ಬೆಂಗಳೂರು: ಸಾರ್ವಜನಿಕರು ಹಾಗೂ ಮುಸ್ಲಿಂ ಮುಖಂಡರ ನಡುವೆ ವಾಗ್ವಾದಕ್ಕೆ ಕಾರಣವಾಗಿ ಕಾನೂನು ವ್ಯಾಜ್ಯವನ್ನೂ ಎದುರಿಸುತ್ತಿರುವ ಚಾಮರಾಜಪೇಟೆ ಮೈದಾನದಲ್ಲಿ (Chamarajpet Ground) ಜನವರಿ 26ರಂದು ತ್ರಿವರ್ಣ ಧ್ವಜ ಹಾರಲಿದೆ. ಸರ್ಕಾರದಿಂದಲೇ ಅದ್ಧೂರಿಯಾಗಿ ಗಣರಾಜ್ಯೋತ್ಸವ ಆಚರಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಸಂಸದ ಪಿ. ಸಿ. ಮೋಹನ್ ಹೇಳಿಕೆ ನೀಡಿದ್ದಾರೆ.
ಚಾಮರಾಜಪೇಟೆ ಮೈದಾನದಲ್ಲಿ ಗಣರಾಜ್ಯ ದಿನ ಆಚರಣೆ ಮಾಡಲು ಚಾಮರಾಜಪೇಟೆ ಹಿತರಕ್ಷಣಾ ಒಕ್ಕೂಟ ನೀಡಿದ್ದ ಗಡುವು ಶನಿವಾರಕ್ಕೆ ಮುಗಿದ ಹಿನ್ನೆಲೆಯಲ್ಲಿ ಮುಂದಿನ ನಿರ್ಧಾರ ಮಾಡಲು ಭಾನುವಾರ ಸಭೆ ನಡೆಯಿತು.
ಸಭೆಗೂ ಮುನ್ನ ಮಾತನಾಡಿದ್ದ ಒಕ್ಕೂಟದ ಅಧ್ಯಕ್ಷ ರಾಮೇಗೌಡ, ಸರ್ಕಾರ ನಮ್ಮ ಡೆಡ್‌ಲೈನ್‌ಗೆ ಸ್ಪಂದಿಸಿಲ್ಲ. ನಿನ್ನೆವರೆಗೂ ಸರ್ಕಾರದ ನಿರ್ಧಾರಕ್ಕೆ ನಾವು ಕಾದು ಕುಳಿತಿದ್ದೆವು. ಸರ್ಕಾರದ ಕಾರ್ಯಕ್ರಮ ಮಾಡುವ ಲಕ್ಷಣ ಕಾಣುತ್ತಿಲ್ಲ. ಸರ್ಕಾರ ನಮ್ಮ ಬೆಂಬಲಕ್ಕೆ ನಿಲ್ಲದೆ ಇದ್ದರೂ ಈ ಬಾರಿ ಚಾಮರಾಜಪೇಟೆಯಲ್ಲಿ ಗಣರಾಜ್ಯೋತ್ಸವ ಮಾಡೇ ಮಾಡುತ್ತೇವೆ. ನಾವು ಈ ಬಾರಿ ಬಾವುಟ ಹಾರಿಸಿಯೇ ಹಾರಿಸುತ್ತೇವೆ. ನಮ್ಮನ್ನು ಜೈಲಿಗೆ ಹಾಕಿದರೂ ಪರವಾಗಿಲ್ಲ, ನಾವು ತ್ರಿವರ್ಣ ಧ್ವಜವನ್ನು ಹಾರಿಸುತ್ತೇವೆ. ಹೀಗಾಗಿ ಸಭೆ ಮಾಡುತ್ತಿದ್ದೇವೆ.
ಸಭೆಯಲ್ಲಿ ಶ್ರೀರಾಮ ಸೇನೆ, ಸನಾತನ ಧರ್ಮ ಅಧ್ಯಕ್ಷರು, ಹಿಂದೂ ಜಾಗರಣ ವೇದಿಕೆ, ಚಾಮರಾಜಪೇಟೆ ಹಿರಿಯ ನಾಗರಿಕರು, ಚಾಮರಾಜಪೇಟೆ ನಾಗರಿಕ ಒಕ್ಕೂಟ ಸದಸ್ಯರು ಭಾಗಿಯಾಗುತ್ತಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿ ನಡೆಸಿ ನಮ್ಮ ನಿಲುವು ತಿಳಿಸುತ್ತೇವೆ ಎಂದಿದ್ದರು.
ಸರ್ಕಾರದಿಂದಲೇ ಉತ್ಸವ
ಸಭೆಯ ನಂತರ ಮಾಧ್ಯಮಗಳ ಜತೆಗೆ ಮಾತನಾಡಿದ ಸಂಸದ ಪಿ.ಸಿ. ಮೋಹನ್, ಕಂದಾಯ ಸಚಿವ ಅಶೋಕ್ ಜತೆ ಮಾತಾಡಿದ್ದೇನೆ. ಇದೇ 26ನೇ ತಾರೀಖು ಸರ್ಕಾರದಿಂದಲೇ ಆದ್ದೂರಿಯಾಗಿ ಗಣರಾಜ್ಯೋತ್ಸವ ಆಚರಣೆ ಮಾಡುತ್ತೇವೆ. ಇದಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಪೊಲೀಸ್ ಭದ್ರತೆ ನಿಟ್ಟಿನಲ್ಲಿ ಯೋಜನೆ ಮಾಡಲಿದ್ದೇವೆ ಎಂದರು.
ಕಳೆದ ಬಾರಿ ಧ್ವಜಾರೋಹಣ ಮಾಡಿದವರೇ ಈ ಬಾರಿಯೂ ನೆರವೇರಿಸಲಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ. ಸರ್ಕಾರದ ಕಾರ್ಯಕ್ರಮವಾದ್ಧರಿಂದ ಜನಪ್ರತಿನಿಧಿಗಳಿಗೆ ಸರ್ಕಾರ ಆಹ್ವಾನ ನೀಡಲಿದೆ. ಮಂಗಳವಾರ ನಾನು ಕೂಡ ಜಿಲ್ಲಾಧಿಕಾರಿಗಳ ಜತೆ ಮಾಡಿ ಮಾತನಾಡುತ್ತೇನೆ.
ಸ್ವಾತಂತ್ರ್ಯ ದಿನಾಚರಣೆ ಸಂಧರ್ಭದಲ್ಲಿದ್ದ ಕೆಲವು ನಿರ್ಭಂಧಗಳು ಈ ಬಾರಿ ಇರುವುದಿಲ್ಲ. ಸಂಭ್ರಮದಿಂದ ಕಂದಾಯ ಇಲಾಖೆ ನೇತೃತ್ವದಲ್ಲಿ ರಾಜೋತ್ಸವವನ್ನು ಆಚರಣೆ ಮಾಡಲಾಗುತ್ತದೆ. ಈ ಭಾಗದ ಶಾಸಕರಿಗೂ ಸರ್ಕಾರದಿಂದ ಆಹ್ವಾನ ಹೋಗಲಿದೆ, ನನಗೂ ಸರ್ಕಾರದಿಂದಲೇ ಬರಲಿದೆ. ನನಗೆ ಈ ಬಗ್ಗೆ ಕಂದಾಯ ಸಚಿವರು ಪೋನ್ ಮೂಲಕ ಹೇಳಿದ್ದಾರೆ ಎಂದರು.
ಇದನ್ನೂ ಓದಿ | ಕನ್ನಡ ರಾಜ್ಯೋತ್ಸವ | ಚಾಮರಾಜಪೇಟೆ ಮೈದಾನದಲ್ಲಿ ಹಾರುತ್ತಾ ಕನ್ನಡ ಬಾವುಟ? ಸರ್ಕಾರಕ್ಕೆ ಮತ್ತೊಂದು ಟೆನ್ಷನ್
ನಂತರ ಮಾತನಾಡಿದ ಒಕ್ಕೂಟದ ಅಧ್ಯಕ್ಷ ರಾಮೇಗೌಡ, ಸಂಸದರು ಈ ಬಗ್ಗೆ ಹೇಳಿದ್ದಾರೆ. ಸರ್ಕಾರದ ವತಿಯಿಂದ ಗಣರಾಜ್ಯೋತ್ಸವ ಅಚರಣೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನು ನಾವು ಸ್ವಾಗತಿಸುತ್ತೇವೆ. ಗಣರಾಜ್ಯೋತ್ಸವ ದಿನದಂದು ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಮಾಡಬೇಕು. ಗಣ್ಯ ವ್ಯಕ್ತಿಗಳಿಗೆ ಸನ್ಮಾನ ಮಾಡಬೇಕು. ನಾಳೆ ನಮ್ಮ ಸಂಘಟನೆಯಿಂದ ಬೆಂಗಳೂರು ಜಿಲ್ಲಾಧಿಕಾರಿಗಳನ್ನು ಬೇಟಿ ಮಾಡಿ ನಮ್ಮ ಕಾರ್ಯಕ್ರಮಗಳ ಬಗ್ಗೆ ಕೆಲ ಸಲಹೆ ಕೊಡುತ್ತೇವೆ ಎಂದರು.…