ಬೆಂಗಳೂರು: ಈ ಹಿಂದೆ ಕೂಡ ಟೆಕ್ಕಿಯೊಬ್ಬರು (Techie Missing) ನಿಗೂಢವಾಗಿ ನಾಪತ್ತೆಯಾಗಿದ್ದರು. ಇದರ ಬೆನ್ನಲ್ಲೇ ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದ ಮತ್ತೊಬ್ಬ ಟೆಕ್ಕಿ ನಾಪತ್ತೆಯಾಗಿದ್ದಾರೆ. ಪತಿಯನ್ನು ಹುಡುಕಿ ಕೊಡಿ ಪ್ಲೀಸ್ ಅಂತ ಪತ್ನಿ ಬೇಡಿಕೊಳ್ಳುತ್ತಿದ್ದಾರೆ.
ವಿಪುಲ್ ಗುಪ್ತಾ ಎಂಬ ಟೆಕ್ಕಿ ಕಾಣೆಯಾದವರು. ಆತ ಹೊರಗೆ ಹೋಗಿದ್ದಕ್ಕೆ ಸುಳಿವು ಎಂಬಂತೆ ಒಂದು ಸಿಸಿಟಿವಿ ವಿಡಿಯೋ ಬಿಟ್ಟರೆ, ಎಲ್ಲಿ ಹೋದ ಎಂಬ ಮಾಹಿತಿ ಮಾತ್ರ ಕಿಂಚಿತ್ತು ಕುಟುಂಬಸ್ಥರಿಗಿಲ್ಲ. ಪತಿಯನ್ನು ಹುಡುಕಿಕೊಡಿ ಎಂದು ಪತ್ನಿ ಶ್ರೀಪರ್ಣದತ್ತ ಗೋಗರೆಯುತ್ತಿದ್ದಾರೆ.
ಸೋಲೋ ರೈಡ್‌ಗೆ ಹೋಗುತ್ತಿದ್ದವನ ಸುಳಿವೇ ಇಲ್ಲ!
ಈ ಹಿಂದೆ ಅಮಿತಾಬ್ ಎಂಬ ಟೆಕ್ಕಿ ಕೂಡ ಇದೇ ರೀತಿ ನಿಗೂಢವಾಗಿ ನಾಪತ್ತೆಯಾಗಿದ್ದ . ಆದರೆ ಆತನ ಸುಳಿವು ಇಂದಿಗೂ ಸಿಕ್ಕಿಲ್ಲ. ಇನ್ನು ಕೊಡಿಗೇಹಳ್ಳಿಯ ಟಾಟಾ ನಗರ ನಿವಾಸಿಯಾಗಿರುವ ವಿಪುಲ್‌ಗೆ ಇಬ್ಬರು ಮಕ್ಕಳಿದ್ದಾರೆ. ಪತಿ -ಪತ್ನಿ ಇಬ್ಬರಿಗೂ ಪೋಷಕರಿಲ್ಲ. ಆದರೂ ದುಡಿದು ತಮ್ಮ ಸಂಸಾರ ಸಾಗಿಸುತ್ತಿದ್ದರು. ಶ್ರೀಮಂತಿಕೆ ಇಲ್ಲದಿದ್ದರೂ ಜೀವನಕ್ಕಾಗುವಷ್ಟು ಸಿರಿವಂತರೇ ಆಗಿದ್ದರು. ಅಂತಹ ಕುಟುಂಬದಲ್ಲಿ ಏಕಾಏಕಿ ಪತಿ ಕಾಣೆಯಾಗಿರುವುದು ಪತ್ನಿ ಶ್ರೀಪರ್ಣ ದತ್ತಾಳಿಗೆ ನಿಜಕ್ಕೂ ಆತಂಕ ಮೂಡಿಸಿದೆ.
ವಿಪುಲ್ ಕಾಣೆಯಾಗಿ ಹೆಚ್ವು ಕಮ್ಮಿ ಎಂಟು ದಿನಗಳಾಗಿದೆ. ಆಗಸ್ಟ್ 4ರಂದು ಮನೆ ಪಕ್ಕದಲ್ಲಿರುವ ಹೆಚ್ ಡಿ ಎಫ್ ಸಿ ಬ್ಯಾಂಕ್‌ನಲ್ಲಿ ಒಟ್ಟು 1,80,000 ರೂ. ಹಣ ಡ್ರಾ ಮಾಡಿದ್ದಾರೆ. ನಂತರ ನಿಂಜಾ ಬೈಕ್ ತೆಗೆದುಕೊಂಡು ಹೊರ ಹೋದವನ ಸುಳಿವೂ ಕೂಡ ಇರಲಿಲ್ಲ. ಎಲ್ಲಿಗಾದರೂ ಹೋಗುವಾಗ ಪತ್ನಿಗೆ ಹೇಳಿ ಹೋಗಿದ್ದರಂತೆ. ಆದರೆ ಈ ಬಾರಿ ಯಾರಿಗೂ ವಿಚಾರ ತಿಳಿಸದೆ ಮನೆಯಿಂದ ಹೊರ ಹೋಗಿದ್ದಾರೆ. ರಾತ್ರಿಯಾದರೂ ಬಾರದ ಹಿನ್ನೆಲೆ ಮೊಬೈಲ್ ನಂಬರ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬಂದಿದೆ. ಆತನ ಸ್ನೇಹಿತರಿಗೂ ಕರೆ ಮಾಡಿ ಕೇಳಿದಾಗ ಅವರ್ಯಾರಿಗೂ ವಿಪುಲ್ ಬಗ್ಗೆ ಮಾಹಿತಿಯೇ ಇರಲಿಲ್ಲ.
ಇದನ್ನೂ ಓದಿ: Murder Case : ಶೆಡ್ಡಿಗೆ ಬಾರೋ ಎಂದ ಸ್ನೇಹಿತ; ಮಲಗಿದ್ದವನ ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರ ಕೊಲೆ
ಈ ಹಿಂದೆ ಸೋಲೋ ರೈಡ್ ಎಂದು ಪತ್ನಿಗೆ ಹೇಳಿ ತನ್ನ ನಿಂಜಾ ಬೈಕ್ ತೆಗೆದುಕೊಂಡು ಊರು ಸುತ್ತಲು ಹೋಗಿದ್ದರಂತೆ. ಆದರೂ ಪ್ರತಿ ದಿನ ಕಾಂಟಾಕ್ಟ್‌ನಲ್ಲಿರುತ್ತಿದ್ದರು. ಹೇಳಿದಂತೆ ಮೂರ್ನಾಲ್ಕು ದಿನಗಳಲ್ಲಿ ವಾಪಾಸ್ ಬರುತ್ತಿದ್ದರಂತೆ. ಆದರೆ ಈ ಬಾರಿ ಆತನ ಸುಳಿವೇ ಇರದ ಕಾರಣ ಎಲ್ಲಾ ಕಡೆ ಹುಡುಕಿ ಕೊನೆಗೆ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಎಲ್ಲೋ ಸೋಲೋ ರೈಡ್ ಹೋಗಿಬೇಕೆಂದು ಪೊಲೀಸರೂ ಕೂಡ ನಿರ್ಲಕ್ಷ್ಯ ಮಾಡಿದ್ದರಂತೆ. ನಂತರ ಒತ್ತಾಯ ಮಾಡಿದ ಬಳಿಕ ಎಫ್ ಐ ಆರ್ ಮಾಡಿದ್ದಾರೆಂದು ಶ್ರೀಪರ್ಣ ಆರೋಪಿಸಿದ್ದಾರೆ.
ಸದ್ಯ ವಿಪುಲ್ ಕಾಣೆಯಾಗಿ ಇಂದಿಗೆ ಎಂಟು ದಿನಗಳಾಗಿದೆ. ಪತಿಯ ಬಗ್ಗೆ ಸಣ್ಣ ಸುಳಿವೂ ಇರದ ಹಿನ್ನೆಲೆ ಪತ್ನಿ ಶ್ರೀಪರ್ಣ ನೊಂದಿದ್ದು ಕೊನೆಗೆ ಪೊಲೀಸರಿಗೆ ಪೋಸ್ಟ್ ಮಾಡಿ ಅಳಲು ತೋಡಿಕೊಂಡಿದ್ದಾರೆ. ಸದ್ಯ ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ