Site icon Vistara News

Karnataka Bandh : ಕಾವೇರಿ ನ್ಯಾಯಕ್ಕಾಗಿ ನಾಳೆ ಸಂಪೂರ್ಣ ಬಂದ್‌; ಸ್ತಬ್ಧವಾಗಲಿದೆ ಕರುನಾಡು; ಏನಿದೆ? ಏನಿಲ್ಲ?

Karnataka Bandh on sep29

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ (Cauvery water Dispute) ವಿರೋಧಿಸಿ ಮತ್ತು ನ್ಯಾಯಕ್ಕಾಗಿ ಆಗ್ರಹಿಸಿ ವಾಟಾಳ್‌ ನಾಗರಾಜ್‌ (Vatal Nagaraj) ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳ (Kannada Organizations) ಒಕ್ಕೂಟ ಕರೆ ನೀಡಿರುವ ಕರ್ನಾಟಕ ಬಂದ್‌ಗೆ (Karnataka Bandh) ವೇದಿಕೆ ಸಂಪೂರ್ಣ ಸಜ್ಜಾಗಿದೆ. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಕಾವೇರಿ ನ್ಯಾಯದ (Justice for Cauvery) ಕೂಗೆದ್ದಿದ್ದು, ಶುಕ್ರವಾರ ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ನಡೆಯುವ ಬಂದ್‌ನ್ನು ಸಂಪೂರ್ಣ ಯಶಸ್ವಿಗೊಳಿಸಲು ಸಂಘಟನೆಗಳು ಸಜ್ಜಾಗಿವೆ. ಜತೆಗೆ ಜನರು ಸ್ವಯಂಪ್ರೇರಣೆಯಿಂದ ಬಂದ್‌ಗೆ ಬೆಂಬಲ ನೀಡಲಿದ್ದಾರೆ.

ಕರುನಾಡಿಗೆ ನ್ಯಾಯ ಕೇಳುವ ಈ ಬಂದ್‌ಗೆ ರಾಜ್ಯಾದ್ಯಂತ ಸಾವಿರಕ್ಕೂ ಅಧಿಕ ಸಂಘಟನೆಗಳು ಬೆಂಬಲವಾಗಿ ನಿಂತಿವೆ. ಕನ್ನಡ ಪರ ಸಂಘಟನೆಗಳ ಈ ಹೋರಾಟಕ್ಕೆ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಸಂಪೂರ್ಣವಾಗಿ ಸಾಥ್‌ ನೀಡಲು ನಿರ್ಧರಿಸಿವೆ. ಈ ನಡುವೆ, ರಾಜ್ಯ ಸರ್ಕಾರ ಬಂದ್‌ ಮಾಡದಂತೆ ಮನವಿ ಮಾಡಿಕೊಂಡಿದೆ. ಜತೆಗೆ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸೆಕ್ಷನ್‌ 144ರ ಅಡಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಬಂದ್‌ನ ಕಾವನ್ನು ತಗ್ಗಿಸಲು ಮುಂದಾಗಿದೆ.

ಇದನ್ನೂ ಓದಿ: Karnataka Bandh : ಇಂದು ರಾತ್ರಿಯಿಂದಲೇ ಸೆಕ್ಷನ್‌ 144 ಜಾರಿ; ರ‍್ಯಾಲಿ, ಮೆರವಣಿಗೆಗೆ ಅವಕಾಶವಿಲ್ಲ

ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಕೊಡಗು ಸೇರಿದಂತೆ ಕಾವೇರಿ ನದಿ ಹರಿಯುವ ಮತ್ತು ಕಾವೇರಿ ನೀರಿನ ಆಸರೆಯನ್ನು ಪಡೆದಿರುವ ಜಿಲ್ಲೆಗಳಲ್ಲಿ ಹೋರಾಟದ ಕಾವು ತುಂಬ ಜೋರಾಗಿರಲಿದೆ. ಉಳಿದ ಜಿಲ್ಲೆಗಳಲ್ಲಿ ವ್ಯವಸ್ಥಿತವಾದ ಬಂದ್‌ ನಡೆಯಲಿದೆ. ಕರಾವಳಿ, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಬಂದ್‌ ಸಾಮಾನ್ಯ ಪರಿಣಾಮವನ್ನು ಉಂಟುಮಾಡುವ ನಿರೀಕ್ಷೆ ಇದೆ.

ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ

ಕಾವೇರಿ ಕಣಿವೆಯೂ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬಂದ್‌ ಪರಿಣಾಮವನ್ನು ಆಧರಿಸಿ ಶಾಲೆ ಕಾಲೇಜಿಗೆ ರಜೆ ನೀಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.

ವ್ಯಾಪಾರ, ಸಾರಿಗೆ ಸಂಚಾರ ಸ್ತಬ್ಧ, ಹೆದ್ದಾರಿಗಳು ಬಂದ್‌

ರಾಜ್ಯಾದ್ಯಂತ ಅಂಗಡಿ, ಹೋಟೆಲ್‌, ಕೈಗಾರಿಕೆ, ವ್ಯಾಪಾರಗಳನ್ನು ಬಂದ್‌ ಮಾಡಿ ಜನ ಬೆಂಬಲ ನೀಡಲು ನಿರ್ಧರಿಸಿದ್ದಾರೆ. ಚಿತ್ರಮಂದಿರಗಳು, ಮಾಲ್‌ಗಳು, ಉದ್ಯಮಗಳು, ಮಾರುಕಟ್ಟೆಗಳು ಕೂಡಾ ಬಂದ್‌ಗೆ ಬೆಂಬಲವಾಗಿ ನಿಂತಿರುವುದರಿಂದ ಇವೆಲ್ಲವೂ ಸ್ತಬ್ಧವಾಗಲಿವೆ. ಆಟೋ, ಟ್ಯಾಕ್ಸಿ ಸೇವೆಗಳು, ಸರಕು ಸಾಗಣೆ, ಖಾಸಗಿ ಬಸ್‌ಗಳು ಸಂಚಾರ ನಡೆಸುವುದಿಲ್ಲ.

ಪ್ರತಿಭಟನಾಕಾರರು ಪ್ರಮುಖವಾಗಿ ಹೆದ್ದಾರಿಗಳನ್ನೇ ಟಾರ್ಗೆಟ್‌ ಮಾಡಲು ನಿರ್ಧರಿಸಿರುವುದರಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಸೇರಿದಂತೆ ಹಲವು ರಸ್ತೆಗಳಲ್ಲಿ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಕಂಡುಬಂದಿದೆ. ಪ್ರತಿಭಟನಾಕಾರರು ಹೆದ್ದಾರಿಯಲ್ಲೇ ಕುಳಿತು ಪ್ರತಿಭಟನೆ ಮಾಡುವ ಸಾಧ್ಯತೆ ಇದೆ.

ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಮೆಟ್ರೋ ಸೇವೆ ಇದೆ, ಕೆಲವು ವಿಮಾನ ಕ್ಯಾನ್ಸಲ್‌

ಬಂದ್‌ ನಡುವೆಯೂ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಸೇವೆಯನ್ನು ಯಥಾವತ್ತಾಗಿ ಮುಂದುವರಿಸಲು ನಿಗಮಗಳು ನಿರ್ಧರಿಸಿವೆ. ಮೆಟ್ರೋ ಕೂಡಾ ಚಾಲನೆಯಲ್ಲಿ ಇರಲಿದೆ. ಆದರೆ, ಇದರಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಸಾಧ್ಯತೆ ದಟ್ಟವಾಗಿದೆ. ಯಾಕೆಂದರೆ, ಬಂದ್‌ನ ಹಿನ್ನೆಲೆಯಲ್ಲಿ ಜನರು ಹೊರಗೆ ಬರುವ ಸಾಧ್ಯತೆಯೇ ಕಡಿಮೆ ಇದೆ. ಈ ನಡುವೆ, ಬೆಂಗಳೂರಿನಲ್ಲಿ ಬಂದ್‌ ಇದೆ ಎಂಬ ಕಾರಣಕ್ಕಾಗಿ ವಿಮಾನ ಮೂಲಕ ಬರುವವರು ತಮ್ಮ ಪ್ರಯಾಣವನ್ನು ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಕೆಲವು ವಿಮಾನಗಳು ತಮ್ಮ ಹಾರಾಟವನ್ನು ರದ್ದು ಮಾಡುವ ಸಾಧ್ಯತೆ ಇದೆ.

ಕಾವೇರಿ ಕಣಿವೆ, ಬೆಂಗಳೂರು ಸೇರಿ ಎಲ್ಲೆಡೆ ಕಟ್ಟೆಚ್ಚರ

ಈ ನಡುವೆ, ಬಂದ್‌ ಶಾಂತಿಯುತವಾಗಿ ನಡೆಯಬೇಕು ಎಂಬ ಕಾರಣಕ್ಕಾಗಿ ಬೆಂಗಳೂರು, ಮಂಡ್ಯ, ಮೈಸೂರು ಸೇರಿದಂತೆ ಎಲ್ಲ ಕಡೆಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಬೆಂಗಳೂರಿನಲ್ಲಿ ಸಾವಿರಾರು ಪೊಲೀಸರು ಆಗಲೇ ನಿಯೋಜನೆಗೊಂಡಿದ್ದಾರೆ. ಯಾವುದೇ ಹೊತ್ತಿನಲ್ಲಿ ಬಂದ್‌ ಹಿಂಸಾತ್ಮಕ ರೂಪ ಪಡೆದರೆ ಸಾರ್ವಜನಿಕರಿಗೆ ತೊಂದರೆಯಾದರೆ ರಕ್ಷಣೆಗೆ ಬರುವುದಕ್ಕೆ ವ್ಯವಸ್ಥೆ ಸಿದ್ದವಾಗಿದೆ.

ಅಂತಿಮವಾಗಿ ಈ ಬಂದ್‌ ವೇಳೆ ಏನಿರುತ್ತದೆ? ಏನಿರುವುದಿಲ್ಲ?

ಏನೇನು ಸೇವೆಗಳು ಲಭ್ಯವಿಲ್ಲ?

-ಹೋಟೇಲ್‌ಗಳು ಬಾಗಿಲು ತೆರೆಯಲ್ಲ
-ಸಿನಿಮಾ ಹಾಲ್ ಸಂಪೂರ್ಣ ಬಂದ್‌/ಸಂಜೆ ಏಳು ಗಂಟೆ ಶೋ ಇರಬಹುದು
-ಮಾಲ್ ಗಳು ಓಪನ್‌ ಆಗುವುದಿಲ್ಲ
-ಆಟೋ-ಕ್ಯಾಬ್ ಇರುವುದಿಲ್ಲ
-ರಾಷ್ಟ್ರೀಯ ಹೆದ್ದಾರಿ ಬಂದ್
-ಖಾಸಗಿ ಬಸ್‌ ಗಳ ಸಂಚಾರ ಇಲ್ಲ
-ಬೇಕರಿ, ಅಂಗಡಿಗಳು ಮುಚ್ಚಿರುತ್ತವೆ
-ಓಲಾ ಉಬರ್ ಸೇವೆ ಇರುವುದಿಲ್ಲ.
-ಶಾಲೆ, ಕಾಲೇಜುಗಳಿಗೆ ರಜೆ (ಜಿಲ್ಲಾಧಿಕಾರಿಗಳು ಘೋಷಿಸಿದ ಜಿಲ್ಲೆಗಳಲ್ಲಿ)

ಈ ಸೇವೆಗಳು ಇರುತ್ತವೆ

-ಆಸ್ಪತ್ರೆ ಸೇವೆಗಳು ಎಲ್ಲ ಕಡೆಯಲ್ಲಿ ಲಭ್ಯ
-ಮೆಡಿಕಲ್ ಶಾಪ್‌ಗಳು ತೆರೆದಿರುತ್ತವೆ
-ಆಂಬ್ಯುಲೆನ್ಸ್‌ಗಳ ಸಂಚಾರಕ್ಕೆ ಅಡ್ಡಿ ಇಲ್ಲ,
-ಹಾಲಿನ ಅಂಗಡಿ, ಪತ್ರಿಕೆಗಳಿಗೆ ವಿನಾಯ್ತಿ
-ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇವೆ ಇರುತ್ತದೆ
-ಬೆಂಗಳೂರಿನಲ್ಲಿ ಮೆಟ್ರೋ ಸೇವೆ ಲಭ್ಯ

Exit mobile version