ಮಾರುತಿ ಪಾವಗಡ, ಬೆಂಗಳೂರು
2024ರ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಪಕ್ಷದ ರಾಷ್ಟ್ರೀಯ ನಾಯಕರಿಗೆ ಬಹಳ ಪ್ರಮುಖವಾಗಿದೆ. ಹೀಗಾಗಿ ಈಗಿನಿಂದಲೇ ೨೦೨೩ರ ವಿಧಾನಸಭಾ ಚುನಾವಣೆಯ ಟ್ರೆಂಡ್ ಸೃಷ್ಟಿ ಮಾಡಲು ಬಿಜೆಪಿ ವರಿಷ್ಠರು ನಿರ್ಧಾರ ಮಾಡಿದ್ದಾರೆ. ಚುನಾವಣೆಗೆ ಇನ್ನೂ ಹತ್ತು ತಿಂಗಳು ಬಾಕಿ ಇರುವಾಗಲೇ ಹಿರಿಯ ನಾಯಕರು ಸಾಲು ಸಾಲಾಗಿ ರಾಜ್ಯದತ್ತ ಮುಖ ಮಾಡುತ್ತಿರುವುದು ಸಹ ಇದೇ ಕಾರಣಕ್ಕೆ. ೨೦೧೮ರ ವಿಧಾನಸಭಾ ಚುನಾವಣೆಗಿಂತಲೂ ಹೆಚ್ಚು ಸಿರಿಯಸ್ ಆಗಿ ತೆಗೆದುಕೊಂಡು ತಂತ್ರಗಾರಿಕೆ ಮಾಡಲು ಈಗಿನಿಂದಲೇ ಪ್ಲಾನ್ ಶುರು ಮಾಡಿದ್ದಾರೆ.
ಇದೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ರಾಜ್ಯಕ್ಕೆ ಆಗಮಿಸುತ್ತಿದ್ದು ಸಂಘಟನೆಗೆ ಮತ್ತಷ್ಟು ಚುರುಕು ಕೊಡುವುದರ ಜತೆಗೆ ರಾಜ್ಯ ಬಿಜೆಪಿ ನಾಯಕರಿಗೆ ಬಿಸಿ ಮುಟ್ಟಿಸಲು ತಯಾರಿ ನಡೆಸಿದ್ದಾರೆ. ನಾಳೆ (ಶನಿವಾರ) ಜೆ.ಪಿ. ನಡ್ಡಾ ರಾಜ್ಯಕ್ಕೆ ಆಗಮಿಸುತ್ತಿದ್ದು ಯಲಹಂಕದ ರೆಸಾರ್ಟ್ ಒಂದರಲ್ಲಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸಂಘಟನೆಯ ಪಾಠ ಮಾಡಲಿದ್ದಾರೆ. ಜತೆಗೆ ಮುಂದಿನ ವಿಧಾನಸಭಾ ಚುನಾವಣೆಯ ತಯಾರಿ ಬಗ್ಗೆ ಸಲಹೆ ನೀಡಲಿದ್ದಾರೆ.
ಇದೇ ತಿಂಗಳ ೨೦, ೨೧ರಂದು ಎರಡು ದಿನ ರಾಜ್ಯ ಪ್ರವಾಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅಧಿಕೃತ ಸರ್ಕಾರಿ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಸರ್ಕಾರದ ಅಧಿಕೃತ ಕಾರ್ಯಕ್ರಮಕ್ಕೆ ಬರುತ್ತಿದ್ದರೂ ಸಹ ಇದರ ಹಿಂದೆ ೨೦೨೩ರ ಚುನಾವಣೆಯ ತಯಾರಿ ಇರೋದು ಮಾತ್ರ ಪಕ್ಕಾ ಅಂತಿದ್ದಾರೆ ರಾಜ್ಯ ಬಿಜೆಪಿ ನಾಯಕರು.
ರಾಜ್ಯವೇ ಯಾಕೆ ಟಾರ್ಗೇಟ್?
ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಬಹಳ ಮಹತ್ವ ಪಡೆದುಕೊಂಡಿದೆ. ನಾಲ್ಕು ತಿಂಗಳಿಗೆ ನಡೆಯಲಿರುವ ಗುಜರಾತ್ ಚುನಾವಣೆ ಆದ ಬಳಿಕ ಲೋಕಸಭಾ ಚುನಾವಣೆಗೂ ಮೊದಲು ಬರುವುದು ಕರ್ನಾಟಕ ವಿಧಾನಸಭಾ ಚುನಾವಣೆ. ಈ ಚುನಾವಣೆ ೨೦೨೪ರ ಲೋಕಸಭಾ ಚುನಾವಣೆಗೆ ಅಡಿಪಾಯವಾಗಲಿದೆ. ಹೀಗಾಗಿ ರಾಜ್ಯದ ವಿಧಾನಸಭೆ ಚುನಾವಣೆಯನ್ನು ಕೇಂದ್ರ ನಾಯಕರು ಸಿರಿಯಸ್ ಆಗಿ ತೆಗೆದುಕೊಂಡಿದ್ದಾರೆ.
ರಾಜ್ಯ ಸರ್ಕಾರಕ್ಕೆ ಜನ ವಿರೋಧಿ ಅಲೆ
ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆಯಾದ ಬಳಿಕ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಸರ್ಕಾರದಲ್ಲಿ ಪ್ರಮುಖ ಸಚಿವರ ಇಲಾಖೆಗಳಲ್ಲಿ ಭ್ರಷ್ಟಾಚಾರ ಮತ್ತು ಕಮಿಷನ್ ಆರೋಪಗಳಿಂದ ರಾಜ್ಯ ಸರ್ಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ. ಹೀಗಾಗಿಯೇ ಇಂದಿನಿಂದಲೇ ಕೇಂದ್ರ ನಾಯಕರು ರಾಜ್ಯದಲ್ಲಿ ಎಲೆಕ್ಷನ್ ಮೂಡ್ ಸೃಷ್ಟಿ ಮಾಡಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಬಿಟ್ರೆ ಬೇರೆ ಯಾರೂ ಸಹ ವೋಟ್ ಕನ್ವರ್ಟ್ ಮಾಡುವ ಶಕ್ತಿ ಇಲ್ಲ. ಹೀಗಾಗಿ ಯಡಿಯುರಪ್ಪ ಸಾಥ್ ಪಡೆದು ಕೇಂದ್ರದ ಎಂಟು ವರ್ಷಗಳ ಬಿಜೆಪಿ ಸಾಧನೆಗಳಿಂದಲೇ ಚುನಾವಣೆ ಎದುರಿಸುವ ತಂತ್ರಗಾರಿಕೆ ಬಿಜೆಪಿ ವರಿಷ್ಠರು ಮಾಡ್ತಿದ್ದಾರೆ.
ಬಿಜೆಪಿ ವರಿಷ್ಠರಿಗೆ ಭಯವೇಕೆ?
ಬೇರೆ ರಾಜ್ಯಗಳ ಕಾಂಗ್ರೆಸ್‌ಗೆ ಹೊಲಿಕೆ ಮಾಡಿದ್ರೆ ರಾಜ್ಯ ಕಾಂಗ್ರೆಸ್ ಬಲಿಷ್ಠವಾಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇತ್ತಿಚೆಗೆ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಂಡು ಬಂದಿದ್ದಾರೆ. ಇಷ್ಟು ದಿನ ಇದ್ದ ಇಬ್ಬರ ನಡುವಿನ ಕಚ್ಚಾಟ ಕಡಿಮೆ ಆಗಿದೆ. ಮೊದಲು ಚುನಾವಣೆ ಗೆಲ್ಲಿ ಬಳಿಕ ಸಿಎಂ ಯಾರು ಅನ್ನೋದನ್ನ ನಾವು ನಿರ್ಧಾರ ಮಾಡ್ತೀವಿ ಎಂದು ಹೈಕಮಾಂಡ್ ನಾಯಕರು ಹೇಳಿದ ಬಳಿಕ ಉಭಯ ನಾಯಕರು ಸಿಎಂ ಸ್ಥಾನಕ್ಕೆ ಕದನ ವಿರಾಮ ಘೋಷಣೆ ಮಾಡಿದ್ದಾರೆ. ಇನ್ನೂ ಇತ್ತಿಚೆಗೆ ಬಿಜೆಪಿ ರಾಜ್ಯ ಸಂಘಟನೆ ವೀಕ್ ಆಗಿದ್ದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ೮೦ರ ಗಡಿ ದಾಟುವುದು ಕಷ್ಟ ಅನ್ನೋ ರಿಪೋರ್ಟ್ ಸಿಕ್ಕಿದೆ. ಹೀಗಾಗಿ ಕೇಂದ್ರ ನಾಯಕರಿಗೆ ರಾಜ್ಯ ಬಿಜೆಪಿ ಬಗ್ಗೆ ಚಿಂತೆ ಶುರುವಾಗಿದ್ದು ಖುದ್ದು ತಾವೇ ಕಣಕ್ಕೆ ಇಳಿಯುವ ತೀರ್ಮಾನ ಮಾಡಿದ್ದಾರೆ.
ಫೆಬ್ರವರಿ – ಮೇವರೆಗೂ ನಡ್ಡಾ ರಾಜ್ಯದಲ್ಲಿ ಟಿಕಾಣಿ..?
೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ನಾಯಕರ ಕಿತ್ತಾಟಕ್ಕೆ ಬೇಸತ್ತು ಸ್ವತಃ ಅಮಿತ್ ಶಾ ಎರಡು ತಿಂಗಳು ರಾಜ್ಯದಲ್ಲಿ ಟಿಕಾಣಿ ಹೂಡಿದ್ದರು. ಖುದ್ದು ವಾರ್ಡ್‌ವಾರು ಮತ್ತು ಪಂಚಾಯತ್‌ವಾರು ಮಾಹಿತಿ ಪಡೆದು ಸಂಘಟನೆಗೆ ಚುರುಕುಗೊಳಿಸಿ ೧೦೦ರ ಗಡಿ ದಾಟುವಲ್ಲಿ ಸಕ್ಸಸ್ ಆಗಿದರು. ಹೀಗಾಗಿ ಈ ಬಾರಿಯೂ ಸಹ ಸ್ವತಃ ನಡ್ಡಾ ಅವರೇ ಫೀಲ್ಡ್‌ಗೆ ಇಳಿಯಲಿದ್ದು ೨೦೨೩ರ ಜನವರಿ ಬಳಿಕ ರಾಜ್ಯದಲ್ಲಿಯೇ ಟಿಕಾಣಿ ಹಾಕಿ ಮಿಷನ್ ೧೫೦ ಗುರಿ ಸಾಧಿಸುವ ಬಗ್ಗೆ ತಂತ್ರಗಾರಿಕೆ ಮಾಡಲಿದ್ದಾರೆ ಎನ್ನುತ್ತಿವೆ ಬಿಜೆಪಿ ಮೂಲಗಳು.
೨೦೨೩ರಲ್ಲಿ ಮಿಷನ್ ೧೫೦ ಗುರಿ ಮುಟ್ಟಲು ಬಿಜೆಪಿ ಕೇಂದ್ರ ವರಿಷ್ಠರು ಈಗಿನಿಂದಲೇ ಆಲರ್ಟ್ ಆಗಿರುವುದು ಮಾತ್ರ ಸತ್ಯ.
ಇದನ್ನೂ ಓದಿ| ಎಲೆಕ್ಷನ್ ಮೋಡ್‌ನಲ್ಲಿ ಸರ್ಕಾರ: ಸ್ಥಳೀಯ ಸಂಸ್ಥೆಗಳಿಗೆ ಕೋಟಿ ಕೋಟಿ ಹಂಚಿಕೆ