ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರು ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ (BJP State Executive) ಶನಿವಾರ ಅರಮನೆ ಮೈದಾನದಲ್ಲಿ ನಡೆದಿದೆ. ಆದರೆ, ಯಶವಂತಪುರದ ಬಿಜೆಪಿ ಶಾಸಕ, ಮಾಜಿ ಸಚಿವ ಎಸ್.ಟಿ. ಸೋಮಶೇಖರ್ (ST Somashekhar) ಮಾತ್ರ ಸಭೆಯಿಂದ ದೂರ ಉಳಿದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಜತೆಗೆ ಕಾರಿನಲ್ಲಿ ಸುತ್ತಾಡುತ್ತಿದ್ದಾರೆ!
ಯಶವಂತಪುರ ಕ್ಷೇತ್ರದ ವ್ಯಾಪ್ತಿಗೆ ಬರುವ ನೈಸ್ ರಸ್ತೆ ಬಳಿ ಛತ್ರವೊಂದರ ಉದ್ಘಾಟನಾ ಕಾರ್ಯಕ್ರಮವನ್ನು ಶನಿವಾರವೇ ಆಯೋಜಿಸಲಾಗಿತ್ತು. ಅದರಲ್ಲಿ ಸಿಎಂ ಸಿದ್ದರಾಮಯ್ಯ ಅವರೂ ಭಾಗವಹಿಸಿದ್ದರು. ಸಭೆ ಮುಗಿದ ಬಳಿಕ ಎಸ್.ಟಿ ಸೋಮಶೇಖರ್ ಅವರು ಸಿಎಂ ಸಿದ್ದರಾಮಯ್ಯ ಅವರ ಕಾರಿನಲ್ಲೇ ಶಕ್ತಿ ಭವನದವರೆಗೆ ಆಗಮಿಸಿದ್ದಾರೆ. ಸ್ವತಃ ಸಿಎಂ ಅವರೇ ಸೋಮಶೇಖರ್ ಅವರನ್ನು ಕರೆದು ಕಾರಿನಲ್ಲಿ ಕೂರಿಸಿಕೊಂಡು ಕರೆದೊಯ್ದಿದ್ದಾರೆ. ಹೀಗೆ ಬಿಜೆಪಿ ಕಾರ್ಯಕಾರಣಿಯಿಂದ ದೂರ ಉಳಿದು ಸಿಎಂ ಸಿದ್ದರಾಮಯ್ಯ ಜೊತೆ ಕಾಣಿಸಿಕೊಂಡ ನಡೆ ಅಚ್ಚರಿಗೆ ಕಾರಣವಾಗಿದೆ.
ಎಸ್ ಟಿ ಸೋಮಶೇಖರ್ ಅವರು ಈ ಹಿಂದಿನಿಂದಲೂ ಬಿಜೆಪಿಯ ಸಭೆಗಳಿಂದ ಅಂತರ ಕಾಯ್ದುಕೊಳ್ಳುತ್ತಿದ್ದು, ಯಾವುದಾದರೂ ದೊಡ್ಡ ಬಿಜೆಪಿ ಕಾರ್ಯಕ್ರಮ ನಡೆಯುವ ದಿನವೇ ತಮ್ಮ ಕ್ಷೇತ್ರದಲ್ಲಿ ಒಂದು ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಕೇಳಿದರೆ ನನ್ನ ಕ್ಷೇತ್ರದಲ್ಲೇ ಕಾರ್ಯಕ್ರಮವಿತ್ತು. ಹಾಗಾಗಿ ಹೋಗಿರಲಿಲ್ಲ ಎಂದು ಹೇಳುವುದು ಮಾಮೂಲಿಯಾಗಿದೆ.
ST Somashekhar : ಸಿಎಂ ಜತೆ ರಾಜಕೀಯ ಮಾತನಾಡಿಲ್ಲ ಎಂದ ಎಸ್‌ಟಿಎಸ್
ʻʻನನ್ನ ಕ್ಷೇತ್ರದಲ್ಲಿ ಚೌಲ್ಟ್ರಿ ಉದ್ಘಾಟನಾ ಕಾರ್ಯಕ್ರಮ ಇತ್ತು.. ಆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಆಗಮಿಸಿದ್ದರು. ಹಾಗೇ ಕಾರ್ಯಕ್ರಮ ಮುಗಿದ ಬಳಿಕ ಬಾ ಕಾರಿನಲ್ಲಿ ಅಂದರು. ಅವರ ಜೊತೆ ಮಾತನಾಡಿಕೊಂಡು ಬಂದೆ ಅಷ್ಟೇ. ನೈಸ್ ರಸ್ತೆ ಒತ್ತುವರಿ ಬಗ್ಗೆ ಸಿಎಂ ಜೊತೆ ಮಾತನಾಡಿಕೊಂಡು ಬಂದೆ. ಇದರ ಹೊರತಾಗಿ ಯಾವುದೇ ರಾಜಕೀಯ ಮಾತನಾಡಿಲ್ಲʼʼ ಎಂದರು ಎಸ್ ಟಿ ಸೋಮಶೇಖರ್.
ST Somashekhar : ಕಾರ್ಯಕಾರಿಣಿಗೆ ಆಹ್ವಾನ ಇರಲಿಲ್ಲ ಎಂದ ಎಸ್ ಟಿ ಸೋಮಶೇಖರ್
ʻʻಇಂದಿನ ಬಿಜೆಪಿ ಕಾರ್ಯಕಾರಣಿ ಸಭೆಗೆ ನನಗೆ ಆಹ್ವಾನ ನೀಡಿಲ್ಲ. ಹಾಗಾಗಿ ನಾನು ಹೋಗಿಲ್ಲʼʼ ಎಂದು ಈ ಬಾರಿ ಸೋಮಶೇಖರ್ ಸ್ಪಷ್ಟ ಶಬ್ದಗಳಲ್ಲಿ ಹೇಳಿದ್ದಾರೆ.
ʻʻಜಗದೀಶ್ ಶೆಟ್ಟರ್ ಗೂ ನಮಗೂ ಬಹಳಷ್ಟು ವ್ಯತ್ಯಾಸವಿದೆ. ಶೆಟ್ಟರು ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ಗೆ ಹೋಗಿದ್ದರು. ಕಾಂಗ್ರೆಸ್ ಪಕ್ಷ ಅವರನ್ನು ಗುರುತಿಸಿ ಎಂಎಲ್‌ಸಿ ಮಾಡಿದೆ. ಈಗ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿಗೆ ಹೋಗಿದ್ದಾರೆ. ನನ್ನದೇನು ಪ್ರಶ್ನೆ ಇಲ್ಲ. ನಾನು ಬಿಜೆಪಿಯಲ್ಲೇ ಇದ್ದೇನೆʼʼ ಎಂದು ಹೇಳಿದರು ಸೋಮಶೇಖರ್.
ST Somashekhar : ಬಿಜೆಪಿ – ಜೆಡಿಎಸ್ ಮೈತ್ರಿ ಆದ ಕೂಡಲೇ ಜನ ವೋಟ್ ಹಾಕ್ತಾರಾ?
ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡಿದ ಎಸ್.ಟಿ ಸೋಮಶೇಖರ್ ಅವರು, ಯಾರು ಏನು ಜೊತೆ ಆದರೂ ವೋಟ್ ಮಾಡೋರ್ ಯಾರು..? ಯಾರು ಜೊತೆ ಎಂದು ಜನಸಾಮಾನ್ಯರು ತೀರ್ಮಾನ ಮಾಡ್ತಾರೆ. ಕಳೆದ ಬಾರಿ ಕಾಂಗ್ರೆಸ್ ಜೆಡಿಎಸ್ ಒಗ್ಗಟ್ಟಾಗಿತ್ತು. ಯಾವ ಪರಿಣಾಮವನ್ನೂ ಬೀರಲಿಲ್ಲ. ಯಾವ ಪಕ್ಷ ಮೈತ್ರಿ ಆದ್ರೂ ಸಹ ಜನಸಾಮಾನ್ಯರು ತೀರ್ಮಾನ ಮಾಡ್ತಾರೆ ಎಂದರು.
ʻʻಇನ್ನೂ ಲೋಕಸಭಾ ಚುನಾವಣಾ ಕಾವು ಏರಿಲ್ಲ. ಸದ್ಯಕ್ಕೆ ವಿಧಾನ ಪರಿಷತ್ ಚುನಾವಣೆ ಇದೆ. ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಯಾರಿಗೆ ವೋಟ್ ಹಾಕಬೇಕು ಅಂತ ಒಂದು ಯೋಜನೆ ನಡೆಯುತ್ತಿದೆ. ಮುಂದೆ ಎಂಪಿ ಎಲೆಕ್ಷನ್ ಹವಾ ಶುರುವಾಗುತ್ತದೆʼʼ ಎಂದೂ ಎಸ್ ಟಿ ಸೋಮಶೇಖರ್ ಹೇಳಿದರು.
ST Somashekhar: ಬಿಜೆಪಿ ಕಾರ್ಯಕಾರಿಣಿಗೆ ಯಾಕೆ ಆಹ್ವಾನ ಕೊಟ್ಟಿಲ್ಲ?
ಬಿಜೆಪಿಯಲ್ಲೇ ಇದ್ದರೆ ಯಾಕೆ ಕಾರ್ಯಕಾರಣಿಗೆ ಆಹ್ವಾನ ಕೊಟ್ಟಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಗೊತ್ತಿಲ್ಲ ನೀವು ಅವರನ್ನೇ ಕೇಳಿ ಎಂದರು ಎಸ್ ಟಿ ಸೋಮಶೇಖರ್. ʻʻನಾನು ಈಗಲೂ ಬಿಜೆಪಿಯಲ್ಲೇ ಇದ್ದೇನೆ ಎಂದರು.
ನೀವು ಪಕ್ಷ ಬಿಡ್ತೀರಿ ಎಂಬ ಕಾರಣಕ್ಕೆ, ನಿಮ್ಗೆ ಆಹ್ವಾನ ಕೊಟಿಲ್ವಾ ಎಂಬ ಪ್ರಶ್ನೆಗೆ, ಅದು ನಂಗೆ ಗೊತ್ತಿಲ್ಲ. ಅದನ್ನು ಅವರಲ್ಲೇ ಕೇಳಿ. ನಾನು ಬೇರೆಯವರನ್ನು ಕರೆದಿದ್ದಾರೋ ಇಲ್ವೋ ಅನ್ನೋದ್ರ ಬಗ್ಗೆ ನಾನು ಯಾರನ್ನೂ ಕೇಳಿಲ್ಲ. ನನ್ನದೇನಿದ್ರು ಕ್ಷೇತ್ರದಲ್ಲಿ ಒಡಾಡೋದು ಮಾತ್ರʼʼ ಎಂದರು ಎಸ್.ಟಿ. ಸೋಮಶೇಖರ್.
ಇದನ್ನೂ ಓದಿ: BJP Karnataka : ಬಿಜೆಪಿ ಕಾರ್ಯಕಾರಿಣಿ ಆರಂಭ; 28ಕ್ಕೆ 28 ಗೆಲ್ಲಲೇ ಬೇಕು ಎಂದ ಬಿಎಸ್‌ವೈ
ಮೈಸೂರು ಕ್ಷೇತ್ರದಿಂದ ಸೋಮಶೇಖರ್ ಕಾಂಗ್ರೆಸ್ ಅಭ್ಯರ್ಥಿ?
ಮೈಸೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆ ಸ್ಪರ್ಧೆ ಮಾಡುತ್ತಾರೆ ಎಂಬ ವದಂತಿಗಳ ಬಗ್ಗೆ ಪ್ರಶ್ನೆ ಮಾಡಿದಾಗ, ಈ ರೀತಿ ಮಾತು ಕೇಳಿದಾಗ ನನಗೆ ಸಂತೋಷವಾಗ್ತಿದೆ. ಸೋಮಶೇಖರ್ ರನ್ನ ಮೈಸೂರುನಿಂದ ನಿಲ್ಲಿಸಿದ್ರೆ ಗೆಲ್ತಾನೆ, ಬೆಂಗಳೂರಿನಿಂದ ನಿಂತರೂ ಗೆಲ್ತಾನೆ ಎಂಬ ಒಂದ್ ವೇವ್ ಕ್ರಿಯೇಟ್ ಆಗಿರುವುದು ಖುಷಿʼʼ ಎಂದರು.
ʻʻನಾನು ಲೋಕಸಭಾ ಎಲೆಕ್ಷನ್ ಗೆ ನಿಲ್ಲೋದಿಲ್ಲ. ಆದರೆ, ಆದ್ರೆ ನನ್ನನ್ನು ವೀಕ್ ಅನ್ನೋರಿಗೆ ಇದು ಒಂದು ಮೆಸೇಜ್. ನಾನು ಮೈಸೂರು ಉಸ್ತುವಾರಿಯಾಗಿ ಕೆಲಸ ಮಾಡಿದ್ದೇನೆ. ಹತ್ತಾರು ಬಾರಿ ಕೊಡಗಿಗೆ ಹೋಗಿದ್ದೆ.. ಅದೆಲ್ಲವನ್ನೂ ಲೆಕ್ಕ ಹಾಕಿ ದೃಷ್ಟಿ ಇಟ್ಟುಕೊಂಡು ಕ್ಯಾಲ್ಕುಲೇಟ್ ಮಾಡಿ ಹೇಳುತ್ತಿದ್ದಾರೆ. ಆದರೆ ನಾನು ಮೈಸೂರಿಗೂ ಹೋಗಲ್ಲ ಬೆಂಗಳೂರಲ್ಲೂ ನಿಲ್ಲೋದಿಲ್ಲʼʼ ಎಂದು ಹೇಳಿದರು ಎಸ್ ಟಿ ಸೋಮಶೇಖರ್.