Site icon Vistara News

Suicide Case | ಗಂಡ, ಹೆಂಡತಿ, ಮಗುವಿನ ದಾರುಣ ಸಾವಿನ ಹಿಂದಿದೆ ಕರುಣಾಜನಕ ಕತೆ

Suicide Case

ಬೆಂಗಳೂರು: ಅವರಿಬ್ಬರು ಅನ್ಯೋನ್ಯ ದಂಪತಿ, ಹಾಲು-ಜೇನಿನಂತಿರುವ ಜೋಡಿಗೆ ಮುದ್ದಾದ ಮಗಳು. ಆದರೆ ಪತಿಯ ಒಳ್ಳೆತನ, ಯಾರಿಗಾದರೂ ಕಷ್ಟ ಎಂದಾಗ ಸಹಾಯ ಮಾಡುವ ಮನೋಭಾವವೇ ಈಗ ಆ ಕುಟುಂಬದ ಬದುಕಿಗೆ ಉರುಳಾಯಿತು. ಆತ ಪತ್ನಿ ಮತ್ತು ಮುದ್ದು ಮಗಳ ಮೇಲೆ ಸೀಮೆ ಎಣ್ಣೆ ಸುರಿದು ಸುಟ್ಟು ತಾನೂ ಆತ್ಮಹತ್ಯೆ (Suicide Case) ಮಾಡಿಕೊಂಡ. ಈ ದಾರುಣ ಘಟನೆ ಅ.21ರಂದು ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಹಣಕಾಸಿನ ಮುಗ್ಗಟ್ಟೇ ಕಾರಣ ಎನ್ನುವುದು ಗೊತ್ತಾಗಿದೆ.

ಎಚ್‌ಎಸ್‌ಆರ್‌ ಲೇಔಟ್‌ ನಿವಾಸಿ ಸಂತೋಷಕುಮಾರ್ (54) ಮಲಗಿದ್ದ ಪತ್ನಿ ಓಮನ್‌ (50), ಮಗಳು ಸನುಷಾ (17) ಮೇಲೆ ಏಕಾಏಕಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ. ಕಡೆಗೆ ತಾನೂ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಕೊಠಡಿಯಲ್ಲಿ ಮೂವರೂ ದಾರುಣವಾಗಿ ಮೃತಪಟ್ಟಿದ್ದರು. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ವ್ಯಕ್ತಿ ಪತ್ನಿ, ಮಗಳನ್ನು ಕೊಂದಿದ್ದಾದರೂ ಏಕೆ ಎಂಬುದು ಪೊಲೀಸರ ಮುಂದಿದ್ದ ಪ್ರಶ್ನೆಯಾಗಿತ್ತು. ತನಿಖೆಗಿಳಿದ ಪೊಲೀಸರಿಗೆ ಇದು ಸಾಲದ ಕಾರಣಕ್ಕೆ ನಡೆದು ಹೋದ ಸಾವು ಎಂಬುದೀಗ ಗೊತ್ತಾಗಿದೆ.

ಆತ್ಮಹತ್ಯೆಗೂ ಮುನ್ನ ಸ್ನೇಹಿತನಿಗೆ ಕಳುಹಿಸಿದ್ದ ಭಾವನಾತ್ಮಕ ಸಂದೇಶ ಏನು?
ಸಂತೋಷಕುಮಾರ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ದೀರ್ಘ ಸಂದೇಶದ ಮೂಲಕ ತನ್ನ ನೋವನ್ನು ಸ್ನೇಹಿತ ಮೋಹನ್‌ ನಂಬರ್‌ಗೆ ವಾಟ್ಸ್‌ಆಪ್‌ ಮಾಡಿದ್ದ. ಬೆಳಗಿನ ಜಾವ 5.07ಕ್ಕೆ ಸ್ನೇಹಿತನಿಗೆ I Hate my life ಎಂದು ಮೆಸೇಜ್‌ ಮಾಡಿದ್ದ. 30 ಲಕ್ಷ ರೂ. ಲಾಸ್ ಆಗಿದ್ದೇನೆ, 15 ಲಕ್ಷ ಬೇರೆಯವರಿಗೆ ಕೊಟ್ಟಿದ್ದೇನೆ, ಅವರು ನನಗೆ ಮೋಸ ಮಾಡಿದರು. ಜೀವನಪೂರ್ತಿ ಬೇರೆಯವರಿಗೆ ಸಹಾಯ ಮಾಡಿದೆ. ನನ್ನ ಹೆಂಡತಿ, ಮಗಳು ತುಂಬಾ ಒಳ್ಳೆಯವರು, ನನಗೆ ಸಹಾಯ ಮಾಡಿದರು. ನನಗೆ ಸುಮಾರು ಒಂದೂವರೆ ಕೋಟಿಯಷ್ಟು ಆಸ್ತಿ ಇದೆ. ಆದರೆ ಜೀವನ‌ ತುಂಬಾ ಬೇಜಾರಾಗಿದೆ ಎಂದು ಬರೆದಿದ್ದ.

ಹಳೆ ಮನೆ ಓನರ್‌ ಮೋಸ ಮಾಡಿಬಿಟ್ಟರು
ಸಂತೋಷಕುಮಾರ್ ತನಗೆ ನಷ್ಟವಾಗಿದ್ದು ಮಾತ್ರವಲ್ಲ, ಬೇರೆಯವರಿಗೆ ಸಾಲ ನೀಡಿ ಮೋಸ ಹೋಗಿದ್ದನ್ನು ಕೂಡ ತಿಳಿಸಿದ್ದಾರೆ. ಪ್ರಮುಖವಾಗಿ ತಮ್ಮ ಹಳೆ ಮನೆ ಓನರ್ ಮೋಸ ಮಾಡಿರುವುದಾಗಿ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ. ಹಳೆ ಮನೆ ಓನರ್‌ ನನಗೆ ಮೋಸ ಮಾಡಿದರು, ನನಗೆ ಎಲ್ಲರೂ ಮೋಸ ಮಾಡಿದರು. ಹಾಗಾಗಿ ನಾನು ನನ್ನ ಜೀವನವನ್ನೇ ದ್ವೇಷಿಸುತ್ತೇನೆ. I Hate my life ಎಂದು ಮೆಸೇಜ್‌ ಕಳಿಸಿದ್ದ. ಏನೇ ಮಾಡಿದರೂ ಸಾಲ ತೀರಿಸುವುದು ಕಷ್ಟ. ತಾನೊಬ್ಬನೇ ಸತ್ತರೆ ಹೆಂಡತಿ ಮತ್ತು ಮಗಳು ಪರದಾಡಬೇಕಾಗುತ್ತದೆ ಎಂಬ ಕಾರಣದಿಂದ ಅವರಿಗೂ ಸಂತೋಷ್‌ ಬೆಂಕಿ ಹಚ್ಚಿ ಕೊಂದಿದ್ದಾನೆ.

ಬೆಳಗ್ಗೆ ಸುಮಾರು 8 ಗಂಟೆಯ ಹೊತ್ತಿಗೆ ಸಂತೋಷ್‌ನ ಮೆಸೇಜ್‌ ಓದಿದ ಮೋಹನ್‌ ಗಾಬರಿಯಿಂದ ಅಲ್ಲಿಗೆ ಹೋಗಿದ್ದರು. ಆದರೆ ಅಷ್ಟರಲ್ಲಿ ದಾರುಣ ಅಂತ್ಯವನ್ನು ಸಂತೋಷ್‌ ಕುಟುಂಬ ಕಂಡಿತ್ತು. ಸ್ನೇಹಿತ ಮೋಹನ್‌ ಈ ಬಗ್ಗೆ ಎಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೇರಳದ ಪಾಲಕ್ಕಾಡ್ ಮೂಲದ ಸಂತೋಷ್ ಆಟೋಮೊಬೈಲ್ ಬ್ಯುಸಿನೆಸ್ ಮಾಡಿಕೊಂಡಿದ್ದರು. ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ಸಾಲಗಾರರು ಅವರಿಗೆ ಕಿರುಕುಳ ನೀಡಿರುವ ಸಾಧ್ಯತೆ ಇದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಹಿನ್ನೆಲೆಯಲ್ಲಿ IPC 306 ಅಡಿಯಲ್ಲಿ ಮೋಹನ್‌ ದೂರು ನೀಡಿದ್ದಾರೆ. ಪ್ರಕರಣ ದಾಖಸಿಕೊಂಡು ಎಚ್ಎಸ್ಆರ್ ಲೇಔಟ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ | ಕಳವಿಗೆ ಬಂದ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಕಳ್ಳ!

Exit mobile version