ಬೆಂಗಳೂರು: ಐಸ್ ಕ್ರೀಂ ಡೆಲಿವರಿ ಮಾಡಲು ವಿಫಲವಾದ ಸ್ವಿಗ್ಗಿ ಸಂಸ್ಥೆಗೆ (Swiggy fined), ಗ್ರಾಹಕ ನ್ಯಾಯಾಲಯವು ವ್ಯಾಜ್ಯ ವೆಚ್ಚ ಸೇರಿ 5000 ರೂ. ದಂಡ ವಿಧಿಸಿದೆ. 2023ರಲ್ಲಿ ಗ್ರಾಹಕರೊಬ್ಬರು ಸ್ವಿಗ್ಗಿ ಆ್ಯಪ್ ಮೂಲಕ ಐಸ್ ಕ್ರೀಂ ಬುಕ್ ಮಾಡಿದ್ದರು. ಅದರೆ, ಐಸ್ ಕ್ರೀಂ ಡೆಲಿವರಿ ಮಾಡುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಗ್ರಾಹಕರೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಆರ್ಡರ್ ಮಾಡಿದ ಉತ್ಪನ್ನವನ್ನು ದೂರುದಾರರಿಗೆ ತಲುಪಿಸದಿದ್ದರೂ ಹಣ ಮರುಪಾವತಿ ಮಾಡಿರಲಿಲ್ಲ. ಸ್ವಿಗ್ಗಿ ಕಡೆಯಿಂದ ತಪ್ಪು ನಡೆದಿದೆ ಎಂದು ದೂರುದಾರರು ಸಾಬೀತುಪಡಿಸಿದ್ದಾರೆ. ಇದು ಮೋಸದ ವ್ಯಾಪಾರವಾಗಿದ್ದು, ಗ್ರಾಹಕನಿಗೆ ವ್ಯಾಜ್ಯ ಶುಲ್ಕ 2000 ರೂ. ಹಾಗೂ ಪರಿಹಾರ 3000 ರೂ. ನೀಡಬೇಕು ಎಂದು ಸ್ವಿಗ್ಗಿ ಸಂಸ್ಥೆಗೆ ಕೋರ್ಟ್ ಸೂಚನೆ ನೀಡಿದೆ.
2023ರ ಜನವರಿಯಲ್ಲಿ ನಗರದಲ್ಲಿ ಗ್ರಾಹಕರೊಬ್ಬರು, ಸ್ವಿಗ್ಗಿ ಆ್ಯಪ್ ಮೂಲಕ ಚಾಕೋಲೆಟ್ ಐಸ್ ಕ್ರೀಂ ಅನ್ನು ಆರ್ಡರ್ ಮಾಡಿದ್ದರು. ಆದರೆ, ಐಸ್ ಕ್ರೀಂ ಡೆಲಿವರಿ ಆಗದಿದ್ದರೂ, ತಲುಪಿದೆ ಎಂದು ಸಂದೇಶ ಬಂದಿತ್ತು. ಇದರಿಂದ ಗ್ರಾಹಕ, ನ್ಯಾಯಾಲಯದ ಮೊರೆ ಹೋಗಿದ್ದರು.
ಸ್ವಿಗ್ಗಿ ಸಂಸ್ಥೆಯು, ತಾವು ಗ್ರಾಹಕರು ಮತ್ತು ಥರ್ಡ್-ಪಾರ್ಟಿ ರೆಸ್ಟೋರೆಂಟ್ ಅಥವಾ ವ್ಯಾಪಾರಿಗಳ ನಡುವಿನ ಮಧ್ಯವರ್ತಿಯಾಗಿದ್ದೇವೆ. ಡೆಲಿವರಿ ಬಾಯ್ ತಪ್ಪಿಗೆ ತಮ್ಮನ್ನು ಹೊಣೆಗಾರನನ್ನಾಗಿ ಮಾಡಲು ಸಾಧ್ಯವಿಲ್ಲ ಮತ್ತು ಆ ಸಮಯದಲ್ಲಿ ಆರ್ಡರ್ ಅನ್ನು ತಲುಪಿಸಲಾಗಿದೆಯೇ ಎಂದು ಪರಿಶೀಲಿಸಲು ಸಾಧ್ಯವಿಲ್ಲ ಎಂದು ಸಮರ್ಥಿಸಿಕೊಂಡಿತ್ತು.
ಇದನ್ನೂ ಓದಿ | MDH, Everest Spices: ಎವರೆಸ್ಟ್, ಎಂಡಿಎಚ್ ಮಸಾಲೆ ಪೌಡರ್‌ಗಳ ಮಾಹಿತಿ ಸಂಗ್ರಹಕ್ಕೆ ಮುಂದಾದ ಅಮೆರಿಕ
ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ವಿಜಯಕುಮಾರ್ ಎಂ ಪಾವಲೆ, ವಿ ಅನುರಾಧಾ ಮತ್ತು ರೇಣುಕಾದೇವಿ ದೇಶಪಾಂಡೆ ಅವರನ್ನೊಳಗೊಂಡ ನ್ಯಾಯಪೀಠ, ಹಣ ಮರುಪಾವತಿಗಾಗಿ ಗ್ರಾಹಕ ನೀಡಿದ ಕಾನೂನು ನೋಟಿಸ್‌ಗೆ ಪ್ರತಿಕ್ರಿಯಿಸುವಲ್ಲಿ ಸ್ವಿಗ್ಗಿ ವಿಫಲವಾಗಿದೆ ಎಂದು ಕೋರ್ಟ್ ಗಮನಿಸಿದೆ. ಇನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಹೊಣೆಗಾರಿಕೆಯಿಂದ ಮಧ್ಯವರ್ತಿಗಳನ್ನು ರಕ್ಷಿಸಲಾಗಿದೆ ಎಂಬ ಸ್ವಿಗ್ಗಿಯ ವಾದವನ್ನು ತಿರಸ್ಕರಿಸಿರುವ ಕೋರ್ಟ್, ಈ ವಿನಾಯಿತಿ ಕೇವಲ ಮಾಹಿತಿಯ ಪ್ರಸಾರಕ್ಕೆ ಸೀಮಿತವಾಗಿದ್ದು, ಸರಕು ಮತ್ತು ಸೇವೆಗಳ ಮಾರಾಟಕ್ಕೆ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ.
ಸೇವೆಯಲ್ಲಿ ನ್ಯೂನ್ಯತೆ ಮತ್ತು ಮೋಸದ ವ್ಯಾಪಾರ ಮಾಡಿದ ಕಾರಣ ಐಸ್ ಕ್ರೀಂಗೆ ನೀಡಿದ್ದ 187 ರೂ. ಮಾತ್ರವಲ್ಲದೇ ವ್ಯಾಜ್ಯ ವೆಚ್ಚ ಹಾಗೂ ಪರಿಹಾರ ಸೇರಿ 5000 ರೂ.ಗಳನ್ನು ಗ್ರಾಹಕನಿಗೆ ನೀಡಲು ಸ್ವಿಗ್ಗಿ ಸಂಸ್ಥೆಗೆ ಸೂಚಿಸಲಾಗಿದೆ.