Site icon Vistara News

Budget Session : ಫೆಬ್ರವರಿ 12ರಿಂದ ಜಂಟಿ ಅಧಿವೇಶನ, ಫೆ. 16ರಂದು‌ ರಾಜ್ಯ ಬಜೆಟ್‌ ಮಂಡನೆ

Karnataka Budget 2024-25

ಬೆಂಗಳೂರು: ಫೆಬ್ರವರಿ 12ರಿಂದ ಫೆಬ್ರವರಿ 23ರವರೆಗೆ ರಾಜ್ಯ ವಿಧಾನ ಮಂಡಲದ ಅಧಿವೇಶನ (Budget Session) ಆರಂಭವಾಗಲಿದ್ದು, ಫೆಬ್ರವರಿ 16ರಂದು ಕರ್ನಾಟಕ ರಾಜ್ಯ ಬಜೆಟ್ ​(Karnataka budget) ಮಂಡನೆ ಮಾಡಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ತೀರ್ಮಾನ ಮಾಡಲಾಗಿದೆ. ಜಂಟಿ ಅಧಿವೇಶನದ ಮೊದಲ ದಿನವಾದ ಫೆಬ್ರವರಿ 12ರಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​​ (Governor Thavarchand Gehlot) ಭಾಷಣ ಮಾಡಲಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ಖಾತೆ ಸಚಿವ ಎಚ್.ಕೆ. ಪಾಟೀಲ್‌ (HK Pateel) ತಿಳಿಸಿದರು.

ಫೆಬ್ರವರಿ ಮೊದಲ ವಾರದಲ್ಲಿ ಕೇಂದ್ರ ಬಜೆಟ್‌ (ಈ ಬಾರಿ ಲೇಖಾನುದಾನ) ಮಂಡನೆಯಾಗಲಿದೆ. ಅದರ ಬೆನ್ನಿಗೇ ರಾಜ್ಯ ಬಜೆಟ್‌ ಕೂಡಾ ಮಂಡನೆಯಾಗಲಿದೆ. ಸಾಮಾನ್ಯವಾಗಿ ರಾಜ್ಯ ಬಜೆಟ್‌ ಮಾರ್ಚ್‌ನಲ್ಲಿ ನಡೆಯುತ್ತದೆ. ಆದರೆ, ಈ ಬಾರಿ ಮಾರ್ಚ್‌ನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇರುವುದರಿಂದ ಫೆಬ್ರವರಿಯಲ್ಲೇ ಬಜೆಟ್‌ ಮಂಡಿಸಲು ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಯಶೋಭಿವೃದ್ಧಿಗೆ ಪೂರಕವಾಗಿ ಅವರು ಕೆಲವೊಂದು ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸುವ ಸಾಧ್ಯತೆಗಳಿವೆ.

ಫ್ರೀಡಂ ಪಾರ್ಕ್‌, ಕಿತ್ತೂರಿಗೆ ಮರು ನಾಮಕರಣ

ಶಿವಮೊಗ್ಗದ ಫ್ರೀಡಂ ಪಾರ್ಕ್‌ಗೆ ಅಲ್ಲಮ ಪ್ರಭು ಉದ್ಯಾನವನ ಎಂದು ಮರು ನಾಮಕರಣ ಮಾಡಲು ಮತ್ತು ಬೆಳಗಾವಿಯ ಕಿತ್ತೂರಿಗೆ ಚೆನ್ನಮ್ಮನ ಕಿತ್ತೂರು ಎಂದು ಮರು ನಾಮಕರಣ ಮಾಡುವ ನಿರ್ಧಾರಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿದೆ.

ಹಳೆ ವಾಹನ ಸ್ಕ್ರಾಪ್‌ಗೆ ಹಾಕಿದ ಮಾಲೀಕರಿಗೆ ಸಬ್ಸಿಡಿ

ಈ ನಡುವೆ, ರಾಜ್ಯದಲ್ಲಿ ಹಳೆ ವಾಹನ ಸ್ಕ್ರ್ಯಾಪ್‌ ನಿಯಮಗಳು ಜಾರಿಗೆ ಬರಲಿದೆ. ಹೀಗಾಗಿ ಹಳೆ ವಾಹನವನ್ನು ಸ್ಕ್ರ್ಯಾಪ್‌ಗೆ ಹಾಕುವವರಿಗೆ ಸಬ್ಸಿಡಿ ನೀಡಲಾಗುವುದು, ಹೊಸ ಎಲೆಕ್ಟ್ರಿಕ್ ವಾಹನ ಖರೀದಿಗೆ ಸಬ್ಸಿಡಿ ನೀಡಲಾಗುವುದು, ಜೊತೆಗೆ ರೋಡ್ ಟ್ಯಾಕ್ಸ್ ಕಡಿಮೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ ಎಂದು ಸಚಿವ ಎಚ್.ಕೆ. ಪಾಟೀಲ್‌ ಹೇಳಿದರು.

ಇದನ್ನೂ ಓದಿ: SC Reservation : ಒಳ ಮೀಸಲಾತಿ ಬೇಡಿಕೆಯನ್ನು ಕೇಂದ್ರದ ಅಂಗಳಕ್ಕೆ ದಾಟಿಸಿದ ಸರ್ಕಾರ

ದತ್ತ ಪೀಠ ವಿವಾದಕ್ಕೆ ಸಂಬಂಧಿಸಿ ಸಂಪುಟ ಉಪಸಮಿತಿ ರಚನೆ

ಬಾಬಾ ಬುಡನ್‌ ಗಿರಿಯ ದತ್ತ ಪೀಠಕ್ಕೆ ಆಡಳಿತ ಮಂಡಳಿ ನೇಮಕ ವಿಚಾರದಲ್ಲಿ ಮೊಹಿಯುದ್ದೀನ್‌ ಖಾದ್ರಿ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿರುವ ಕಾರಣ ಸುಪ್ರೀಂ ಕೋರ್ಟ್ ಗೆ ಆಕ್ಷೇಪಣೆ ಸಲ್ಲಿಸಲು ವರದಿ ಸಿದ್ಧಪಡಿಸುವ ಸಂಬಂಧ ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ಕ್ಯಾಬಿನೆಟ್ ಉಪಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿರುವ ಸಚಿವರೆಂದರೆ,

ಅಧ್ಯಕ್ಷರು – ಪರಮೇಶ್ವರ್ ಮಾನ್ಯ ಗೃಹ ಸಚಿವರು
ಎಚ್.ಕೆ ಪಾಟೀಲ್ ಸದಸ್ಯರು, ಮಾನ್ಯ ಕಾನೂನು, ಸಂಸದೀಯ ಮತ್ತು ಸಚಿವರು. ವ್ಯವಹಾರಗಳು ಪ್ರವಾಸೋದ್ಯಮ
ರಾಮಲಿಂಗಾರೆಡ್ಡಿ, ಸದಸ್ಯರು ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರು
ಕೃಷ್ಣಬೈರೇಗೌಡ, ಸದಸ್ಯರು ಮಾನ್ಯ ಕಂದಾಯ ಸಚಿವರು
ಕೆಜೆ. ಜಾರ್ಜ್, ಸದಸ್ಯರು ಚಿಕ್ಕಮಗಳೂರು ಉಸ್ತುವಾರಿ ಸಚಿವರು.

Exit mobile version