Site icon Vistara News

Suspicious Death: ಸಿಸಿಬಿ ತೆಕ್ಕೆಗೆ ವಕೀಲೆ ಚೈತ್ರಾ ಡೆತ್ ಕೇಸ್; 15 ದಿನಗಳ ಸಿಸಿಟಿವಿ ಪರಿಶೀಲನೆ

Suspicious Death Advocate Chaitra Gowda Case

ಬೆಂಗಳೂರು: ವಕೀಲೆ ಚೈತ್ರಾ ಅವರ (Advocate Chaitra Gowda Case) ಸಾವು ಅವರ ಆಪ್ತರಿಗೆ ಇನ್ನೂ ಕೂಡ ನಿಗೂಢವಾಗಿಯೇ ಇದೆ. ಪೊಲೀಸರ ವರದಿಯಲ್ಲಿ ಇದೊಂದು ಆತ್ಮಹತ್ಯೆ ಎಂದರೂ ಕೂಡ ಅದನ್ನು ಚೈತ್ರಾ ಆಪ್ತರು ಒಪ್ಪುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಈ ಪ್ರಕರಣವನ್ನು ಸಿಸಿಬಿ ತೆಕ್ಕೆಗೆ (Suspicious Death) ವಹಿಸಲಾಗಿದೆ.

ಇದೇ ತಿಂಗಳ ಮೇ 11ರಂದು ಚೈತ್ರಾ ಗೌಡ ಅವರ ಮೃತದೇಹ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದೊಂದದು ಆತ್ಮಹತ್ಯೆ ಎಂದು ಹೇಳಲಾಗಿತ್ತು. ಪೋಸ್ಟ್‌ ಮಾರ್ಟಮ್‌ ರಿಪೋರ್ಟ್‌ನಲ್ಲಿ ಚೈತ್ರಾ ಸಾವು ಆತ್ಮಹತ್ಯೆಯಿಂದಲೇ (Self Harming) ಆಗಿದೆ ಎಂಬುದು ದೃಢಪಟ್ಟಿತ್ತು. ಆದರೆ ಅವರ ಆಪ್ತ ವಲಯ ಚೈತ್ರಾಗೌಡ ಅವರ ಸಾವು ಸಹಜವಲ್ಲ ಎಂದು ಇಂದಿಗೂ ಕೂಡ ವಾದಿಸುತ್ತಲೆ ಇದೆ. ಹೀಗಾಗಿ ವಕೀಲರ ಸಂಘದವರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಈ ಸಾವಿನ ಬಗ್ಗೆ ತನಿಖೆ ನಡೆಸಿ ಎಂದಿದ್ದರು. ಇದರ ಫಲವಾಗಿ ಪ್ರಕರಣದ ಹೆಚ್ಚಿನ ತನಿಖೆಗೆ ಪೊಲೀಸ್ ಆಯುಕ್ತರು ಸಿಸಿಬಿಗೆ ವರ್ಗಾವಣೆ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ತನಿಖೆ ಕೈಗೆತ್ತಿಕೊಂಡಿರುವ ಸಿಸಿಬಿ ಪೊಲೀಸರು ಮೊದಲು ಆಕೆಯ ಸಾವಿನ 15 ದಿನಗಳ ಹಿಂದಿನ ಸಿಸಿಟಿವಿಗಳನ್ನು ಕಲೆ ಹಾಕುವ ಕೆಲಸ ಶುರು ಮಾಡಿದೆ. ಜತೆಗೆ ಚೈತ್ರಾರ ಮೊಬೈಲ್‌ಗೆ ಬಂದ ಕರೆಗಳ ಸಿಡಿಆರ್‌ಗಳನ್ನು ಸಂಗ್ರಹಿಸಿದೆ. ಚೈತ್ರಾರಿಗೆ ಯಾರಾದರೂ ತೊಂದರೆ ಕೊಟ್ಟಿರುವುದು ಅಥವಾ ಬೆದರಿಕೆ ಹಾಕಿದ್ದರಾ ಎಂಬುದನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಹೀಗಾಗಿ ಚೈತ್ರ ಗೌಡ ಅವರ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ.

ಇದನ್ನೂ ಓದಿ: BMTC Driver : ಬಿಎಂಟಿಸಿ ಎಲೆಕ್ಟ್ರಿಕಲ್‌ ಬಸ್‌ಗೆ ಪರಭಾಷಿಕರ ನೇಮಕ; ಡಿಸಿ ಕಚೇರಿಗೆ ನುಗ್ಗಿ ಕನ್ನಡಿಗರ ಆಕ್ರೋಶ

ಏನಿದು ಪ್ರಕರಣ?

2016ರಲ್ಲಿ ಮದುವೆ ಆಗಿದ್ದ ಶಿವಕುಮಾರ್ ಹಾಗೂ ಚೈತ್ರಾ ದಂಪತಿಗೆ 5 ವರ್ಷದ ಒಂದು ಮಗು ಇದೆ. ಈ ದಂಪತಿ ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಚೈತ್ರಾ ಹೈಕೋರ್ಟ್ ವಕೀಲೆ ಆಗಿದ್ದರೆ, ಶಿವಕುಮಾರ್ ಕೆಐಡಿಬಿಯಲ್ಲಿ ಉಪವಿಭಾಗಾಧಿಕಾರಿ ಆಗಿದ್ದರು. ಸಂಜಯನಗರದ ಅಣ್ಣಯ್ಯಪ್ಪ ಲೇಔಟ್‌ನ ಅಪಾರ್ಟ್‌ಮೆಂಟ್‌ನ ಮೂರು ಫ್ಲಾಟ್‌ನಲ್ಲಿ ಒಂದರಲ್ಲಿ ಚೈತ್ರಾ ಕುಟುಂಬ ಹಾಗೂ ಇನ್ನೊಂದು ಫ್ಲಾಟ್‌ನಲ್ಲಿ ಮೃತಳ ತಮ್ಮ ವಾಸವಾಗಿದ್ದರು. ಮೇ 11ರ ಶನಿವಾರ ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಪತಿ ಶಿವಕುಮಾರ್ ಜತೆ ನಂತರ ತಮ್ಮನನೊಟ್ಟಿಗೂ ಚೈತ್ರಾ ಮಾತನಾಡಿದ್ದ ಚೈತ್ರಾ 11 ಗಂಟೆ ಯಾರ ಫೋನ್‌ ಕರೆಗೂ ಸ್ಪಂದಿಸಿರಲಿಲ್ಲ. ಹೀಗಾಗಿ ಕಿಟಕಿಯಲ್ಲಿ ನೋಡಿದಾಗ ಫ್ಯಾನ್‌ಗೆ ವೇಲ್‌ನಿಂದ ನೇಣು ಬಿಗಿದುಕೊಂಡಿರುವುದು ಕಂಡು ಬಂದಿತ್ತು. ಕೂಡಲೇ ಚೈತ್ರಾಳ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಚೈತ್ರಾರ ಬೆಡ್‌ ರೂಮಿನಲ್ಲಿ ಒಂದು ಪುಟದ ಡೆತ್ ನೋಟ್ ಪತ್ತೆಯಾಗಿತ್ತು. ಆದರೆ ಅದು ಮೂರು ತಿಂಗಳ ಹಿಂದೆ ಅಂದರೆ ಮಾರ್ಚ್ 11ರಂದು ಬರೆಯಲಾಗಿತ್ತು. ಡೆತ್‌ನೋಟ್‌ನಲ್ಲಿ, ನನ್ನ ಪತಿ ತುಂಬಾ ಒಳ್ಳೆಯವರು. ನೀವೂ ಜೀವನವನ್ನು ಎಂಜಾಯ್ ಮಾಡಿ. ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ. ನಾನು ಡಿಪ್ರೆಶನ್‌ನಿಂದ ಬಳಲುತ್ತಿದ್ದೇನೆ. ಅದರಿಂದ ಹೊರ ಬರಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ. ಆದರೆ ಆಗುತ್ತಿಲ್ಲ, ನಾನು ನನ್ನ ಜೀವನವನ್ನು ಇಲ್ಲಿಗೆ ಕೊನೆಗೊಳಿಸುತ್ತಿದ್ದೆನೆ. ಮಗುವನ್ನು ಚೆನ್ನಾಗಿ ನೋಡಿಕೊಂಡು ಲೈಫ್ ಎಂಜಾಯ್ ಮಾಡಿ. ಸೂಸೈಡ್ ಮಾಡಿಕೊಳ್ಳುವುದು ತಪ್ಪು ಎಂದು ಗೊತ್ತಿದೆ. ಆದರೂ ಸಹ ಆತ್ಮಹತ್ಯೆಯನ್ನು ಮಾಡಿಕೊಂಡು ನನ್ನ ಜೀವನಕ್ಕೆ ಅಂತ್ಯವಾಡಿದ್ದೇನೆ ಎಂದು ಬರೆದಿದ್ದರು.

ಇತ್ತ ಚೈತ್ರಾ ಕುಟುಂಬಸ್ಥರು ಇದು ಕೊಲೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಚೈತ್ರಾ ಪತಿ,‌ ಕೆಎಎಸ್ ಅಧಿಕಾರಿ ಶಿವಕುಮಾರ್ ಅವರನ್ನು ಪೊಲೀಸರು ವಿಚಾರಣೆ ಮಾಡಿದ್ದರು. ವಿಚಾರಣೆ ವೇಳೆ, ಪತ್ನಿಯೊಂದಿಗೆ ಯಾವುದೇ ವೈಷಮ್ಯ ಇರಲಿಲ್ಲ. ಜತೆಗೆ ಯಾವುದೇ ಹಣಕಾಸಿನ ಸಮಸ್ಯೆ ಕೂಡ ಇರಲಿಲ್ಲ ಎಂದು ಶಿವಕುಮಾರ್‌ ತಿಳಿಸಿದ್ದರು. ಆದರೆ ಪ್ರಾಪರ್ಟಿ ವಿಚಾರವಾಗಿ ಆಗಾಗ್ಗೆ ಸ್ವಲ್ಪ ಜಗಳ ನಡೀತಾ ಇತ್ತು. ಇದರಿಂದ ಖಿನ್ನತೆಗೊಳಗಾಗಿದ್ದಳು ಎಂದು ಮಾಹಿತಿ ನೀಡಿದ್ದರು.

ಇದರೊಟ್ಟಿಗೆ ಮರಣೋತ್ತರ ಪರೀಕ್ಷೆಯಲ್ಲಿ ಇದು ಆತ್ಮಹತ್ಯೆ ಎಂದು ಕಂಡುಬಂದಿತ್ತು. ಜತೆಗೆ ಮನೆಯಲ್ಲಿ ಸಿಕ್ಕ ಡೆತ್ ನೋಟ್ ಕೂಡ ಚೈತ್ರಾ ಬರೆದಿರುವುದು ಖಚಿತವಾಗಿತ್ತು. ಚೈತ್ರಾ, ತಮ್ಮ ಕುಟುಂಬಸ್ಥರ ಬಳಿ ಮೂರು ತಿಂಗಳ ಹಿಂದೆಯೇ ತಾವು ಸಾಯುವುದಾಗಿ ಮಾತಾಡಿದ್ದರು. ಈ ಮಾತಾಡಿದ ಬಳಿಕವೇ ಡೆತ್‌ ನೋಟ್‌ ಬರೆದಿಟ್ಟಿರುವುದು ಗೊತ್ತಾಗಿತ್ತು. ಆದರೂ ಈಕೆಯ ಸಾವಿನ ಕುರಿತು ಆಪ್ತರು, ವಕೀಲ ಸಂಘದವರು ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ನಗರ ಪೊಲೀಸ್‌ ಆಯುಕ್ತರು ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version