ಬೆಂಗಳೂರು: ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ನ.17ರಂದು ಸಂಜೆ 6.30ಕ್ಕೆ ‘ಕನ್ನಡ ತಾಯಿ ಭುವನೇಶ್ವರಿ’ಯ ಪುತ್ಥಳಿ(Statue) ಅನಾವರಣಗೊಳ್ಳಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುತ್ಥಳಿಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ಶ್ರೀಮತ್ ಸುತ್ತೂರು ವೀರ ಸಿಂಹಾನಾಧೀಶ್ವರ ಪರಮ ಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಅವರು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶಿವರಾಜ ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ವಿ.ಸುನೀಲ್ ಕುಮಾರ್, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಚಾಮರಾಜಪೇಟೆ ಶಾಸಕ ಬಿ.ಝೆಡ್. ಜಮೀರ್ ಅಹಮದ್ ಖಾನ್ ಭಾಗವಹಿಸಲಿದ್ದಾರೆ.
ಇದನ್ನೂ ಓದಿ | ಮಗುವಿಗೆ 6 ವರ್ಷ ತುಂಬಿದ್ರೆ ಮಾತ್ರ 1ನೇ ತರಗತಿ ಪ್ರವೇಶ: ಈ ನಿಯಮ ಈ ವರ್ಷದಿಂದಲೇ ಜಾರಿ ಇಲ್ಲ, ಮತ್ಯಾವಾಗ?
ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಜಿ. ಹಿರೇಮಠ, ‘ತರಂಗ’ ವಾರಪತ್ರಿಕೆ ವ್ಯವಸ್ಥಾಪಕ ಸಂಪಾದಕ ಸಂಧ್ಯಾ ಎಸ್. ಪೈ ಭಾಗವಹಿಸಲಿದ್ದು, ವಿಶೇಷ ಅತಿಥಿಗಳಾಗಿ ಕನ್ನಡದ ಮೊದಲ ನಿಘಂಟುಕಾರ ರೆವೆರೆಂಡ್ ಫರ್ಡಿನಂಡ್ ಕಿಟ್ಟಲ್ ಅವರ ಮರಿ ಮೊಮ್ಮಗಳು ಆಲ್ಮತ್ ಕಿಟ್ಟಲ್ ಭಾಗವಹಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಪರಂಪರಾಗತವಾಗಿ ಕನ್ನಡಿಗರ ಅಭಿಮಾನದ ಆರಾಧ್ಯ ದೇವತೆಯಾದ ಭುವನೇಶ್ವರಿಯ ಪುತ್ಥಳಿಯನ್ನು ಇದುವರೆಗೂ ಯಾವುದೇ ಕನ್ನಡ ಸಂಘ ಸಂಸ್ಥೆಗಳಾಗಲಿ, ಸರ್ಕಾರವಾಗಲಿ ಸ್ಥಾಪಿಸಿಲ್ಲ. ಕನ್ನಡದ ಮೊದಲ ರಾಜವಂಶವೆಂದೇ ಖ್ಯಾತಿ ಪಡೆದ ಕದಂಬರು ತಮ್ಮ ಕುಲದೈವವಾದ ಮಧುಕೇಶ್ವರ ಸ್ವಾಮಿಯೊಂದಿಗೆ ತಾಯಿ ಭುವನೇಶ್ವರಿಯನ್ನೂ ನಿತ್ಯವೂ ಆರಾಧಿಸುತ್ತಿದ್ದರು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬೆಟ್ಟದ ಸಾಲಿನ ಭುವನಗಿರಿಯಲ್ಲಿ ಭುವನೇಶ್ವರಿಯ ದೇಗುಲ ಕಟ್ಟಿಸಲು ಆರಂಭಿಸಿದರು. ಇದು ವಿಜಯನಗರ ಕಾಲದಲ್ಲಿಯೂ ಮುಂದುವರಿದು ಕೊನೆಗೆ ಕ್ರಿ.ಶ 1692ರಲ್ಲಿ ಬೀಳಗಿ ಅರಸರ ಕೊನೆಯ ದೊರೆ ಬಸವೇಂದ್ರನ ಕಾಲದಲ್ಲಿ ಪೂರ್ಣಗೊಂಡಿತು. ಇದು ಕನ್ನಡ ನಾಡಿನಲ್ಲಿ ಸ್ಥಾಪನೆಗೊಂಡ ಮೊದಲ ಭುವನೇಶ್ವರಿಯ ದೇಗುಲ.
ಮುಂದೆ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ ಹಕ್ಕ-ಬುಕ್ಕರೂ ಭುವನೇಶ್ವರಿಯನ್ನು ಆರಾಧಿಸುತ್ತಿದ್ದರು. ಅವರ ಗುರುಗಳಾದ ವಿದ್ಯಾರಣ್ಯರು ಕನ್ನಡ ಸಾಮ್ರಾಜ್ಯ ಸ್ಥಾಪನೆಗೆ ಭುವನೇಶ್ವರಿಯನ್ನು ಆರಾಧಿಸಿದ್ದರು. ಹಂಪಿಯ ವಿರೂಪಾಕ್ಷ ಮಂದಿರದಲ್ಲಿಯೂ ಭುವನೇಶ್ವರಿ ಪ್ರತಿಮೆ ಸ್ಥಾಪನೆಗೊಂಡಿತು. ಮೈಸೂರಿನ ಒಡೆಯರು ಭುವನೇಶ್ವರಿಯ ಆರಾಧನೆ ಮುಂದುವರಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರು ಮೇಲುಕೋಟೆಯಲ್ಲಿ ಭುವನೇಶ್ವರಿಯ ಮಂಟಪ ಕಟ್ಟಿಸಿದ್ದರು. ಮೈಸೂರಿನ ಕೊನೆಯ ಅರಸರಾದ ಜಯಚಾಮರಾಜೇಂದ್ರ ಒಡೆಯರ್ ಮೈಸೂರು ಅರಮನೆ ಆವರಣದಲ್ಲಿ ಭುವನೇಶ್ವರಿಯ ಪ್ರತಿಮೆ ಸ್ಥಾಪಿಸಿದ್ದರು.
ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರು ತಮ್ಮ ‘ಕರ್ನಾಟಕ ಗತ ವೈಭವ’ ಕೃತಿಯಲ್ಲಿ ‘ಭುವನೇಶ್ವರಿ ಕನ್ನಡಿಗರ ತಾಯಿ’ ಎನ್ನುವ ಪರಿಕಲ್ಪನೆ ನೀಡಿದರು. ಅದಕ್ಕೆ ಬಿ.ಎಂ.ಶ್ರೀ, ಕುವೆಂಪು, ಬೇಂದ್ರೆ ಮೊದಲಾದ ಕವಿವರ್ಯರು ಧ್ವನಿಗೂಡಿಸಿದರು. ಭುವನೇಶ್ವರಿಯ ಪರಿಕಲ್ಪನೆ ಏಕೀಕರಣದ ಹೋರಾಟದಲ್ಲಿ ಕನ್ನಡಿಗರನ್ನು ಒಗ್ಗೂಡಿಸಿತು. ಇಂದಿಗೂ ಕನ್ನಡ ನುಡಿ ಮತ್ತು ಭುವನೇಶ್ವರಿಯ ಪರಿಕಲ್ಪನೆಯ ನಡುವೆ ಅವಿನಾಭಾವ ಸಂಬಂಧ ಬೆಳೆದು ಬಂದಿದೆ.
ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಸ್ಥಾಪಿತವಾಗುವ ಭುವನೇಶ್ವರಿಯ ಪುತ್ಥಳಿಯು 6.5 ಅಡಿ ಎತ್ತರದ ಪ್ರಭಾವಳಿ ಇರುವ ನಾಲ್ಕು ಭುಜಗಳನ್ನು ಹೊಂದಿ ಪದ್ಮಪೀಠದಲ್ಲಿ ಕುಳಿತು, ಪಾಶಾಂಕುಶ, ಅಭಯವರದ ಮುದ್ರೆಯುಳ್ಳ ಕನ್ನಡ ಧ್ವಜವನ್ನು ಕೈಯಲ್ಲಿ ಹಿಡಿದು ಪ್ರಸನ್ನ ಮುಖಳಾಗಿ ಕನ್ನಡಿಗರ ಅಸ್ಮಿತೆಯ ಮೂರ್ತರೂಪವೋ ಎನ್ನುವಂತಿದೆ.
ಇದನ್ನೂ ಓದಿ | Vistara News Launch | ಹಿರಿಯ ಸಾಹಿತಿ ಡಾ. ಎಚ್ ಎಸ್ ವೆಂಕಟೇಶಮೂರ್ತಿ ಅವರಿಗೆ ವಿಸ್ತಾರ ಕಾಯಕ ಯೋಗಿ ಪ್ರಶಸ್ತಿ ಪ್ರದಾನ