾರ್ಟಿ ಕಟ್ಟಿಕೊಂಡು ಏನಾಗಬೇಕ್ರಿ?ʼʼ ಎಂದು ಬಿಜೆಪಿ ವಿಚಾರದಲ್ಲಿ ಸಿಡಿಮಿಡಿಯಾದರು.

ʻʻನಾನೇ ನಾನಾಗಿ ಪುಟ್ಟಣ್ಣಗೆ ಬನ್ನಿ ಅಂತ ಕರೆಯಲಿಲ್ಲ. ಅವರೇ ಬಂದ್ರು ಪ್ರಚಾರ ಮಾಡಿ ಹೋದರು. ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡಿ ಅಂತ ಬಿಜೆಪಿ ನಾಯಕರು ಯಾರೂ ನನ್ನನ್ನು ಕೇಳಿಲ್ಲ. ನಮಗೂ ಸ್ವಾಭಿಮಾನ ಇಲ್ವಾ?ʼʼ ಎಂದು ಎಸ್ ಟಿ ಸೋಮಶೇಖರ್ ಪ್ರಶ್ನಿಸಿದರು.

ʻʻನಾನೂ ಬಿಜೆಪಿಯ ಎಂಎಲ್ಎ. ರಂಗನಾಥ್‌ ಎರಡು ಸಲ ನನ್ನ ಕ್ಷೇತ್ರಕ್ಕೆ ಬಂದಿದ್ದಾರೆ. ಆದರೆ, ಕರ್ಟಸಿಗಾದರೂ ಅವರು ನನ್ನ ಕರೆಯಲಿಲ್ಲ. ನೀವು ಪಕ್ಷ ವಿರೋಧಿ ಚಟುವಟಿಕೆ ಅಂತೀರಾ, ನನಗೂ ಸ್ವಾಭಿಮಾನ ಇಲ್ವಾ?ʼʼ ಎಂದು ಸೋಮಶೇಖರ್‌ ಖಾರವಾಗಿ ಪ್ರಶ್ನೆ ಮಾಡಿದರು.

ಸೋಮಶೇಖರ್‌, ಹೆಬ್ಬಾರ್‌ಗೆ ಆರ್‌. ಅಶೋಕ್‌ ಕಿವಿಮಾತು

ಈ ನಡುವೆ, ವಿಧಾನಸಭಾ ಅಧಿವೇಶನಕ್ಕೆ ಬೆಳಗ್ಗೆ ಗೈರುಹಾಜರಾಗಿ ಮಧ್ಯಾಹ್ನದ ಬಳಿಕ ಹಾಜರಾದ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಮತ್ತು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರು ಕರೆಸಿಕೊಂಡು ಮಾತನಾಡಿದರು.

ಮೊಗಸಾಲೆಯಲ್ಲಿದ್ದ ಇಬ್ಬರನ್ನೂ ಕೈ ಹಿಡಿದು ಗ್ರಂಥಾಲಯದ ಒಳಗೆ ಕರೆದೊಯ್ದು ಮಾತನಾಡಿದ ವಿಪಕ್ಷ ನಾಯಕ ಅಶೋಕ್ ಅವರು, ಸದನದಲ್ಲಿ ಪ್ರತಿಭಟನೆ ಇದ್ದಾಗ ನಮ್ಮ ಜೊತೆ ಇಲ್ಲಿಯೇ ಇರಬೇಕು ಎಂದು ಸೋಮಶೇಖರ್ ಮತ್ತು ಹೆಬ್ಬಾರ್ ಗೆ ಸೂಚಿಸಿದರು ಎನ್ನಲಾಗಿದೆ.

Exit mobile version