Site icon Vistara News

Theft Case : ತಂದೆ ಬೈದಿದ್ದಕ್ಕೆ ಮನೆ ಬಿಟ್ಟು ಆಟೋ ಹತ್ತಿದ ಯುವಕ; 100 ಗ್ರಾಂ ಚಿನ್ನ ಕಸಿದು ಚಾಲಕ ಎಸ್ಕೇಪ್

Theft Case In Bengaluru

ಬೆಂಗಳೂರು: ಕೋಪದಲ್ಲಿ ಮನೆ ಬಿಟ್ಟು ಓಡಿ ಹೋಗುತ್ತಿದ್ದ ಯುವಕನ ಬಳಿಯೇ 100 ಗ್ರಾಂ ಚಿನ್ನಾಭರಣವನ್ನು ಸುಲಿಗೆ ಮಾಡಿ (Theft Case) ಪರಾರಿ ಆಗಿದ್ದ ಆಟೋ ಚಾಲಕನನ್ನು (Auto Driver) ಬಂಧಿಸಲಾಗಿದೆ. ಸಾಧಿಕ್@ ಅನಿಲ್ @ ಅನಿ ಬಂಧಿತ ಆರೋಪಿ.

ಸ್ನೇಹಿತರ ಜತೆಗೆಲ್ಲ ಸೇರಬೇಡ ಎಂದು ಬೈದು ಬುದ್ಧಿ ಮಾತು ಹೇಳಿದ್ದಕ್ಕೆ ತಂದೆ ಮೇಲೆ ಕೋಪಿಸಿಕೊಂಡ ಯುವಕ ಮನೆಯಿಂದ ಹೊರ ನಡೆಸಿದ್ದ. ಈ ಊರು ಬಿಟ್ಟೆ ದೂರ ಹೋಗಬೇಕು ಎಂದುಕೊಂಡ ಯುವಕ ಬಸವೇಶ್ವರನಗರದಿಂದ ಮೆಜೆಸ್ಟಿಕ್‌ಗೆ ಹೋಗಲು ಆಟೋ ಹತ್ತಿದ್ದ.

ಆಟೋ ಹತ್ತಿದ ಕೂಡಲೇ ತನ್ನ ಮೈ ಮೇಲಿದ್ದ ಒಡವೆಗಳನ್ನು ಬ್ಯಾಗ್‌ನಲ್ಲಿ ಇಟ್ಟುಕೊಳ್ಳುತ್ತಿದ್ದ. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಆಟೋ ಚಾಲಕನ ಬುದ್ಧಿ ಆದಾಗಲೇ ಕ್ರಿಮಿನಲ್‌ ಕಡೆಗೆ ತಿರುಗಿತ್ತು. ಹೇಗಾದರೂ ಮಾಡಿ ಯುವಕನನ್ನು ಯಾಮಾರಿಸಿ ಚಿನ್ನವನ್ನೆಲ್ಲ ದೋಚಬೇಕೆಂದು ಪ್ಲ್ಯಾನ್‌ ಮಾಡಿದ್ದ.

ಅದರಂತೆ ಯುವಕ ರಮೇಶ್ ನಗರ ಸಮೀಪ ಬಂದಾಗ ಮೂತ್ರ ವಿಸರ್ಜನೆಗೆಂದು ಆಟೋ ಇಳಿದಿದ್ದ. ಇದೇ ಸರಿಯಾದ ಸಮಯ ಎಂದುಕೊಂಡ ಆಟೋ ಚಾಲಕ ಯುವಕನ ಕೈಯಿಂದ ಬ್ಯಾಗ್‌ ಕಿತ್ತುಕೊಂಡು ಆತನನ್ನು ತಳ್ಳಿ ಎಸ್ಕೇಪ್ ಆಗಿದ್ದ.

ಇದನ್ನೂ ಓದಿ: Liquid Nitrogen : ಕಾಟನ್ ಕ್ಯಾಂಡಿ ಬಳಿಕ ಕರ್ನಾಟಕದಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ನಿಷೇಧ

ಇತ್ತ ಯುವಕ ಈ ವಿಚಾರವನ್ನು ಯಾರಿಗೂ ಹೇಳದೆ ಮತ್ತೊಂದು ಆಟೋ ಹತ್ತಿ ಮೆಜೆಸ್ಟಿಕ್‌ಗೆ ಬಂದಿದ್ದ. ನಂತರ ರೈಲಿನ ಮೂಲಕ ಪುರಿ ಜಗನ್ನಾಥ ದೇವಸ್ಥಾನಕ್ಕೆ ತೆರಳಿದ್ದ. ರಾತ್ರಿಯಾದರೂ ಮಗ ಬಾರದಿದ್ದಾಗ ಆತಂಕಗೊಂಡ ಪೋಷಕರು ಎಲ್ಲ ಕಡೆ ಹುಡುಕಾಡಿದ್ದಾರೆ. ಸಿಗದೆ ಇದ್ದಾಗ ಪೊಲೀಸ್‌ ಮೆಟ್ಟಿಲೇರಿದ್ದಾರೆ. ಅಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಿಸಿದ್ದರು. ಇತ್ತ ತನಿಖೆಗಿಳಿದಾಗ ಪೊಲೀಸರಿಗೆ ಯುವಕ ಪುರಿ ಜಗನ್ನಾಥ ದೇವಸ್ಥಾನದ ಬಳಿ ಇರುವುದು ತಿಳಿದು ಬಂದಿದೆ.

ನಂತರ ಪೊಲೀಸರು ಆತನನ್ನು ಕರೆ ತಂದು ಮನೆಯವರಿಗೆ ಒಪ್ಪಿಸಿದ್ದಾರೆ. ಈ ವೇಳೆ ಪೋಷಕರು ಮೈಮೇಲಿದ್ದ ಚಿನ್ನಾಭರಣ ಎಲ್ಲಿ ಎಂದು ಕೇಳಿದಾಗ ಸುಲಿಗೆ ಪ್ರಕರಣ ಬಯಲಿಗೆ ಬಂದಿದೆ. ಆ ಬಳಿಕ ಈ ಬಗ್ಗೆ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಕಳ್ಳತನ ಸಂಬಂಧ ದೂರು ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಿಸಿಟಿವಿ ಪರಿಶೀಲಿಸಿದಾಗ ವಿದ್ಯಾರಣ್ಯಪುರ ಬಳಿ ಇರುವ ಎಂಎಸ್ ಪಾಳ್ಯದಲ್ಲಿ ಆರೋಪಿಯ‌ನ್ನು ಬಂಧಿಸಲಾಗಿದೆ. ಬಂಧಿತನಿಂದ 6 ಲಕ್ಷಕ್ಕೂ ಹೆಚ್ಚು ಮೌಲ್ಯದ 100 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version