ಬೆಂಗಳೂರು: ಯುವತಿಯ ಮೊಬೈಲ್ ಕಿತ್ತು ಎಸ್ಕೇಪ್ ಆಗಿದ್ದ ಕಳ್ಳರನ್ನು ಡೆಲಿವರಿ ಸಿಬ್ಬಂದಿಯೊಬ್ಬರು ಮೊಬೈಲ್ ಆ್ಯಪ್ ಮೂಲಕ ಪತ್ತೆ ಹಚ್ಚಿದ್ದಲ್ಲದೆ, (Crime) ಆರೋಪಿಗಳನ್ನು ಸೆರೆಹಿಡಿಯಲು ಸಹಕರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
FIND MY device ಆ್ಯಪ್ ಮೂಲಕ ಮೊಬೈಲ್ ಲೊಕೆಷನ್ ಅನ್ನು ಡೆಲಿವರಿ ಸಿಬ್ಬಂದಿ ಸೂರ್ಯ ಎಂಬುವರು ಪತ್ತೆ ಹಚ್ಚಿದ್ದರು. ಯುವತಿಗೆ ತನ್ನ ಸ್ನೇಹಿತನ ಮೊಬೈಲ್ ನೀಡಿ ನಂಬರ್ ಎಂಟ್ರಿ ಮಾಡುವಂತೆ ಹೇಳಿ, ಮೊಬೈಲ್ ಎಲ್ಲಿದೆ ಎಂಬುದನ್ನು ಆ ಆ್ಯಪ್ ಮೂಲಕ ಪತ್ತೆ ಹಚ್ಚಿದ್ದರು.
ಮೊಬೈಲ್ ಕಿತ್ತು ಎಸ್ಕೇಪ್ ಆಗಿದ್ದ ಆರೋಪಿಗಳ ಲೊಕೇಷನ್ 2 ಕಿ.ಮೀ ದೂರದಲ್ಲಿ ಇರುವುದು ಪತ್ತೆಯಾಯಿತು. ಆರೋಪಿಗಳು ಇರುವ ಲೊಕೇಷನ್ ಟ್ರೇಸ್ ಮಾಡಿ ಸ್ನೇಹಿತರ ಜತೆ ಸೂರ್ಯ ಸ್ಥಳಕ್ಕೆ ಧಾವಿಸಿದ್ದರು. ಈ ಸಂದರ್ಭ ಮೊಬೈಲ್ ಕಳ್ಳತನ ಮಾಡಿದ್ದ ಗ್ಯಾಂಗ್, ಸೂರ್ಯ ಅವರ ಮೇಲೆ ಹಲ್ಲೆ ನಡೆಸಿತ್ತು. ಆದರೆ ಪ್ರಾಣಾಪಾಯವನ್ನೂ ಲೆಕ್ಕಿಸದೆ, ಸೂರ್ಯ ಅವರು ಎದುರಿಸಿದ್ದರು. ಯುವತಿಯ ಮೊಬೈಲ್ ಅನ್ನು ವಾಪಸ್ ಪಡೆಯಲು ಯತ್ನಿಸಿದ್ದರು.
ಕಳೆದ ಅಕ್ಟೋಬರ್ 18 ರಂದು ಜಯನಗರದ 2 ಬ್ಲಾಕ್‌ನಲ್ಲಿ ಘಟನೆ ನಡೆದಿತ್ತು. ಹಲ್ಲೆ ಬಳಿಕ ಸೂರ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಬಳಿಕ ಕಲಾಸಿಪಾಳ್ಯ ಠಾಣೆಗೆ ತೆರಳಿ, ಹಲ್ಲೆ ನಡೆಸಿದ ಆರೋಪಿಗಳ ಬಗ್ಗೆ ದೂರು ನೀಡಿದ್ದರು. ಮೊಬೈಲ್ ಕಳ್ಳತನದ ಬಗ್ಗೆ ಸಿದ್ದಾಪುರ ಠಾಣೆಗೆ ಯುವತಿ ದೂರು ನೀಡಿದ್ದರು.
ಇದೀಗ ಆರೋಪಿ ಟೋನಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ದ ಹಲವು ಠಾಣೆಗಳಲ್ಲಿ ಮೊಬೈಲ್ ಕಳ್ಳತನ ಪ್ರಕರಣ ದಾಖಲಾಗಿದೆ.