ಬೆಂಗಳೂರು: ಅತ್ಯಂತ ಸುರಕ್ಷಿತ ಎಂದು ಹೇಳಲಾದ ನಮ್ಮ ಮೆಟ್ರೋದಲ್ಲಿ (Namma Metro) ಮತ್ತೊಬ್ಬ ಯುವತಿ ಲೈಂಗಿಕ ಕಿರುಕುಳಕ್ಕೆ (Physical Abuse) ಒಳಗಾಗಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ (Majestic Metro Railway station) ಗುರುವಾರ (ಡಿಸೆಂಬರ್ 7) ಬೆಳಗ್ಗೆ 9.40ರ ಸುಮಾರಿಗೆ ಈ ಘಟನೆ ನಡೆದಿದೆ. ಕಿರುಕುಳಕ್ಕೆ ಒಳಗಾದ ಯುವತಿ ಕೂಗಿಕೊಂಡಾಗ ಅಲ್ಲಿದ್ದ ಮೆಟ್ರೋ ಸಿಬ್ಬಂದಿ ಕೂಡಲೇ ಅ ಕೀಚಕನನ್ನು ಹಿಡಿದಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಒಬ್ಬ ಯುವತಿಗೆ ಮೆಟ್ರೋದಲ್ಲಿ ಕಿರುಕುಳ (Physical abuse in Metro) ನೀಡಲಾಗಿತ್ತು.
22 ವರ್ಷದ ಯುವತಿ ರೈಲಿನಲ್ಲಿದ್ದಾಗ ರೈಲಿನ ಜನ ಸಂದಣಿ ಮತ್ತು ಒತ್ತಡದ ಪರಿಸ್ಥಿತಿಯ ಲಾಭವನ್ನು ಎತ್ತಿದ ಲೋಕೇಶ್ ಅಲಿಯಾಸ್ ಲೋಕಿ ಎಂಬಾತ ಆಕೆಯ ಮೈಕೈ ಮುಟ್ಟಿ ಕಿರುಕುಳ ನೀಡಿದ್ದಾನೆ. ಅನುಚಿತವಾಗಿ ವರ್ತಿಸಿದ ಆತ ರೈಲು ನಿಲ್ಲುತ್ತಿದ್ದಂತೆಯೇ ರೈಲಿನಿಂದ ಇಳಿದು ಎಸ್ಕಲೇಟರ್ ಮೂಲಕ ಎಸ್ಕೇಪ್ ಆಗಲು ಯತ್ನಿಸಿದ್ದ. ಆಗ ಯುವತಿ ಜೋರಾಗಿ ಕೂಗಿಗೊಂಡಾಗ ಭದ್ರತಾ ಸಿಬ್ಬಂದಿ ಆತನನ್ನು ಅಲ್ಲೇ ಹಿಡಿದುಹಾಕಿದ್ದಾರೆ. ಈ ಬಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಹಾಗಿದ್ದರೆ ಮೆಟ್ರೋದಲ್ಲಿ ಆಗಿದ್ದೇನು?
ಐಟಿ ಉದ್ಯೋಗಿಯಾಗಿರುವ 22 ವರ್ಷದ ಈ ಯುವತಿ ಬೆಳಗ್ಗೆ 9.40 ಗಂಟೆಗೆ ಐಟಿ ಉದ್ಯೋಗಿ ಮೆಟ್ರೋ ಹತ್ತಿದ್ದಾರೆ. ರಾಜಾಜಿನಗರದಲ್ಲಿ ಮೆಟ್ರೋ ಹತ್ತಿದ ಯುವತಿಗೆ ಮೆಜೆಸ್ಟಿಕ್ ನಿಲ್ದಾಣ ಬರುತ್ತಿದ್ದಂತೆಯೇ ಜನಸಂದಣಿ ಹೆಚ್ಚಾದಾಗ ಒಬ್ಬ ಯುವಕ ಹಿಂಬದಿಯಲ್ಲಿ ನಿಂತು ಅನುಚಿತವಾಗಿ ವರ್ತಿಸಲು ಶುರು ಮಾಡಿದ್ದಾನೆ. ಕೆಳಭಾಗದಲ್ಲಿ ಮೈಗೆ ಕೈ ಆಡಿಸಿದ್ದಾನೆ. ಆರಂಭದಲ್ಲಿ ಇದು ಒತ್ತಡದಿಂದ ಆಗುತ್ತಿರುವುದು ಎಂದು ತಿಳಿದರಾದರೂ ನಂತರ ಉದ್ದೇಶಪೂರ್ವಕವಾಗಿ ಅನುಚಿತವಾಗಿ ವರ್ತಿಸುತ್ತಿರುವುದು ಗೊತ್ತಾದ ಕೂಡಲೇ ಪ್ರತಿಭಟಿಸಿದರು.
ಆಕೆ ಮೆಟ್ರೋ ರೈಲಿನ ಒಳಗೇ ಜೋರಾಗಿ ಕೂಗಿಕೊಂಡರು. ಅಷ್ಟು ಹೊತ್ತಿಗೆ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ ಬಂದಿತ್ತು. ಇಲ್ಲಿ ರೈಲು ನಿಲ್ಲುತ್ತಿದ್ದಂತೆಯೇ ಈ ಕಾಮುಕ ಬೇಗಬೇಗನೆ ಇಳಿದು ಓಡಲು ಯತ್ನಿಸಿದ. ಆಗ ಯುವತಿ ಮತ್ತು ಸಾರ್ವಜನಿಕರ ಕೂಗು ಕೇಳಿಸಿಕೊಂಡು ಆತನನ್ನು ಅಲ್ಲೇ ಹಿಡಿದು ಹಾಕಿದರು.
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಭದ್ರತಾ ಅಧಿಕಾರಿ ಪುಟ್ಟಮಾದಯ್ಯ ಮತ್ತು ಸಹಾಯಕ ಭದ್ರತಾ ಅಧಿಕಾರಿ ದಿವಾಕರ್ ಸ್ಥಳಕ್ಕೆ ಆಗಮಿಸಿ ಆರೋಪಿ ಲೊಕೇಶ್‌ನನ್ನು (30 ವರ್ಷ) ಲಾಕ್ ಮಾಡಿ ಉಪ್ಪಾರ ಪೇಟೆ ಪೊಲೀಸರಿಗೊಪ್ಪಿಸಿದರು.
ಇದನ್ನೂ ಓದಿ: Namma Metro : ಮೆಟ್ರೊದಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಕೆಂಪು ಅಂಗಿಯವ ಯಾರು?
ಇವನು ಸಾಮಾನ್ಯದವನಲ್ಲ!
ಉಪ್ಪಾರಪೇಟೆ ಪೊಲೀಸರು ತನಿಖೆ ನಡೆಸುತ್ತಿದ್ದಂತೆಯೇ ಕಾಮುಕ ಲೋಕೇಶ್‌ನ ಕರಾಳ ಇತಿಹಾಸ ಬಯಲಾಗಿದೆ. ಈ ದುಷ್ಟ ಲೋಕಿಯ ಮೇಲೆ ಈ ಹಿಂದೆ ಕೂಡ ಕೆಲವು ಕೇಸ್‌ಗಳು ಇರುವುದು ಪತ್ತೆಯಾಗಿದೆ.
ಈ ಹಿಂದೆ ಬಿಎಂಟಿಸಿ ಬಸ್‌ನಲ್ಲಿ ಯುವತಿಯ ಮೊಬೈಲ್ ಕಳ್ಳತನ ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡಿದ್ದ. ತನಿಖೆಯ ವೇಳೆ ಲೊಕೇಶ್ ಕಳ್ಳತನವನ್ನೇ ಕಾಯಕ ಮಾಡಿಕೊಂಡಿರುವ ಆತನಿಂದ ಅಂದು 20 ಮೊಬೈಲ್ ಫೋನ್, ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿತ್ತು. ಈಗ ಈ ಪ್ರಕರಣದಲ್ಲಿ ಆತನನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.