Site icon Vistara News

Telangana Elections 2023 : ತೆಲಂಗಾಣ ಕೈ ಶಾಸಕರ ರಕ್ಷಣೆ; ಡಿಕೆಶಿ, ಜಮೀರ್‌ಗೆ ಹೈಕಮಾಂಡ್‌ ಹೊಣೆ

Telangana KCR DK Shivakumar

ಬೆಂಗಳೂರು: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ (Telangana Elections 2023) ಕಾಂಗ್ರೆಸ್‌ ಮುನ್ನಡೆ ಸಾಧಿಸಲಿದೆ ಎಂಬುದು ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗಳ (Exit poll) ಸಾರ. ಆದರೆ, ಒಂದೊಮ್ಮೆ ಪರಿಸ್ಥಿತಿ ಬದಲಾಗಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ಕಾಂಗ್ರೆಸ್‌ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದಕ್ಕಾಗಿ ಕಾಂಗ್ರೆಸ್‌ ಹೈಕಮಾಂಡ್‌ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಮತ್ತು ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ (Zameer Ahmed Khan) ಅವರಿಗೆ ಹೊಣೆಗಾರಿಕೆಯನ್ನು ನೀಡಿದೆ.

ಹಾಲಿ ಮುಖ್ಯಮಂತ್ರಿ ಹಾಗೂ ಭಾರತ್‌ ರಾಷ್ಟ್ರ ಸಮಿತಿ (Bharat Rashtra Samiti-BRS) ಮುಖ್ಯಸ್ಥ ಕೆ. ಚಂದ್ರಶೇಖರ ರಾವ್‌ (K ChandraShekhar Rao) ಅವರು ಚುನಾವಣೆ ಫಲಿತಾಂಶಕ್ಕೆ ಮುನ್ನವೇ ಕೆಲವೊಂದು ಗೆಲ್ಲಬಲ್ಲ ಕಾಂಗ್ರೆಸ್‌ ಶಾಸಕರನ್ನು ಸಂಪರ್ಕ ಮಾಡಿದ್ದಾರೆ ಎಂಬ ಮಾಹಿತಿ ಹೈಕಮಾಂಡ್‌ ಗೆ ತಲುಪಿದೆ. ಹೀಗಾಗಿ ಇಂಥ ಬೇಲಿ ಹಾರುವಿಕೆಯನ್ನು ತಡೆಯಲು ಕಾಂಗ್ರೆಸ್‌ ಕಾರ್ಯತಂತ್ರವನ್ನು ರೂಪಿಸಿದೆ. ಈ ಕಾರ್ಯತಂತ್ರದ ಭಾಗವಾಗಿ ಡಿ.ಕೆ. ಶಿವಕುಮಾರ್‌ ಮತ್ತು ಜಮೀರ್‌ ಖಾನ್‌ ಅವರು ಶನಿವಾರ ರಾತ್ರಿಯೊಳಗೆ ಹೈದರಾಬಾದ್‌ ತಲುಪಲಿದ್ದಾರೆ.

ಭಾರತ ರಾಷ್ಟ್ರ ಸಮಿತಿ ಮುಖ್ಯಸ್ಥರಾದ ಕೆ. ಚಂದ್ರಶೇಖರ ರಾವ್‌ ಅವರು ಫಲಿತಾಂಶಕ್ಕೆ ಮೊದಲೇ ನಮ್ಮ ಶಾಸಕರಿಗೆ ಬಲೆ ಬೀಸಲು ಪ್ರಯತ್ನಿಸುತ್ತಿದ್ದಾರೆ ಎಂದು ನಮಗೆ ತಿಳಿದು ಬಂದಿದೆ. ನಮ್ಮ ಅಭ್ಯರ್ಥಿಗಳು ನಮಗೆ ಈ ಮಾಹಿತಿ ನೀಡಿದ್ದಾರೆ. ಹೀಗಾಗಿ ನಮ್ಮ ಶಾಸಕರನ್ನು ಧೈರ್ಯ ತುಂಬಿ ಉಳಿಸಿಕೊಳ್ಳುವುದು ಕೂಡಾ ತುಂಬ ಮುಖ್ಯ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ರಾಜ್ಯದಲ್ಲಿ ಪಕ್ಷ ಸರಳ ಬಹುಮತವನ್ನು ಪಡೆಯುವ ವಿಶ್ವಾಸವಿದೆ. ಆದರೆ, ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಕಾರ್ಯತಂತ್ರ ರೂಪಿಸಬೇಕಾಗುತ್ತದೆ. ಇದು ನನ್ನ ಪಕ್ಷದ ಕೆಲಸ ಹಾಗಾಗಿ ನಾನು ಅಲ್ಲಿಗೆ ಹೋಗುತ್ತಿದ್ದೇನೆ ಎಂದು ಶನಿವಾರ ಬೆಳಗ್ಗೆ ಡಿ.ಕೆ. ಶಿವಕುಮಾರ್‌ ಅವರು ತಿಳಿಸಿದ್ದರು.

ʻʻಕರ್ನಾಟಕ ಚುನಾವಣೆಯ ಸಮಯದಲ್ಲಿ ಇಡೀ ತೆಲಂಗಾಣ ತಂಡ ನಮ್ಮೊಂದಿಗೆ ಇತ್ತು. ಅದಕ್ಕಾಗಿಯೇ ನಾನು ಸಹ ಹೋಗುತ್ತಿದ್ದೇನೆ. ಫಲಿತಾಂಶದ ನಂತರ ಏನಾಗುತ್ತದೆ ಎಂಬುದನ್ನು ನಾವು ನೋಡುತ್ತೇವೆ. ಯಾವುದೇ ತೊಂದರೆ ಇಲ್ಲ. ಯಾವುದೇ ಬೆದರಿಕೆ ಇಲ್ಲ, ನಮಗೆ ವಿಶ್ವಾಸವಿದೆ, ನಮ್ಮ ಪಕ್ಷ ಆರಾಮವಾಗಿ ಗೆಲ್ಲುತ್ತದೆʼʼ ಎಂದೂ ಅವರು ನುಡಿದಿದ್ದಾರೆ.

ಚುನಾವಣೋತ್ತರ ಸಮೀಕ್ಷೆಗಳು ಹೇಳುವುದೇನು?

ತೆಲಂಗಾಣವು ಒಟ್ಟು 119 ಸ್ಥಾನಗಳನ್ನು ಹೊಂದಿದ್ದು, ಬಹುಮತ ಪಡೆಯಲು 60 ಸ್ಥಾನಗಳನ್ನು ಗೆಲ್ಲಬೇಕು. ಈ ಹಿಂದಿನ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದ ಬಿಆರ್‌ಎಸ್‌ಗೆ ಈ ಭಾರಿ ಸೋಲು ಎಂದು ಬಹಳಷ್ಟು ಸಮೀಕ್ಷೆಗಳು ಹೇಳುತ್ತಿವೆ. ಮುಖ್ಯಮಂತ್ರಿ ಕೆಸಿಆರ್‌ ಈಗಲೂ ಜನಪ್ರಿಯ ನಾಯಕ. ಅವರ ಬಗ್ಗೆ ಜನರಲ್ಲಿ ಯಾವುದೇ ಅಸಮಾಧಾನವಿಲ್ಲ. ಆದರೆ, ಬಿಆರ್‌ಎಸ್‌ನ ಬಹುತೇಕ ಶಾಸಕರಿಗೆ ಆಡಳಿತ ವಿರೋಧಿ ಅಲೆ ಇದೆ. ಹಾಗಿದ್ದೂ, ಕೆಸಿಆರ್ ಹಾಲಿ ಶಾಸಕರಿಗೆ ಮಣೆ ಹಾಕಿರುವುದು ಉರುಳಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಅಸಲಿಗೆ, ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ಅಚ್ಚರಿಯ ಗೆಲುವಿನ ಭವಿಷ್ಯ ನುಡಿದಿವೆ. ಬಹುಶಃ ಕರ್ನಾಟಕದ ರಿಸಲ್ಟ್ ತೆಲಂಗಾಣದಲ್ಲೂ ಪ್ರಭಾವ ಬೀರಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಜತೆಗೆ, ಕಾಂಗ್ರೆಸ್ ಘೋಷಿಸಿರುವ 6 ಗ್ಯಾರಂಟಿಗಳು ತೆಲಂಗಾಣ ಮತದಾರರನ್ನು ಸೆಳೆಯುವ ಸಾಧ್ಯತೆಗಳನ್ನು ಸಮೀಕ್ಷೆಗಳು ತಿಳಿಸಿವೆ.

ಎಕ್ಸಿಟ್ ಪೋಲ್‌ಗಳು ಹೇಳೋದೇನು

ಸಿಎನ್​​ಎನ್​ ಸಮೀಕ್ಷೆ: ಕಾಂಗ್ರೆಸ್: 56, ಬಿಆರ್​ಎಸ್​: 48, ಬಿಜೆಪಿ: 10: ಎಐಎಂಐಎಂ: 5
ಜನ್ ಕಿ ಬಾತ್ : ಕಾಂಗ್ರೆಸ್: 48-64, ಬಿಆರ್​ಎಸ್​: 40-55, ಬಿಜೆಪಿ: 7-13, ಎಐಎಂಐಎಂ: 4-7 ಸ್ಥಾನ
ಇಂಡಿಯಾ ಟಿವಿ- ಸಿಎನ್ಎಕ್ಸ್ ಬಿಆರ್​ಎಸ್​ 31-47, ಕಾಂಗ್ರೆಸ್: 63-79, ಬಿಜೆಪಿ 2-4,ಎಐಎಂಐಎಂ 5-7
ಜನ್ ಕಿ ಬಾತ್ ಬಿಆರ್​ಎಸ್​ 40-55, ಕಾಂಗ್ರೆಸ್ 48-64,ಬಿಜೆಪಿ 7-13,ಎಐಎಂಐಎಂ 4-7
ರಿಪಬ್ಲಿಕ್ ಟಿವಿ- ಮ್ಯಾಟ್ರಿಜ್​- ಆರ್​ಎಸ್​ 46-56.ಕಾಂಗ್ರೆಸ್ 58-68, ಬಿಜೆಪಿ 4-9,ಎಐಎಂಐಎಂ 5-7
ಟಿವಿ 9 ಭಾರತ್ ವರ್ಷ್ – ಪೋಲ್‌ ಸ್ಟ್ರಾಟ್‌: ಬಿಆರ್​ಎಸ್​48-58,ಕಾಂಗ್ರೆಸ್ 49-59,ಬಿಜೆಪಿ 5-10,ಎಐಎಂಐಎಂ 6-8

ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲು ಸಿದ್ಧವಾಗಿದ್ದು, ಭಾರತದ ಕಿರಿಯ ರಾಜ್ಯದಲ್ಲಿ 10 ವರ್ಷಗಳ ಆಡಳಿತದ ನಂತರ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಬಹುಮತದ ಕೊರತೆಯನ್ನು ಎದುರಿಸಲಿದೆ ಎಂದು ಶುಕ್ರವಾರ ಎಕ್ಸಿಟ್ ಪೋಲ್ ಭವಿಷ್ಯ ನುಡಿದಿದೆ. ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ಮತಗಳಿಕೆ ಶೇ. 42ಕ್ಕೆ ಏರಲಿದೆ, ಬಿಆರ್‌ಎಸ್ ಶೇ. 36ಕ್ಕೆ ಕುಸಿಯಲಿದೆ ಮತ್ತು ಬಿಜೆಪಿ ಶೇ. 14ರಷ್ಟು ಮತಗಳನ್ನು ಪಡೆಯಲಿದೆ.

ಕಾಂಗ್ರೆಸ್‌ ಹೈಕಮಾಂಡ್‌ ಮುನ್ನೆಚ್ಚರಿಕೆ

ಒಂದೊಮ್ಮೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿ ಕೆ.ಸಿ.ಆರ್‌ ಅವರ ಬಿಆರ್‌ಎಸ್‌ ಪಕ್ಷಕ್ಕೆ ಕೆಲವೇ ಸ್ಥಾನಗಳು ಕಡಿಮೆ ಬಿದ್ದರೆ ಅವರು ಕಾಂಗ್ರೆಸ್‌ನ ಶಾಸಕರನ್ನು ಸೆಳೆದು ಬಿಡುವ ಅಪಾಯವಿರುತ್ತದೆ. ಕಳೆದ ಗೋವಾ ಚುನಾವಣೆಯಲ್ಲಿ ಅಂತಹುದೇ ಸನ್ನಿವೇಶ ನಿರ್ಮಾಣವಾಗಿ, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಕಾಂಗ್ರೆಸ್‌ ಗೆ ಸರ್ಕಾರ ರಚಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಬಾರಿ ತೆಲಂಗಾಣದಲ್ಲಿ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್‌ ಅವರು ತೆಲಂಗಾಣದಲ್ಲಿ ಯಾವುದೇ ಪರಿಸ್ಥಿತಿ ನಿರ್ಮಾಣವಾದರೂ ಎದುರಿಸಲು ಸಜ್ಜಾಗಿರುವಂತೆ ಡಿ.ಕೆ. ಶಿವಕುಮಾರ್‌ ಅವರನ್ನು ತೆಲಂಗಾಣಕ್ಕೆ ಹೋಗುವಂತೆ ಸೂಚನೆ ನೀಡಿದ್ದಾರೆ.

ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್‌ ಕರ್ನಾಟಕದ ಕಾರ್ಯತಂತ್ರವನ್ನೇ ರಚಿಸಿದ್ದು, ಡಿ.ಕೆ. ಶಿವಕುಮಾರ್‌, ಜಮೀರ್‌ ಅಹಮದ್‌ ಅವರು ಮುಂಚೂಣಿಯಲ್ಲಿ ನಿಂತಿದ್ದರು. ಈಗ ಶಾಸಕರ ರಕ್ಷಣೆಯ ಹೊಣೆಯೂ ಅವರ ಹೆಗಲೇರಿದೆ.

ಏನೇನು ಟಾಸ್ಕ್‌? ಸಾಧ್ಯಾಸಾಧ್ಯತೆಗಳು ಏನೇನು?

  1. ಫಲಿತಾಂಶಕ್ಕೆ ಮುನ್ನವೇ ಎಲ್ಲ ಕಾಂಗ್ರೆಸ್‌ ಅಭ್ಯರ್ಥಿಗಳ ಜತೆ ನಿಕಟ ಸಂಪರ್ಕದಲ್ಲಿರುವುದು.
  2. ಗೆದ್ದ ಬಳಿಕ ಗೆದ್ದ ಎಲ್ಲ ಅಭ್ಯರ್ಥಿಗಳನ್ನು ಜತೆಯಾಗಿಟ್ಟುಕೊಳ್ಳುವುದು ಮತ್ತು ಎಲ್ಲರೂ ಒಂದೇ ಕಡೆ ಸೇರುವಂತೆ ನೋಡಿಕೊಳ್ಳುವುದು.
  3. ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸುವುದು.
  4. ಆಮಿಷ ಒಡ್ಡುವ, ಸೆಳೆಯುವ ತಂತ್ರಗಳು ಶುರುವಾದರೆ ತಕ್ಷಣವೇ ಅವರನ್ನು ಕರ್ನಾಟಕಕ್ಕೆ ಶಿಫ್ಟ್‌ ಮಾಡುವುದು.

ಈ ರೀತಿಯಾದ ವಿಧಾನವನ್ನು ಅಳವಡಿಸಿಕೊಳ್ಳಲು ಕಾಂ‌ಗ್ರೆಸ್‌ ನಿರ್ಧರಿಸಿದೆ.

Exit mobile version