ಬೆಂಗಳೂರು: ರಾಜ್ಯದಲ್ಲಿ ಕೆಲವು ಸಮುದಾಯದವರು ಜಾತಿ ಗಣತಿ (Caste Census) ವರದಿ ಸ್ವೀಕರಿಸಬಾರದು ಎಂದು ಒತ್ತಾಯಿಸುತ್ತಿದ್ದರೆ ಇನ್ನು ಕೆಲವು ಸಮುದಾಯದವರು (Some Communities) ಸ್ವೀಕಾರ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ರಾಜ್ಯದ ಹಿಂದುಳಿದ ಸಮುದಾಯಗಳ ಮಠಾಧೀಶರು (Other Backward caste Swameejis) ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ಭೇಟಿ ಮಾಡಿ ವರದಿ ಸ್ವೀಕರಿಸುವಂತೆ ಮನವಿ ಮಾಡಿದರು. ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಮನವಿ ಸಲ್ಲಿಸಿದರು.
ಭೋವಿ ಸಮುದಾಯ ಚಿತ್ರದುರ್ಗದ ಸಿದ್ದರಾಮೇಶ್ವರ ಸ್ವಾಮೀಜಿ , ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ, ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಶ್ರೀಗಳು ಹಾಗೂ ಹಿಂದುಳಿದ ಜಾತಿಗಳ ಮಠಗಳ ಸ್ವಾಮೀಜಿಗಳು ನಿಯೋಗದಲ್ಲಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಕೆ.ಎ. ದಯಾನಂದ ಉಪಸ್ಥಿತರಿದ್ದರು.
ಸ್ವಾಮೀಜಿಗಳಿಂದ ಮನವಿಯನ್ನು ಸ್ವೀಕರಿಸಿದ ಸಿದ್ದರಾಮಯ್ಯ ಅವರು ಜಾತಿ ಗಣತಿ ವರದಿ ಸಲ್ಲಿಕೆ ಪ್ರಕ್ರಿಯೆಯ ವಿವರವನ್ನು ನೀಡಿದರು. ಹಿಂದುಳಿದ ವರ್ಗಗಳ ಆಯೋಗಕ್ಕೆ ವರದಿ ನೀಡಲು ಎರಡು ತಿಂಗಳ ಕಾಲ ಅವಧಿ ವಿಸ್ತರಣೆ ಮಾಡಲಾಗಿದೆ. ಜಯಪ್ರಕಾಶ್ ಹೆಗ್ಡೆ ಅವರು ಕಾಂತರಾಜು ಅವರ ವರದಿಯನ್ನೇ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ವರದಿಯನ್ನು ಸ್ವೀಕರಿಸಿ , ಈ ಬಗ್ಗೆ ಕಾನೂನು ಸಲಹೆ ಪಡೆದು ಮುಂದುವರೆಯಲಾಗುವುದು ಎಂದರು. ಏಕಾಏಕಿಯಾಗಿ ವರದಿಯನ್ನು ಅನುಷ್ಠಾನ ಮಾಡಲಾಗದು, ಅದಕ್ಕೆ ಸಾಕಷ್ಟು ಪ್ರಕ್ರಿಯೆಗಳಿವೆ ಎಂದರು.
ಇದೇ ಸಂದರ್ಭದಲ್ಲಿ ಮಠಗಳಿಗೆ ಜಮೀನು ಕೊಡುವ ಬಗ್ಗೆ ಸ್ವಾಮೀಜಿಗಳು ಪ್ರಸ್ತಾಪಿಸಿದರು. ತಹಸೀಲ್ದಾರ್ ಅವರು ಈ ಬಗ್ಗೆ ವರದಿ ನೀಡಲು ಸೂಚಿಸಿದ್ದು, ವರದಿಯನ್ನು ಶೀಘ್ರವಾಗಿ ನೀಡುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ ಸೂಚಿಸಿದರು. ಶ್ರಮಿಕ ವರ್ಗದವರಿಗೆ ಗ್ಯಾರಂಟಿಗಳು ಹೆಚ್ಚು ಉಪಯುಕ್ತ ವಾಗಿವೆ ಎಂದು ಸ್ವಾಮೀಜಿಗಳು ಅಭಿಪ್ರಾಯ ಪಟ್ಟರು.