Site icon Vistara News

New Year Celebration: ಹೊಸ ವರ್ಷಾಚರಣೆ: ಬಾರ್‌, ಪಬ್‌ಗಳಿಗೆ ಬಿಗಿ ರೂಲ್‌; ಹೀಗೆಲ್ಲಾ ಆದರೆ ಲೈಸೆನ್ಸ್‌ ಕ್ಯಾನ್ಸಲ್!

new year party

ಬೆಂಗಳೂರು: ಹೊಸ ವರ್ಷಾಚರಣೆಯ (New Year Celebration‌, New Year 2024) ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್‌ ಇಲಾಖೆ ಬಾರುಗಳು ಹಾಗೂ ಪಬ್‌ಗಳಿಗೆ (pub, bar) ಬಿಗಿಯಾದ ರೂಲ್‌ಗಳನ್ನು ಜಾರಿ ಮಾಡಿದೆ. ಶಾಂತಿ ಸುವ್ಯವಸ್ಥೆ ಭಂಗಕ್ಕೆ ಕಾರಣವಾದರೆ ಇವುಗಳ ಲೈಸೆನ್ಸೇ ರದ್ದಾಗುವ ಚಾನ್ಸ್‌ ಇದೆ.

ಪಬ್‌ಗಳ ಬಗ್ಗೆ ನಗರ ಪೊಲೀಸರು ತೀವ್ರ ನಿಗಾ ವಹಿಸಿದ್ದು, ಎಲ್ಲಾ ಪಬ್ ಮಾಲೀಕರ ಜೊತೆ ಮಾತುಕತೆ ನಡೆಸಿ ಸೂಚನೆ ನೀಡಲಾಗಿದೆ. ಹೆಚ್ಚುವರಿ ಸಿಸಿಟಿವಿ, ಹೆಚ್ಚುವರಿ ಸಿಬ್ಬಂದಿ ಹಾಕಲಾಗುತ್ತಿದೆ. ಮದ್ಯ ಸೇವನೆ (Alcohol) ಹಾಗೂ ಊಟಕ್ಕೆ ಮಾತ್ರ ಅವಕಾಶವಿದೆ. ಗಾಂಜಾ ಮತ್ತಿತರ ಮಾದಕ ವಸ್ತುಗಳ ಸೇವನೆಗೆ ಅವಕಾಶವಿಲ್ಲ. ಅಂಥದು ನಡೆಯುತ್ತಿರುವುದು ಗೊತ್ತಾದರೆ ಕೂಡಲೇ ಪೊಲೀಸರಿಗೆ ತಿಳಿಸಬೇಕು. ಒಂದು ವೇಳೆ ತಿಳಿಸದೆ ಇದ್ದು, ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಪಬ್ ಲೈಸೆನ್ಸ್ ಕ್ಯಾನ್ಸಲ್ ಆಗಬಹುದು. ಜೊತೆಗೆ ಕ್ರಿಮಿನಲ್ ಕೇಸ್ (Criminal Case) ಬೀಳುತ್ತದೆ.

ಪಬ್‌ನ ಪ್ರತಿ ಮೂಲೆಯಲ್ಲೂ ಸಿಸಿಟಿವಿ (CCTV Camera) ಅಳವಡಿಸಿರಬೇಕು. ಇರುವ ಕ್ಯಾಮರಾಗಳಿಗಿಂತ 50% ಹೆಚ್ಚುವರಿ ಕ್ಯಾಮರಾ ಅಳವಡಿಸಲು, ಈಗಿರುವ ಕ್ಯಾಮರಾಗಳ ಕಂಡಿಷನ್ ಬಗ್ಗೆ ಪರಿಶೀಲನೆಗೆ ಸೂಚನೆ ನೀಡಲಾಗಿದೆ. ಏನಾದರೂ ಘಟನೆ ಆದರೆ ಸಂಪೂರ್ಣ ಸಿಸಿಟಿವಿಯಲ್ಲಿ ಫುಟೇಜ್ ಸಿಗಬೇಕು. ಸಿಸಿಟಿವಿ ವರ್ಕ್ ಆಗಿಲ್ಲ ಎಂದು ನೆಪ ಹೇಳಿದರೆ ಕೇಸ್ ಬೀಳುವುದು ಗ್ಯಾರಂಟಿ.

ಪಬ್‌ಗಳಲ್ಲಿ ಹೊಸ ವರ್ಷದ ಸೆಲೆಬ್ರೇಷನ್ (new year party) ಎಂದು ಜನಜಂಗುಳಿ ಹಾಗೂ ಯುವಕ-ಯುವತಿಯರ ದಂಡು ಹೆಚ್ಚು ಸೇರಿರುತ್ತದೆ. ಈ ವೇಳೆ ಕುಡಿದ ಮತ್ತಿನಲ್ಲಿ ಜಗಳ ಸೃಷ್ಟಿಯಾಗುವ ಸಾಧ್ಯತೆ ಇದೆ. ಕೆಲವರಿಂದ ಯುವತಿಯರಿಗೆ, ಹೆಣ್ಣುಮಕ್ಕಳಿಗೆ ಕಿರುಕುಳ ಸಾಧ್ಯತೆ ಇದೆ. ಈ ವೇಳೆ ರಕ್ಷಣೆಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿ ಇರಬೇಕು. ಮಹಿಳಾ ಭದ್ರತಾ ಸಿಬ್ಬಂದಿ ನೇಮಕಕ್ಕೂ ಸೂಚನೆ ನೀಡಲಾಗಿದೆ.

ವಾಷ್ ರೂಂ ಬಳಿ ಸಿಬ್ಬಂದಿ ನೇಮಕ ಮುಖ್ಯ. ಸೆಲೆಬ್ರೇಷನ್ ಟೈಮಲ್ಲಿ ಪಬ್‌ಗಳಲ್ಲಿ ತುಂಬಾ ಜನ ಇದ್ದು, ವಾಷ್‌ರೂಮ್‌ಗೆ ಹೋಗುವ ಸಂದರ್ಭದಲ್ಲಿ ಗಲಾಟೆ ಸಾಧ್ಯತೆ ಇದೆ. ಅಲ್ಲದೆ ಯುವತಿಯರ ವಾಷ್ ರೂಮ್‌ಗೆ ಕೆಲ ಯುವಕರು ನುಗ್ಗುವ ಸಾಧ್ಯತೆಯಿದೆ. ಕೆಲ ಯುವತಿಯರೂ ಯುವಕರ ವಾಷ್ ರೂಂಗೆ ನುಗ್ಗಿ ರಾದ್ಧಾತ ಮಾಡುತ್ತಾರೆ. ಹೀಗಾಗಿ ಪಬ್‌ಗಳ ವಾಷ್ ರೂಮ್ ಬಳಿ ಭದ್ರತಾ ಸಿಬ್ಬಂದಿ ನೇಮಕಕ್ಕೆ ಸೂಚಿಸಲಾಗಿದೆ. ಪೊಲೀಸ್ ಸಿಬ್ಬಂದಿ ಜೊತೆ ಪಬ್‌ನವರ ಭದ್ರತೆ, ಸೆಕ್ಯೂರಿಟಿ ಬಗ್ಗೆಯೂ ಪ್ಲಾನ್ ಮಾಡಲಾಗಿದೆ.

ಇನ್ನು ಮದ್ಯದಂಗಡಿ, ವೈನ್‌ ಶಾಪ್ ಮಾಲೀಕರಿಗೂ ಪೊಲೀಸ್ ಇಲಾಖೆ ಟಾಸ್ಕ್ ಕೊಟ್ಟಿದೆ. ಹೊಸ ವರ್ಷದಂದು ಮದ್ಯದಂಗಡಿಗಳ ಮುಂದೆ‌, ಅಕ್ಕಪಕ್ಕ ದೊಂಬಿ, ಗಲಾಟೆಗಳಾದರೆ ಮದ್ಯದಂಗಡಿ ಮಾಲೀಕರೇ ಅದರ ಹೊಣೆ ಹೊರಬೇಕು. ಗಲಾಟೆ ಆದರೆ ಕರ್ನಾಟಕ ಅಬಕಾರಿ ಕಾಯಿದೆ ಕಲಂ 21 ಅಡಿಯಲ್ಲಿ ಮದ್ಯ ಮಾರಾಟದ ಮಳಿಗೆ ಮಾಲೀಕರಿಗೆ ನೋಟೀಸ್ ನೀಡಲಾಗುತ್ತದೆ.

ನಗರದ ಎಲ್ಲ ಬಾರ್‌, ವೈನ್‌ ಶಾಪ್‌ಗಳಿಗೂ ಈ ಬಗ್ಗೆ ನೋಟೀಸ್ ಕೊಡಲು ನಗರ ಪೊಲೀಸ್ ಆಯುಕ್ತರು ಎಲ್ಲಾ ಡಿಸಿಪಿಗಳಿಗೆ ಸೂಚನೆ ನೀಡಿದ್ದಾರೆ. ಸಂಬಂದ ಪಟ್ಟ ಬಾರ್‌ಗಳ ಮುಂದೆ ಅಥವಾ ಅದರ ಸಮಿಪ ಆಗುವ ದೊಂಬಿ, ಗಲಾಟೆ, ಹುಡುಗಿಯರ ಚುಡಾವಣೆ, ಕುಡಿದ ಅಮಲಿನಲ್ಲಿ ಬಾಟಲ್ ಎಸೆತ, ಹಲ್ಲೆ, ದೊಂಬಿ ಎಬ್ಬಿಸಲು ಯತ್ನ ಇತ್ಯಾದಿ ನಡೆದರೆ ಬಾರ್ ಮಾಲೀಕರೆ ಹೊಣೆಯಾಗುತ್ತಾರೆ. ಜೊತೆಗೆ ಗಲಾಟೆಗೆ ಕಾರಣವಾಗಿರುವ ಬಾರ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ.

ಇದನ್ನೂ ಓದಿ: New Year Celebration: ಹೊಸ ವರ್ಷಾಚರಣೆ; ಬೆಂಗಳೂರಿನಲ್ಲಿ ಬಿಗಿ ಭದ್ರತೆಗೆ ಪೊಲೀಸ್‌ ಆಯುಕ್ತ ಸೂಚನೆ

Exit mobile version