ಬೆಂಗಳೂರು : ಟಾಟಾ ಮೋಟಾರ್ಸ್ (Tata Motors)ನ ಅಧೀನ ಸಂಸ್ಥೆಯಾಗಿರುವ ಟಿಎಂಎಲ್ ಸ್ಮಾರ್ಟ್ಸಿಟಿ ಮೊಬಿಲಿಟಿ ಸೊಲ್ಯುಶನ್ಸ್ ಬೆಂಗಳೂರೂ ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) 921 ಎಲೆಕ್ಟ್ರಿಕ್ ಬಸ್ಗಳನ್ನು ಪೂರೈಸುವ ಒಪ್ಪಂದ ಮಾಡಿಕೊಂಡಿದೆ. ಶುಕ್ರವಾರ ಕಂಪನಿಯ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು ಮುಂದಿನ 12 ವರ್ಷಗಳ ಅವಧಿಗೆ ಬಸ್ಗಳನ್ನು ಪೂರೈಕೆ ಮಾಡಲಿದೆ.
ಕಡಿಮೆ ಎತ್ತರದ ಮೆಟ್ಟಿಲುಗಳನ್ನು ಹೊಂದಿರುವ 12 ಮೀಟರ್ ಉದ್ದದ ಟಾಟಾ ಸ್ಟಾರ್ಬಸ್ ಎಲೆಕ್ಟ್ರಿಕ್ ವಾಹನಗಳನ್ನು ಈ ಒಪ್ಪಂದದ ಪ್ರಕಾರ ಟಾಟಾ ಮೋಟಾರ್ಸ್ ಒದಗಿಸಬೇಕಾಗಿದೆ. ಇದು ನಗರದ ಪ್ರಯಾಣಕ್ಕೆ ಸೂಕ್ತವಾಗಿರುವ ಬಸ್ಗಳೆಂದು ಕಂಪನಿ ಹೇಳಿದೆ.
ಭಾರತದ ನಾನಾ ನಗರಗಳ ಸಾರಿಗೆ ಸಂಸ್ಥೆಗಳಿಗೆ ಈಗಾಗಲೇ 730 ಬಸ್ಗಳನ್ನು ಸರಬರಾಜು ಮಾಡಲಾಗಿದ್ದು, ಒಟ್ಟಾರೆ 5.5 ಕೋಟಿ ಕಿಲೋ ಮೀಟರ್ ಓಡಾಟ ನಡೆಸಿವೆ ಎಂದು ಹೇಳಿದೆ.
ಒಪ್ಪಂದದ ಕುರಿತು ಮಾತನಾಡಿರುವ ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕಿ ಜಿ ಸತ್ಯವತಿ, ವಾಯುಮಾಲಿನ್ಯ ರಹಿತವಾಗಿರುವ ಈ ಬಸ್‌ಗಳು ಬೆಂಗಳೂರಿನ ನಾಗರಿಕರಿಗೆ ಅನುಕೂಲ ಉಂಟು ಮಾಡಲಿವೆ. ಟಾಟಾ ಮೋಟಾರ್ಸ್ನ ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರದಲ್ಲಿನ ಅನುಭವ ತಡೆ ರಹಿತ ಸೇವೆಗೆ ಪೂರಕವಾಗಿರಲಿದೆ, ಎಂದು ಹೇಳಿದ್ದಾರೆ.
ಒಪ್ಪಂದದ ಕುರಿತು ಟಿಎಮ್‌ಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲ್ಯೂಶನ್ಸ್ ಲಿಮಿಟೆಡ್‌ನ ಸಿಇಒ ಅಸೀಮ್ ಕುಮಾರ್ ಮುಖೋಪಾಧ್ಯಾಯ ಮಾತನಾಡಿ “ಇದೊಂದು ಸ್ಮರಣೀಯ ಸಂದರ್ಭ. ಈ ಎಲೆಕ್ಟ್ರಿಕ್ ಬಸ್‌ಗಳು, ಬೆಂಗಳೂರಿನ ಪ್ರಯಾಣಿಕರಿಗೆ, ದೀರ್ಘಕಾಲದ, ಸುರಕ್ಷಿತ ಮತ್ತು ಆರಾಮದಾಯಕವಾದ ಸೇವೆ ಒದಗಿಸಲಿದೆ.”ಎಂದು ಹೇಳಿದರು.
ಇದನ್ನೂ ಓದಿ | TATA Motors | ನವೆಂಬರ್ 7ರಿಂದ ಟಾಟಾ ಮೋಟಾರ್ಸ್ ಕಾರುಗಳ ದರ ಏರಿಕೆ