Site icon Vistara News

Old Mysuru Politics : ಎಸ್‌.ಎಂ. ಕೃಷ್ಣರಿಗೆ ʼಪದ್ಮʼ ಪ್ರಶಸ್ತಿಯಿಂದ ʼಕಮಲʼ ಪಕ್ಷದಲ್ಲಿ ಸಡಗರ; ಏನಿದರ ಸಂದೇಶ?

the-conferment-of-the-padma-award-to-sm-krishna-has-revitalized-old-mysuru-politics

ರಮೇಶ ದೊಡ್ಡಪುರ, ಬೆಂಗಳೂರು
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ಸರ್ಕಾರಗಳು ಇಡುವ ಪ್ರತಿ ಹೆಜ್ಜೆಯನ್ನೂ ರಾಜಕೀಯ ಕಣ್ಣಿನಿಂದ ನೋಡುವಂತಾಗಿದ್ದು, ಇದೀಗ ದೇಶದ ಅತ್ಯುನ್ನತ ನಾಗರಿಕ ಗೌರವಗಳಾದ ಪದ್ಮ ಪ್ರಶಸ್ತಿ ಕುರಿತೂ ಅದೇ ಚರ್ಚೆ ನಡೆದಿದೆ. ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರನ್ನು ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಹಳೆ ಮೈಸೂರು ಭಾಗದ ರಾಜಕೀಯ (Old Mysuru Politics) ಚಟುವಟಿಕೆಗಳಲ್ಲಿ ಸಂಚಲನ ಮೂಡಿಸಿದೆ.

ಎಸ್‌.ಎಂ. ಕೃಷ್ಣ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಸಂಪೂರ್ಣ ಐದು ವರ್ಷ ರಾಜಕೀಯವಾಗಿ ನಿರಾತಂಕದ ಅಧಿಕಾರ ನಡೆಸಿದವರು. ಆಡಳಿತಾತ್ಮಕವಾಗಿ ಅನೇಕ ಸವಾಲುಗಳನ್ನು ಎದುರಿಸಿದರು, ಅದರ ಜತೆಗೆ ಸುಮಾರು ಮೂರು ವರ್ಷ ರಾಜ್ಯವು ಬರಗಾಲಕ್ಕೆ ತುತ್ತಾಗಿತ್ತು. ಇದೆಲ್ಲದರ ನಡುವೆಯೂ ಮುಖ್ಯವಾಗಿ ಬೆಂಗಳೂರಿನ ಅಭಿವೃದ್ಧಿಗೆ ಅವರು ಹೆಚ್ಚು ಗಮನ ನೀಡಿದರು.

ಬೆಂಗಳೂರನ್ನು ಸಿಂಗಾಪುರ ಮಾಡುತ್ತೇನೆ ಎಂದು ಬಹಿರಂಗವಾಗಿಯೇ ಘೋಷಿಸಿದ್ದ ಕೃಷ್ಣ, ಮುಖ್ಯವಾಗಿ ಐಟಿಬಿಟಿ ಕ್ಷೇತ್ರಕ್ಕೆ ಉತ್ತೇಜನ ನೀಡಿದರು. ಇದರಿಂದಾಗಿ ಭಾರತದ ಸಿಲಿಕಾನ್‌ ಸಿಟಿ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಯಿತು. ಲಕ್ಷಾಂತರ ಉದ್ಯೋಗಗಳು ಇದರಿಂದ ಸೃಷ್ಟಿಯಾಗಿದ್ದಷ್ಟೆ ಅಲ್ಲದೆ ರಾಜ್ಯದ ವಿವಿಧೆಡೆ ಇಂಜಿನಿಯರಿಂಗ್‌, ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಹೆಚ್ಚೆಚ್ಚು ತಲೆಯೆತ್ತಿದವು. ಆರ್ಥಿಕವಾಗಿಯೂ ಅತಿ ದೊಡ್ಡ ಕೊಡುಗೆ ನೀಡುತ್ತಿರುವ ಬೆಂಗಳೂರು ಇದೀಗ ರಾಜ್ಯದ ಶೇ. 60-80 ಆದಾಯವನ್ನು ತಂದುಕೊಡುತ್ತಿದೆ. ಈಗಿನ ರಾಜಕಾರಣಿಗಳು ಬಾಯಿ ಹರಿಬಿಡುವುದನ್ನು ಕಂಡರೆ, ಎಸ್‌.ಎಂ. ಕೃಷ್ಣ ಅವರು ನಡೆಸುತ್ತಿದ್ದ ಅತ್ಯಂತ ಸಂಭಾವಿತ, ಸಭ್ಯ ಸಂಭಾಷಣೆಗಳು ಅಚ್ಚರಿ ಮೂಡಿಸುತ್ತವೆ. ಇದೆಲ್ಲದರ ಹಿನ್ನೆಲೆಯಲ್ಲಿ ಎಸ್‌.ಎಂ. ಕೃಷ್ಣ ಅವರು ಕರ್ಣಾಟಕದ ಪ್ರಮುಖ ರಾಜಕಾರಣಿಗಳಲ್ಲೊಬ್ಬರು. ಆದರೆ ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡಲು ಇದಿಷ್ಟೇ ಕಾರಣವಲ್ಲ.

ಎಸ್‌.ಎಂ. ಕೃಷ್ಣ ಅವರು ನೇರವಾಗಿ ಎಲ್ಲಿಯೂ ಜಾತಿ ರಾಜಕಾರಣ ಮಾಡಿದವರಲ್ಲ. ಅವರನ್ನು ಅಭಿವೃದ್ಧಿ ರಾಜಕಾರಣಿ ಎಂದು ಗುರುತಿಸಿಕೊಂಡವರು. ಆದರೆ ಅವರು ಸುತ್ತಮುತ್ತ ಇರಿಸಿಕೊಂಡಿದವದರು ಹಾಗೂ ಸಮುದಾಯದ ಆಶೋತ್ತರಕ್ಕೆ ಅನುಗುಣವಾಗಿ ಒಕ್ಕಲಿಗ ಸಮುದಾಯದಲ್ಲಿ ಒಂದು ಗೌರವವನ್ನು ಹೊಂದಿದ್ದಾರೆ. ಎಸ್‌.ಎಂ. ಕೃಷ್ಣ ಅವರು ತಮ್ಮ ಸಮುದಾಯದವರು ಎಂಬ ಹೆಮ್ಮೆ ಒಕ್ಕಲಿಗರಲ್ಲಿದೆ. ಈ ವಿಚಾರವನ್ನೇ ಆಧಾರವಾಗಿಸಿ ಎಸ್‌.ಎಂ. ಕೃಷ್ಣ ಅವರನ್ನು ಬಿಜೆಪಿ ಕರೆತಂದಿತು. ಆದರೆ ಅದರಿಂದ ಆದ ಲಾಭ ಅಷ್ಟಕ್ಕಷ್ಟೆ.

ಕಳೆದ ವಿಧಾನಸಭೆ ಚುನಾವಣೆಗೂ ಮುನ್ನವೇ ಎಸ್‌.ಎಂ. ಕೃಷ್ಣ ಬಿಜೆಪಿಗೆ ಬಂದರಾದರೂ ಚುನಾವಣೆಯಲ್ಲಿ ಹೆಚ್ಚಿನ ಲಾಭವೇನೂ ಆಗಿಲ್ಲ. ಆದರೆ ಒಕ್ಕಲಿಗ ಸಮುದಾಯದಲ್ಲಿ ತನ್ನ ಬೇರುಗಳನ್ನು ಬಿಡುವ ಬಿಜೆಪಿ ಚಿಂತನೆಗೆ ಒಂದಷ್ಟು ಸಹಕಾರವಂತೂ ಆಗಿದೆ. ಬಿಜೆಪಿ ಎಂದರೆ ಬ್ರಾಹ್ಮಣರ ಪಕ್ಷ, ಬಿಜೆಪಿ ಎಂದರೆ ಲಿಂಗಾಯತರ ಪಕ್ಷ ಎನ್ನುವ ಖಚಿತ ಹಣೆಪಟ್ಟಿಯಿಂದ ಸ್ವಲ್ಪ ಮಟ್ಟಿಗೆ ಬಿಡಿಸಿಕೊಂಡು ಹೊರಬರಲು ಇದು ಸಹಾಯ ಮಾಡಿತು.

ಮಂಡ್ಯದಲ್ಲಿ ಬಲವರ್ಧನೆ

ಇತ್ತೀಚಿನ ವರ್ಷಗಳಲ್ಲಿ ಮಂಡ್ಯ ಸೇರಿ ಒಟ್ಟಾರೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಶಕ್ತಿ ಹೆಚ್ಚಿಸಿಕೊಳ್ಳುತ್ತಿದೆ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನದ ನಂತರ ಜೆಡಿಎಸ್‌ನಿಂದ ಬಿಜೆಪಿಗೆ ಆಗಮಿಸಿದ ಕೆ.ಸಿ. ನಾರಾಯಣಗೌಡ ಕೆ.ಆರ್‌. ಪೇಟೆ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಗೆದ್ದರು. ಬಿಜೆಪಿ ಇತಿಹಾಸದಲ್ಲೆ ಮಂಡ್ಯದಲ್ಲಿ ಮೊದಲ ಶಾಸಕರಾಗಿ ಆಯ್ಕೆಯಾದ ನಾರಾಯಣಗೌಡ, ಜಿಲ್ಲೆಯಲ್ಲಿ ಪಕ್ಷವನ್ನು ಗಟ್ಟಿ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸ್ಥಳೀಯ ಮುಖಂಡರು ಅನೇಕರು ಬಿಜೆಪಿಗೆ ಆಗಮಿಸಿದ್ದಾರೆ. ಹಳೆ ಮೈಸೂರು ಭಾಗದ ರಾಮನಗರ, ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಕಾರ್ಯಾಚರಣೆಗೆ ಇಳಿದಿದ್ದಾರೆ. ಇತ್ತ ಒಕ್ಕಲಿಗ ಪ್ರಾಬಲ್ಯದ ಚಿಕ್ಕಬಳ್ಳಾಪುರ, ಕೋಲಾರದಲ್ಲೂ ಸಚಿವ ಡಾ. ಕೆ. ಸುಧಾಕರ್‌, ಸಂಸದ ಮುನಿಸ್ವಾಮಿ ಮುಂತಾದವರ ಕಾರಣಕ್ಕೆ ಬಿಜೆಪಿ ಬಲ ಹೆಚ್ಚಿಸಿಕೊಂಡಿದೆ. ಹಾಸನದಲ್ಲಿ ಸುಮಾರು ಎರಡು ದಶಕದ ನಂತರ ಕಳೆದ ಚುನಾವಣೆಯಲ್ಲಿ ಖಾತೆ ತೆರೆದಿರುವ ಬಿಜೆಪಿ, ಈ ಬಾರಿಯೂ ಅದನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ. ಇದೆಲ್ಲದರಿಂದಾಗಿ, ಬಿಜೆಪಿ ಎಂದರೆ ನಮ್ಮ ಪಕ್ಷವಲ್ಲ ಎಂಬ ಮಾನಸಿಕತೆಯು ಒಕ್ಕಲಿಗ ಸಮುದಾಯದಲ್ಲಿ ದೂರವಾಗಿದೆ.

ಎಸ್‌.ಎಂ. ಕೃಷ್ಣ ಅವರ ಕಾರಣಕ್ಕೆ ಒಕ್ಕಲಿಗ ಸಮುದಾಯದಲ್ಲಿ ಒಳದಾರಿ ಮಾಡಲು ಬಿಜೆಪಿಗೆ ರಹದಾರಿ ಸಿಕ್ಕಂತಾಗಿದೆ. ಇತ್ತೀಚೆಗಷ್ಟೆ ದಿಢೀರ್‌ ಸುದ್ದಿಗೋಷ್ಠಿ ನಡೆಸಿದ್ದ ಎಸ್‌.ಎಂ. ಕೃಷ್ಣ, ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಿದರು. ನಿವೃತ್ತಿ ಕುರಿತು ಕೇಂದ್ರ ಬಿಜೆಪಿ ವರಿಷ್ಠರಿಗೆ ತಿಳಿಸಿದ್ದೀರ ಎಂಬ ಪ್ರಶ್ನೆಗೆ, ನನ್ನ ನಿವೃತ್ತಿಗೆ ಅವರೇನೂ ಪಿಂಚಣಿ ಕೊಡುವುದಿಲ್ಲವಾದ್ಧರಿಂದ ಯಾರಿಗೂ ತಿಳಿಸುವ ಅವಶ್ಯಕತೆಯಿಲ್ಲ ಎಂದಿದ್ದರು. ಇದಕ್ಕೆ ಸರಿಯಾಗಿ, ಡಿಸೆಂಬರ್‌ನಲ್ಲಿ ಮಂಡ್ಯಕ್ಕೆ ಆಗಮಿಸಿ ಮೆಗಾ ಡೈರಿ ಉದ್ಘಾಟನೆ ಮಾಡಿದ್ದ ಅಮಿತ್‌ ಶಾ ಸಹ ಕೃಷ್ಣ ಅವರನ್ನು ಭೇಟಿ ಮಾಡಿರಲಿಲ್ಲ. ಇದು ಬಿಜೆಪಿ ವಲಯದಲ್ಲಿ ತಳಮಳ ಸೃಷ್ಟಿಸಿತ್ತು. ಎಸ್‌.ಎಂ. ಕೃಷ್ಣ ಬೇಸರಪಟ್ಟುಕೊಂಡಿದ್ದಾರೆ ಎಂದರೆ ಸಮುದಾಯದಲ್ಲಿ ಉತ್ತಮ ಸಂದೇಶ ರವಾನೆ ಆಗುವುದಿಲ್ಲ ಎಂಬ ಆತಂಕ ಶುರುವಾಗಿತ್ತು.

ಇದನ್ನೂ ಓದಿ : ವಿಸ್ತಾರ TOP 10 NEWS : ಕೃಷ್ಣ, ಸುಧಾಮೂರ್ತಿ, ಭೈರಪ್ಪ ಸೇರಿ 108 ಸಾಧಕರಿಗೆ ಪದ್ಮ ಪ್ರಶಸ್ತಿಯ ಗೌರವ ಹಾಗೂ ದಿನದ ಇನ್ನಿತರ ಪ್ರಮುಖ ಸುದ್ದಿಗಳಿವು

ಇದೀಗ ಪದ್ಮವಿಭೂಷಣ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಪ್ರಶಸ್ತಿ ಕುರಿತು ಎಸ್‌.ಎಂ. ಕೃಷ್ಣ ಅವರೂ ಅತ್ಯಂತ ಹರ್ಷ ವ್ಯಕ್ತಪಡಿಸಿ, ಸ್ವೀಕರಿಸುವುದಾಗಿ ತಿಳಿಸಿದ್ದಾರೆ. ಹಾಗಾಗಿ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಲವರ್ಧನೆಯ ದಾರಿಗೆ ಎಸ್‌.ಎಂ. ಕೃಷ್ಣ ಅವರ ಅಸಮಾಧಾನದಿಂದ ಆಗಬಹುದಾಗಿದ್ದ ತೊಂದರೆಯನ್ನು ಬಿಜೆಪಿ ತೊಡೆದುಹಾಕಿದೆ. ಪಕ್ಷದ ವಲಯದಲ್ಲಿ ಇದು ಹೊಸ ಸಂಚಲನಕ್ಕೆ ಕಾರಣವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಆದಿಯಾಗಿ ಅನೇಕ ನಾಯಕರು ಕೃಷ್ಣ ಅವರ ಮನೆಗೆ ತೆರಳಿ ಶುಭಾಶಯ ಕೋರುತ್ತಿದ್ದಾರೆ. ಮಂಡ್ಯ ಸಂಸದೆ ಸುಮಲತಾ ಅವರನ್ನೂ ಪಕ್ಷಕ್ಕೆ ಕರೆತರುವ ಪ್ರಯತ್ನದಲ್ಲಿರುವ ಬಿಜೆಪಿ, ಹಳೆ ಮೈಸೂರಿನಲ್ಲಿ ಯಾವ ಕಾರ್ಯತಂತ್ರ ರೂಪಿಸುತ್ತದೆ ಎನ್ನುವ ಕುತೂಹಲವಿದೆ.

ಎಸ್‌.ಎಂ. ಕೃಷ್ಣ ಅವರಿಗೆ ಪದ್ಮವಿಭೂಷಣ ನೀಡಿದಾಕ್ಷಣ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ತೆಕ್ಕೆಯಲ್ಲಿರುವ ಕೋರ್‌ ಮತದಾರರನ್ನು ಸೆಳೆಯಲು ಸಾಧ್ಯವಿಲ್ಲ. ಅದಕ್ಕೆ ಬೇರೆಯದೇ ಕಾರ್ಯತಂತ್ರ ರೂಪಿಸಬೇಕಾಗುತ್ತದೆ. ಆದರೆ ಅವೆರಡೂ ಪಕ್ಷಗಳಲ್ಲಿರುವ ಅಸಮಾಧಾನಿತರು ಹಾಗೂ ಯಾವ ಪಕ್ಷಕ್ಕೆ ಮತ ನೀಡಬೇಕು ಎಂದು ನಿರ್ಧಾರ ಮಾಡದ ಮತದಾರರನ್ನು (Fence Sitters) ಬಿಜೆಪಿಯತ್ತ ಸೆಳಯಲು ಸಹಾಯಕವಂತೂ ಆಗುತ್ತದೆ.

Exit mobile version