ಬೆಂಗಳೂರು: ರಾಜ್ಯದಲ್ಲಿರುವ ಬರ ಪರಿಸ್ಥಿತಿ, ಕೃಷಿ ಸಂಕಷ್ಟಗಳ ನಡುವೆ ಈ ಬಾರಿ ರಾಜ್ಯದಲ್ಲಿ ಸಕ್ಕರೆ ಉತ್ಪಾದನೆ (Sugar Production) ಶೇ. 42.30ರಷ್ಟು ಕಡಿಮೆಯಾಗುವ ಭೀತಿ ಎದುರಾಗಿದೆ. ಒಂದು ವರ್ಷದ ಅಕ್ಟೋಬರ್‌ನಿಂದ ಮುಂದಿನ ವರ್ಷದ ಸೆಪ್ಟೆಂಬರ್‌ವರೆಗಿನ ಅವಧಿಯನ್ನು ಕಬ್ಬು ಮತ್ತು ಸಕ್ಕರೆ ಹಂಗಾಮು (Sugar Season) ಎನ್ನುತ್ತಾರೆ. 2022-23ರ ಹಂಗಾಮಿನಲ್ಲಿ ರಾಜ್ಯದಲ್ಲಿ 59.81 ಲಕ್ಷ ಟನ್ ಸಕ್ಕರ್ ಉತ್ಪಾದನೆಯಾಗಿತ್ತು. ಆದರೆ, 2023-24ರ ಹಂಗಾಮಿನಲ್ಲಿ ಈ ಪ್ರಮಾಣ ಕೇವಲ 34.51 ಲಕ್ಷ ಟನ್‌ಗೆ ಕುಸಿಯಬಹುದು ಅಂದಾಜಿಸಲಾಗಿದೆ.
ದೇಶದಲ್ಲೇ ಸಕ್ಕರೆ ಉತ್ಪಾದನೆಯಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ (Karnataka in Third place) ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ರಾಜ್ಯಗಳು ಮೊದಲ ಎರಡು ಸ್ಥಾನದಲ್ಲಿವೆ. ಈ ಮೂರು ರಾಜ್ಯಗಳೇ ದೇಶದ ಒಟ್ಟಾರೆ ಸಕ್ಕರೆ ಉತ್ಪಾದನೆಯ ಶೇ. 80ರಷ್ಟನ್ನು ಹೊಂದಿರುತ್ತವೆ. ಆದರೆ, ಈ ಬಾರಿ ರಾಜ್ಯದಲ್ಲಿ ಉತ್ಪಾದನೆ ಭಾರಿ ಕಡಿಮೆಯಾಗಲಿದೆ.
2023-24ನೇ ಸಾಲಿನಲ್ಲಿ ಸಕ್ಕರೆ ಉತ್ಪಾದನೆ ಶೇ. 42.30ಗೆ ಕುಸಿದು 34.51 ಲಕ್ಷ ಟನ್‌ಗೆ ಇಳಿಯಲು ಮುಖ್ಯ ಕಾರಣ ಕಬ್ಬಿನ ಬೆಳೆ ಕಡಿಮೆ ಮತ್ತು ಇರುವ ಕಬ್ಬಿನಲ್ಲೂ ದೊಡ್ಡ ಪ್ರಮಾಣದಲ್ಲಿ ಸಕ್ಕರೆ ದೊರೆಯದೆ ಇರುವುದು ಎಂದು ಹೇಳಲಾಗಿದೆ. ಮಳೆ ಇಲ್ಲದೆ ಇರುವುದರಿಂದ ಕಬ್ಬಿನ ಬೆಳೆ ಪ್ರಮಾಣ ಕುಸಿದಿದೆ.
ರಾಜ್ಯ ಸರ್ಕಾರದ ಲೆಕ್ಕಾಚಾರದ ಪ್ರಕಾರ ರಾಜ್ಯದಲ್ಲಿ ಈ ಬಾರಿ ಕಬ್ಬಿನ ಬೆಲೆ ಪ್ರಮಾಣ ಕಡಿಮೆಯಾಗಲಿದೆ. 2022-23ನೇ ಸಾಲಿನಲ್ಲಿ 705 ಲಕ್ಷ ಟನ್ ಕಬ್ಬು ಬೆಳೆಯಲಾಗಿದ್ದರೆ ಮುಂದಿನ ವರ್ಷ ಅದು 520 ಲಕ್ಷ ಟನ್‌ಗೆ ಇಳಿಯಲಿದೆ. ಕಳೆದ ವರ್ಷ ಸಕ್ಕರೆ ಉತ್ಪಾದನೆಗೆ 603.55 ಲಕ್ಷ ಟನ್ ಕಬ್ಬು ಲಭ್ಯವಾಗಿತ್ತು. ಆದರೆ, ಈ ಬಾರಿ ಕೇವಲ 442 ಲಕ್ಷ ಟನ್ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಕಾರಣಕ್ಕಾಗಿಯೇ ಸಕ್ಕರೆ ಉತ್ಪಾದನೆ ಪ್ರಮಾಣ ಕಳೆದ ಹಂಗಾಮಿನ 59.81 ಲಕ್ಷ ಟನ್ ನಿಂದ ಈ ಬಾರಿ 34.51 ಲಕ್ಷ ಟನ್‌ಗೆ ಇಳಿಯಲಿದೆ ಎಂದು ಹೇಳಲಾಗಿದೆ.
ಕಬ್ಬಿನ ಸಕ್ಕರೆ ಇಳುವರಿಯೂ ಕಡಿಮೆ
ಈ ನಡುವೆ ಕಬ್ಬಿನಿಂದ ಸಿಗುವ ಸಕ್ಕರೆ ಇಳುವರಿಯೂ ಕಡಿಮೆಯಾಗುವ ಸಾಧ್ಯತೆ ಕಂಡುಬಂದಿದೆ. 2022-23ರಲ್ಲಿ ಕಬ್ಬಿನಿಂದ ಶೇ. 9.91ರಷ್ಟು ಸಕ್ಕರೆ ಸಿಗುತ್ತಿತ್ತು. ಈ ಬಾರಿ ಅದು ಶೇ. 8ಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದಕ್ಕೂ ಮಳೆ ಕೊರತೆಗೂ ಸಂಬಂಧವಿದೆ.
ಎಥೆನಾಲ್ ಉತ್ಪಾದನೆ ಏರಿಕೆ
ಇದರ ನಡುವೆಯೇ ಸಿಕ್ಕಿರುವ ಇನ್ನೊಂದು ಅಂಕಿ ಅಂಶದ ಪ್ರಕಾರ, ಮುಂದಿನ ಹಂಗಾಮಿನಲ್ಲಿ ಕಬ್ಬಿನಿಂದ ಸಕ್ಕರೆ ತೆಗೆಯುವ ಪ್ರಕ್ರಿಯೆಯ ಉಪ ಉತ್ಪನ್ನವಾದ ಎಥೆನಾಲ್ ಉತ್ಪಾದನೆ ಪ್ರಮಾಣ ಹೆಚ್ಚಾಗಲಿದೆ. ಕಳೆದ ಹಂಗಾಮಿನಲ್ಲಿ ಇದು 35 ಕೋಟಿ ಲೀಟರ್ ಇದ್ದರೆ, ಮುಂದಿನ ಹಂಗಾಮಿನಲ್ಲಿ ಅದು 40 ಕೋಟಿ ಲೀಟರ್‌ಗೆ ಏರುವ ಅಂದಾಜಿದೆ.
ರಾಜ್ಯದಲ್ಲಿ ಸುಮಾರು 77 ಕಬ್ಬು ಅರೆಯುವ ಮಿಲ್‌ಗಳಿವೆ. ಅವುಗಳ ಪೈಕಿ 34 ಡಿಸ್ಟಿಲರಿಗಳನ್ನು ಹೊಂದಿವೆ.