ಬೆಂಗಳೂರು: ಹನುಮಾನ್ ಚಾಲೀಸಾ ಹಾಕಿದ್ದನ್ನು ಪ್ರಶ್ನಿಸಿ ಅನ್ಯಕೋಮಿನ ಯುವಕರು ಮೊಬೈಲ್ ಶಾಪ್‌ನಲ್ಲಿದ್ದ ಯುವಕನಿಗೆ ಥಳಿಸಿದ್ದರು. ಇದೀಗ ಈ ಪ್ರಕರಣವು ರಾಜಕೀಯ ತಿರುವು ಪಡೆದುಕೊಂಡಿದೆ. ಹಲ್ಲೆಗೆ ಒಳಗಾದ ಮುಖೇಶ್‌ರನ್ನು ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ ಮೋಹನ್ ಹಾಗೂ ಉದಯ್ ಗರುಡಚಾರ್ ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿದರು. ಇದೇ ವೇಳೆ ಘಟನೆ ಸಂಬಂಧ ಹಲಸೂರು ಗೇಟ್ ಠಾಣೆಯ ಪೊಲೀಸ್ ಇನ್ಸ್‌ಸ್ಪೆಕ್ಟರ್‌ನಿಂದ ಮಾಹಿತಿ ಪಡೆದರು.
ನಂತರ ಪ್ರತಿಕ್ರಿಯಿಸಿದ ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಿಡಿಗೇಡಿಗಳ ಪರ ನಿಲ್ಲುವ ಕೆಲಸವಾಗುತ್ತಿದೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹೇಗೆ ಇದೆ ಎಂಬುದಕ್ಕೆ ಈ ಘಟನೆಯೇ ಉದಾಹರಣೆ ಆಗಿದೆ. ಮೊಬೈಲ್ ಶಾಪ್‌ಗೆ ನುಗ್ಗಿ ಹಿಂದು ಯುವಕನನ್ನು ಎಳೆದಾಡಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಎಲ್ಲ ಆರೋಪಿಗಳನ್ನು ಬಂಧಿಸಬೇಕು. ಮುಖೇಶ್ ಹಿಂದಿ ಭಾಷೀಕನಾಗಿದ್ದು ಕನ್ನಡ ಅಷ್ಟಾಗಿ ಬರುವುದಿಲ್ಲ. ಪೊಲೀಸರು ಹನುಮನ್ ಚಾಲಿಸಾ ಬಗ್ಗೆ ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಿಲ್ಲ. ಸರ್ಕಾರದಿಂದ ಯಾವುದೇ ಒತ್ತಡ ಬಂದರೂ ಪೊಲೀಸರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಇಲ್ಲದಿದ್ದರೆ ಇಡೀ ನಗರತ್ ಪೇಟೆಯನ್ನು ಬಂದ್ ಮಾಡುವ ಎಚ್ಚರಿಕೆಯನ್ನು ನೀಡಿದರು.
ಅಕ್ರಮವಾಗಿ ನುಸುಳಿರುವ ಬಾಂಗ್ಲಾ ನಿವಾಸಿಗಳು
ಕಳೆದ 20 ದಿನಗಳ ಹಿಂದೆಯೂ ಇದೇ ರೀತಿಯ ಘಟನೆ ನಡೆದಿತ್ತು ಎಂದು ಸಾರ್ವಜನಿಕರು ತಮ್ಮ ಸಮಸ್ಯೆಯನ್ನು ನಾಯಕರೊಟ್ಟಿಗೆ ಹಂಚಿಕೊಂಡರು. ಸತೀಶ್ ಎಂಬುವವರ ಮೇಲೂ ಇದೇ ಗ್ಯಾಂಗ್ ಹಲ್ಲೆ ಮಾಡಿತ್ತು. ಸತೀಶ್ ಅವರು ನಡೆಸುತ್ತಿದ್ದ ಹೋಟೆಲ್‌ಗೆ ಪುಂಡರು ಬಂದು ಫ್ರೀಯಾಗಿ ಊಟ ಕೇಳಿದ್ದಾರೆ. ಕೊಡದೇ ಇದ್ದಾಗ ಸತೀಶ್ ಹಾಗೂ ಅವರ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಪೊಲೀಸರು ದೂರು ಸ್ವೀಕರಿಸಿಲ್ಲ ಎಂದು ಆರೋಪಿಸಿದ್ದರು. ಜತೆಗೆ ಅಕ್ರಮವಾಗಿ ಬಾಂಗ್ಲದವರು ಸೇರಿಕೊಂಡಿದ್ದು, ರಾಬರಿ ಮಾಡುವುದು, ಜನರ ಮೇಲೆ ಹಲ್ಲೆ ಮಾಡುವುದೆಲ್ಲ ಇದೆ ಎಂದರು.
ಏನಿದು ಘಟನೆ?
ಭಾನುವಾರ ಸಂಜೆ 6:30ರ (ಮಾ.17) ಸುಮಾರಿಗೆ ಐದಾರು ಯುವಕರು ಗ್ಯಾಂಗ್ ಕಟ್ಟಿಕೊಂಡು ಬಂದಿದ್ದರು. ನರ್ಗತ್‌ಪೇಟೆಯಲ್ಲಿರುವ ಮೊಬೈಲ್ ಸ್ಪೇರ್ ಪಾರ್ಟ್ಸ್ ಅಂಗಡಿ ಬಳಿ ಬಂದು ನಮಾಜ್ ಟೈಂನಲ್ಲಿ ಹನುಮಾನ್ ಚಾಲೀಸ್ ಹಾಕಿದ್ದಕ್ಕೆ ಕಿರಿಕ್ ತೆಗೆದಿದ್ದರು. ಈ ವೇಳೆ ಮುಖೇಶ್ ಎಂಬಾತನನ್ನು ಅಂಗಡಿಯಿಂದ ಹೊರಗೆಳೆದು ನೆಲಕ್ಕೆ ಕೆಡವಿ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ.
ಹಲ್ಲೆಗೊಳಗಾದ ಮುಖೇಶ್ ಕೂಡಲೇ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಆರಂಭದಲ್ಲಿ ಪೊಲೀಸರು ಎಫ್ಐಆರ್ ಮಾಡಲು ಹಿಂದೇಟು ಹಾಕುತ್ತಿದ್ದಾರೆಂದು ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ತಡರಾತ್ರಿ ಹಲಸೂರು ಗೇಟ್ ಪೊಲೀಸ್ ಠಾಣೆ ಮುಂದೆ ನೂರಾರು ಜನರು ಜಮಾಯಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಠಾಣೆ ಮುಂದೆ ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜನೆ ಮಾಡಲಾಗಿತ್ತು. ಪೊಲೀಸರು ಎಫ್ಐಆರ್ ಮಾಡುವವರೆಗೂ ಇಲ್ಲಿಂದ ತೆರಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಜನಾಕ್ರೋಶ ಹೆಚ್ಚಾಗುತ್ತಿದ್ದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿ, ಐವರು ಬಂಧಿಸಿದ್ದರು.
ಇದನ್ನೂ ಓದಿ: Bengaluru News : ಕರುವಿನ ಮೇಲೆ ಕಾರು ಹತ್ತಿಸಿದ; ಚಕ್ರಕ್ಕೆ ಸಿಕ್ಕಿ ನರಳಾಡಿದರೂ ಬಿಡಲಿಲ್ಲ ಕಲಿಯುಗದ ಈ ರಾಕ್ಷಸ
ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮುಖೇಶ್, ಅಂಗಡಿಯಲ್ಲಿ ಭಜನೆ ಹಾಡುಗಳನ್ನು ಹಾಕುತ್ತಿದ್ದೆ. ಈ ವೇಳೆ ಅಂಗಡಿಗೆ ಬಂದ ಕೆಲ ಯುವಕರು ನಮಾಜ್ ಸಮಯದಲ್ಲಿ ಯಾಕೆ ಹಾಡು ಹಾಕುತ್ತೀಯಾ ಎಂದು ಪ್ರಶ್ನೆ ಮಾಡಿದರು. ಆರಂಭದಲ್ಲಿ ತಡೆಯುವ ಪ್ರಯತ್ನ ಮಾಡಿದೆ. ಆದರೆ ಸ್ಪೀಕರ್‌ನಿಂದ ನನ್ನ ತಲೆಗೆ ಹೊಡೆದು, ಎಳೆದಾಡಿ ಹಲ್ಲೆ ಮಾಡಿದರು.
ಒಟ್ಟು ಆರು ಜನ ಬಂದಿದ್ದರು. ಯಾರ್ಯಾರು ಎಂಬ ಹೆಸರು ಗೊತ್ತಿಲ್ಲ. ಈ ಮುಂಚೆ ನನಗೆ ಯಾವುದೇ ಪರಿಚಯ ಇಲ್ಲ. ಕಳೆದ ಎರಡು ತಿಂಗಳಿನಿಂದ ಅಂಗಡಿ ಇಟ್ಟಿದ್ದೇನೆ. ಮೊದಲಿನಿಂದಲೂ ಹಣ ಕೀಳಲು ಗದರಿಸುವ ಪ್ರಯತ್ನ ಮಾಡುತ್ತಿದ್ದರು. ನಾನು ಯಾವುದೇ ಹಣವನ್ನು ಕೊಡುತ್ತಿರಲಿಲ್ಲ. ನಿನ್ನೆ ಭಾನುವಾರ ಇದೇ ರಿವೆಂಜ್ ಇಟ್ಟುಕೊಂಡು ಬಂದು ಗಲಾಟೆ ಮಾಡಿದ್ದಾರೆ ಎಂದು ಮುಖೇಶ್ ತಿಳಿಸಿದ್ದಾರೆ.
ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 506, 504 , 149 , 307, 323 ಹಾಗೂ 324 ರ ಅಡಿ ಪ್ರಕರಣ ದಾಖಲಾಗಿದೆ. ಸುಲೇಮಾನ್, ಶನವಾಜ್, ರೋಹಿತ್, ದ್ಯಾನಿಶ್, ತರುಣ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ