Site icon Vistara News

Theft Case : ಪಕ್ಕದ ಮನೆಗೆ ಕನ್ನ ಹಾಕಿದ ಚೋರ್‌ ದಂಪತಿ; ಕೆಲಸ ಕೊಟ್ಟ ಮಾಲೀಕನನ್ನೇ ದೋಚಿದ

theft case

ಬೆಂಗಳೂರು: ಮನೆ ಕಟ್ಟಲೆಂದು ಮಗನಿಗೆ ಹೆಲ್ತ್‌ ಇನ್‌ಸೆಕ್ಟರ್‌ವೊಬ್ಬರು 50 ಲಕ್ಷ ರೂ. ಹಣ ಕೊಟ್ಟಿದ್ದರು. ಈ ವಿಷಯ ಮೊಮ್ಮಗಳಿಗೆ ಅದ್ಹೇಗೋ ಗೊತ್ತಾಗಿತ್ತು. ಕಂತೆ ಕಂತೆ ಹಣ ಕಂಡ ಮೊಮ್ಮಗಳು, ಆ ಹಣದಲ್ಲಿ ಫ್ರೆಂಡ್‌ ಜತೆಗೆ ಪಾರ್ಟಿ ಅಂತ ಮಸ್ತ್‌ ಮಜಾ ಮಾಡುತ್ತಿದ್ದಳು. ಆಕೆಯ ಲೈಫ್‌ಸ್ಟೈಲ್‌ ಕಂಡ ಪಕ್ಕದ ಮನೆ ದಂಪತಿ ಯುವತಿಗೆ ಬ್ಲಾಕ್‌ ಮಾಡಿ ಬರೋಬ್ಬರಿ 25 ಲಕ್ಷ ರೂ. ಸುಲಿಗೆ ಮಾಡಿದ್ದರು. ಅಷ್ಟಕ್ಕೆ ಸುಮ್ಮನಾಗದ ಈ ಖತರ್ನಾಕ್‌ ದಂಪತಿ ಮನೆಗಳ್ಳತನ (Theft Case) ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾರೆ. ಇವರಿಗೆ ಸಾಥ್‌ ಕೊಟ್ಟ ರೌಡಿಶೀಟರ್‌ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ರೌಡಿಶೀಟರ್ ಸಲ್ಮಾನ್ ಖಾನ್ @ ಹಂಡ ಸಲ್ಮಾನ್, ಅಸ್ಘರ್ ಮೆಹಬಿ, ಫಾತಿಮಾ, ಮೋಹಿದ್ ರಜ್‌ ಬಂಧಿತ ಮನೆಗಳ್ಳರಾಗಿದ್ದರೆ. ಬಂಧಿತರಿಂದ 24 ಲಕ್ಷ ನಗದು,150 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಈ ನಾಲ್ವರು ನೆರೆ ಮನೆಯ ನಾಜಿಮಾ ಅಪ್ಸಾನ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿದ್ದರು.

ನಾಜಿಮಾ ಪತಿ ಮೊಹಮ್ಮದ್ ಸಾಬುದೀನ್‌ಗೆ ಅವರ ತಂದೆ 50 ಲಕ್ಷ ರೂ. ನೀಡಿದ್ದರು. ಸಾಬುದೀನ್ ತಂದೆ ಹೆಲ್ತ್ ಇನ್ಸ್‌ಪೆಕ್ಟರ್ ಆಗಿದ್ದರು. ಹೀಗಾಗಿ ಮನೆ ಖರೀದಿ ಮಾಡಲು ಸಾಬುದೀನ್‌ಗೆ 50 ಲಕ್ಷ ರೂ. ನೀಡಿದ್ದರು. ಅನಂತರ ಅನಾರೋಗ್ಯದಿಂದ ಮೃತಪಟ್ಟಿದ್ದರು. ನಾಜಿಮಾ ಮತ್ತು ಸಾಬುದೀನ್ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇದರಲ್ಲಿ ಎರಡನೇ ಮಗಳಿಗೆ ಮನೆಯಲ್ಲಿ ಹಣ ಇರುವುದು ಗೊತ್ತಾಗಿತ್ತು. ಪೋಷಕರಿಗೆ ತಿಳಿಯದಂತೆ 2ನೇ ಮಗಳು ಸ್ನೇಹಿತರ ಜತೆಗೆ ಪಾರ್ಟಿ ಮಾಡಲು ಹಣ ಖರ್ಚು ಮಾಡುತ್ತಿದ್ದಳು.

ಇದೆಲ್ಲವನ್ನು ಪಕ್ಕದ ಮನೆಯಲ್ಲಿದ್ದ ಫಾತಿಮಾ ಹಾಗೂ ಮೋಹಿದ್ ರಜ್‌ ದಂಪತಿ ಗಮನಿಸಿದ್ದರು. ಬಳಿಕ ನಿನ್ನ ತಂದೆ -ತಾಯಿಯನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಸಿ 2ನೇ ಮಗಳಿಂದ ಕಳೆದೊಂದು ಒಂದು ವರ್ಷದಿಂದ ಹಂತ ಹಂತವಾಗಿ 25 ಲಕ್ಷ ರೂ. ಸುಲಿಗೆ ಮಾಡಿದ್ದರು. ಹಣದ ರುಚಿಕೊಂಡ ಈ ಚೋರ್‌ ದಂಪತಿ ಮತ್ತಷ್ಟು ಹಣ ಇರಬಹುದು ಎಂದು ಹೊಂಚು ಹಾಕಿದ್ದರು. ಇದಕ್ಕಾಗಿ ರೌಡಿಶೀಟರ್ ಸಲ್ಮಾನ್ ಖಾನ್, ಅಸ್ಘರ್ ಮೆಹಬಿ ಸಂಪರ್ಕ ಮಾಡಿದ್ದರು. ಅವರ ಮೂಲಕ ಮನೆ ಕಳ್ಳತನ ಮಾಡಿಸಲು ಪ್ಲಾನ್ ಮಾಡಿದ್ದರು. ಬೇಸಿಗೆ ರಜೆ ಇದ್ದಿದ್ದನ್ನೇ ಬಂಡವಾಳ ಮಾಡಿಕೊಂಡಿದ್ದರು.

ಮೇ 7ರಂದು ಸಾಬುದ್ದೀನ್‌ನ ಮಕ್ಕಳಿಬ್ಬರು ಹುಟ್ಟೂರಾದ ಹಿರಿಯೂರಿಗೆ ತೆರಳಿದರು. ಇತ್ತ ಸಾಬುದ್ದೀನ್ ಕೆಲಸಕ್ಕೆ ಹೋದಾಗ, ಹಿಂಬದಿ ಬಾಗಿಲು ಮುರಿದು ಕಳ್ಳತನ ಮಾಡಿ ಮುಂಬೈ ಪರಾರಿ ಆಗಲು ಮುಂದಾಗಿದ್ದರು. ಮುಂಬೈ ಕಡೆಗೆ ಹೊರಟಿದ್ದ ಪ್ರಮುಖ ಆರೋಪಿಗಳಾದ ಸಲ್ಮಾನ್, ಅಸ್ಗರ್‌ನನ್ನು ಕೃತ್ಯದ ನಡೆದ 6 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಸಿಕ್ಕಿದ್ದು ಹೇಗೆ?

ಗಾಂಧಿನಗರ ವಿಆರ್‌ಎಲ್ ಬಸ್ ನಿಲ್ದಾಣ ಬಳಿ ಮೊಬೈಲ್ ಲೊಕೇಶನ್ ಆಫ್‌ ಆಗಿತ್ತು. ಹೀಗಾಗಿ ಆರೋಪಿಗಳು ಬಸ್‌ನಲ್ಲಿಯೆ ಹೊರಟಿರಬಹುದು ಎಂದು ಪೊಲೀಸರು ಶಂಕಿಸಿದರು. ಹಾಗಾಗಿ ಟ್ರಾವೆಲ್ ಏಜೆನ್ಸಿಗೆ ಆರೋಪಿಗಳ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಇಬ್ಬರ ಹೆಸರಲ್ಲಿ ಎಸ್‌ಆರ್‌ಎಸ್‌ ಬಸ್‌ನಲ್ಲಿ ಮುಂಬೈಗೆ ಟಿಕೆಟ್ ಬುಕ್ ಆಗಿತ್ತು. ಕೂಡಲೇ ಚಾಲಕನಿಗೆ ಕರೆ ಮಾಡಿ ಬಸ್‌ನಲ್ಲಿ ಆರೋಪಿಗಳಿರುವ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ಚಾಲಕ ನೇರವಾಗಿ ಬಸ್‌ ಅನ್ನು ಚಿತ್ರದುರ್ಗ ರೂರಲ್ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದರು. ಕೂಡಲೇ ಚಿತ್ರದುರ್ಗ ರೂರಲ್ ಠಾಣೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಅಶೋಕನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ:Road Accident: ಸ್ಕೂಟರ್‌ಗೆ ಟ್ರಕ್‌, ಲಾರಿಗೆ ಬಸ್‌, ಡಿವೈಡರ್‌ಗೆ ಕಾರು ಡಿಕ್ಕಿ; ಅಪಾಯದಿಂದ ಜಸ್ಟ್‌ ಮಿಸ್‌

ಕೆಲಸ ಕೊಟ್ಟ ಮಾಲೀಕನಿಗೆ ದ್ರೋಹ

ನಂಬಿ‌ ಕೆಲಸ ಕೊಟ್ಟ ಮಾಲೀಕನಿಗೆ ಕೆಲಸಗಾರನೊಬ್ಬ ದ್ರೋಹ ಬಗೆದಿದ್ದಾನೆ. ಮಾಲೀಕ ಹಣ ಇಡುವುದನ್ನು ನೋಡಿಕೊಂಡ ಕೆಲಸಗಾರ ಹಣವನ್ನೆಲ್ಲ ದೋಚಿ ಎಸ್ಕೇಪ್‌ ಆದ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಹೇಶ್‌ ಎಂಬಾತ ಕೆ.ಎನ್.ಎಸ್ ಇನ್ಪ್ರಾಕ್ಚರ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದ. ಕಂಪೆನಿ ಮಾಲೀಕ ಕಛೇರಿಯಲ್ಲಿ ಹಣ ಇಡುವುದನ್ನು ಗಮನಿಸಿದ್ದ. ಕಛೇರಿಯಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡು ಹಣ ದೋಚಿ ಪರಾರಿಯಾಗಿದ್ದ. ಪರಾರಿಯಾದ ಮಹೇಶ್‌ ಸುಬ್ರಮಣ್ಯದ ಮೂಲಕ ಮಡಿಕೇರಿಯ ಹೊಂ ಸ್ಟೇ ಸೇರಿಕೊಂಡು ತಲೆ ಮರೆಸಿಕೊಂಡಿದ್ದ.ಆರೋಪಿ ಮಾಹಿತಿ ಪಡೆದು ಮಡಿಕೇರಿಯಲ್ಲಿ ಹಣ ಸಹಿತ ಮಹೇಶ್‌ನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 24.50 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ.

ಕುಖ್ಯಾತ ಆರೋಪಿ ಅರೆಸ್ಟ್‌

ಬೆಂಗಳೂರಿನ ಬಸವೇಶ್ವರ ನಗರ ಪೊಲೀಸರು ಕಾರ್ಯಚರಣೆ ನಡೆಸಿ ‌ಕುಖ್ಯಾತ ಕಳ್ಳನನ್ನು ಬಂಧಿಸಿದ್ದಾರೆ. ಮೂರು ಮನೆ ಕಳ್ಳತನ ‌ನಡೆಸಿ ತಲೆ ಮರೆಸಿಕೊಂಡಿದ್ದ ಸಯ್ಯದ್ ಅಹ್ಮದ್ @ ಸಯ್ಯದ್ ಬಂಧಿತ‌ ಆರೋಪಿಯಾಗಿದ್ದಾನೆ. ಬಂಧಿತನಿಂದ 653 ಗ್ರಾಂ ಚಿನ್ನಾಭರಣ 22 ಗ್ರಾಂ ವಜ್ರ ಸೇರಿದಂತೆ 1 ಕೆ.ಜಿ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು‌ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ಕೊಲೆ ಸೇರಿದಂತೆ 40 ಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಬೆಂಗಳೂರು ಸೇರಿದಂತೆ ಮೈಸೂರಿನ ವಿವಿ ಪುರಂನಲ್ಲಿ ಕೈ ಚಳಕ ತೋರಿದ್ದಾನೆ

ವಿದೇಶಿಗರು ಅರೆಸ್ಟ್‌

ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದಿಂದ ವಿಶೇಷ ಕಾರ್ಯಚರಣೆ ನಡೆಸಿ ವಿದೇಶಿಗರು ಸೇರಿ ಒಟ್ಟು ಎಂಟು ಜನರ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 2.74 ಕೋಟಿ ಮೌಲ್ಯದ ಡ್ರಗ್ಗ್ ವಶಕ್ಕೆ ಪಡೆಯಲಾಗಿದೆ. ಸಂಪಿಗೆಹಳ್ಳಿ, ವಿವಿಪುರಂ, ಕಾಟನ್ ಪೇಟೆ, ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version