ಬೆಂಗಳೂರು: ಕುಡಿ ಮೀಸೆಯ ಪುಡಿ ಹುಡುಗರ ನಡುವೆ ನಡೆದ ಸ್ಟೇಟಸ್ ಕಿರಿಕ್ ಕೊಲೆ ಮಾಡುವ ಹಂತಕ್ಕೆ ತಲುಪಿತ್ತು. ಕೊಲೆಗೆ ಸ್ಕೆಚ್ ಹಾಕಿ ಮನೆಗೆ ನುಗ್ಗಿದ್ದ ಹುಡುಗರ ನಸೀಬು ಕೆಟ್ಟು ಮಚ್ಚಿನೇಟು ತಿಂದು ಆಸ್ಪತ್ರೆ ಸೇರಿದ್ದಾರೆ.
ವಾಟ್ಸ್ಆ್ಯಪ್ ಡಿಪಿ ಹಾಕುವ (Status War) ವಿಚಾರಕ್ಕೆ ಯುವಕರ ಎರಡು ಗುಂಪುಗಳ ಮಧ್ಯೆ ಮಾರಾಮಾರಿಯಾಗಿದೆ. ಯುವಕನನ್ನು ಹತ್ಯೆಗೈಯಲು ಎದುರಾಳಿ ಟೀಮ್‌ನ ಯುವಕರು ಸ್ಕೆಚ್ ಹಾಕಿದ್ದರು. ಪ್ಲ್ಯಾನ್ ಮಾಡಿದ ಪುಂಡರ ಗುಂಪು ಯುವಕನ ಮನೆಗೆ ನುಗ್ಗಿ ಲಾಂಗ್ ಬೀಸಿದ್ದು, ತಂದೆಯೇ ಯುವಕರ ಮೇಲೆ ಎರಗಿ ಮಗನನ್ನು ರಕ್ಷಿಸಿದ್ದಾರೆ.
ಮಹದೇಶ್ವರ ನಗರದಲ್ಲಿ ಎರಡು ಗುಂಪುಗಳ ಮಧ್ಯೆ ನಡೆದ ಲಾಂಗ್ ವಾರ್ ಇದು. ವಾಟ್ಸ್ ಆ್ಯಪ್ ಸ್ಟೇಟಸ್ ವಿಚಾರಕ್ಕೆ ಯುವಕರ ಮಧ್ಯೆ ಗಲಾಟೆ ಆಗಿದೆ. ಅಕ್ಷಯ್ ಎಂಬಾತನ ಸ್ನೇಹಿತರು ಅಕ್ಷಯ್ ಫೋಟೋವನ್ನು ತಮ್ಮ ವಾಟ್ಸ್ ಆ್ಯಪ್ ಸ್ಟೇಟಸ್‌ನಲ್ಲಿ ಬಾಸ್ ಎಂದು ಟ್ಯಾಗ್ ಮಾಡಿ ಹಾಕಿಕೊಂಡಿದ್ದರು. ಇನ್ನೊಂದು ಟೀಮಿನ ಗಣಿ ಹಾಗೂ ಸುಮಂತ್ ಎಂಬವರು ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದರು. ನಮ್ಮ ಫೋಟೊ ಸ್ಟೇಟಸ್‌ಗೆ ಹಾಕಿ, ನಾವೇ ಬಾಸ್ ಎಂದು ಅಕ್ಷಯ್ ಸ್ನೇಹಿತರಿಗೆ ಎಚ್ಚರಿಕೆ ನೀಡಿದ್ದರು. ಸಾಲದ್ದಕ್ಕೆ ರೌಡಿ ಶೀಟರ್ ಹೆಸರನ್ನು ಕೂಡ ಬಳಸಿಕೊಂಡಿದ್ದರು. ಇಷ್ಟಕ್ಕೆ ಬಿಡದ ಪುಂಡರು ಅಕ್ಷಯ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಸಿಕ್ಕಾಗ ಬೈಕ್ ಕೀಯಿಂದ ಹಲ್ಲೆ ನಡೆಸಿದ್ದರು.
ಇದನ್ನೂ ಓದಿ | ಚಿಕ್ಕಬಳ್ಳಾಪುರದಲ್ಲಿ ಸಿಕ್ಕಸಿಕ್ಕವರ ಮೇಲೆ ಲಾಂಗ್ ಬೀಸಿದ್ದ ವ್ಯಕ್ತಿಯ ಬಂಧನ
ಅಕ್ಷಯ್ ಮುಗಿಸಲು ಪುಂಡರ ಸ್ಕೆಚ್
ನಂತರ ಗಣಿ ಮತ್ತು ಸುಮಂತ್ ಇನ್ನಿಬ್ಬರ ಹುಡುಗರನ್ನು ಕರೆದುಕೊಂಡು ಅಕ್ಷಯ್ ಮುಗಿಸಲು ಸ್ಕೆಚ್ ಹಾಕಿದ್ದರು. ಎರಡು ಲಾಂಗ್ ಹಿಡಿದು ಅಕ್ಷಯ್ ಮನೆಗೆ ನುಗ್ಗಿದ್ದರು. ಅಕ್ಷಯ್ ತಂದೆ ಆನಂದ್‌ರಾಮ್ ಹಾಗೂ ತಾಯಿ ಇರುವಾಗಲೇ ಲಾಂಗ್ ಬೀಸುವುದಕ್ಕೆ ಯತ್ನಿಸಿದರು. ಈ ಸಮಯದಲ್ಲಿ ಅಕ್ಷಯ್ ತಂದೆ ಆನಂದ್ ರಾಮ್, ಗಣಿ ಮತ್ತು ಸುಮಂತ್ ತಂದಿದ್ದ ಮಚ್ಚನ್ನೇ ಕಿತ್ತುಕೊಂಡು ಅವರ ಮೇಲೆ ಬೀಸಿದರು. ಘಟನೆಯಲ್ಲಿ ಸುಮಂತ್‌ಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಚ್ಚು ಬೀಸಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು ವಿಡಿಯೊ ವೈರಲ್ ಆಗಿದೆ.
ಎರಡೂ ಗುಂಪುಗಳ ಮೇಲೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಕೇಸ್ ದಾಖಲಾಗಿದೆ. ಘಟನೆ ನಡೆದ 24 ಗಂಟೆಯಲ್ಲೆ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ | ಮಚ್ಚು, ಲಾಂಗ್‌ನಿಂದ ಮಾಲೀಕನಿಗೆ ಹಲ್ಲೆ ನಡೆಸಿ 80 ಹಂದಿ ಕದ್ದೊಯ್ದಿದ್ದ 8 ಡಕಾಯಿತರ ಬಂಧನ