Site icon Vistara News

Theft Case : ಚಿನ್ನ ಕದ್ದಿದ್ದ ʻಗುಲಾಬ್‌ʼಗೆ 26 ವರ್ಷದ ಬಳಿಕ ʻಜಾಮೂನುʼ ತಿನ್ನಿಸಿದ ಪೊಲೀಸ್‌!

Jayanagar police arrest chain snatcher after 26 years

ಬೆಂಗಳೂರು: ಅವನೊಬ್ಬ ಚಾಣಾಕ್ಷ ಕಳ್ಳ. ಅವನು ಮಾಡಿದ್ದು ಒಂದೇ ಅಪರಾಧವಾದರೂ, ಸುಮಾರು 26 ವರ್ಷಗಳ ಕಾಲ ಪೊಲೀಸರ ಕೈಗೆ ಸಿಗದೆ ಚಳ್ಳೇಹಣ್ಣು ತಿನ್ನಿಸಿದ್ದ. ಆತನಿಗಾಗಿ ಹುಡುಕಾಡಿದ ಪೊಲೀಸರು ಸಾಕಾಗಿದ್ದರು. ಇನ್ನೇನು ಈ ಪ್ರಕರಣವನ್ನು ಮುಚ್ಚಹಾಕುವ ಹಂತದಲ್ಲಿ ಇರುವಾಗಲೇ, ಜಯನಗರ ಪೊಲೀಸರು ಖತರ್ನಾಕ್‌ ಕಳ್ಳನನ್ನು (Theft Case) ಬಂಧಿಸಿದ್ದಾರೆ.

ಗುಲಾಬ್ ಖಾನ್ ಗುಲ್ಲು ಬಂಧಿತ ಆರೋಪಿಯಾಗಿದ್ದಾನೆ. ಗುಲಾಬ್‌ ಸರಗಳ್ಳತನ ಮಾಡಿ ಪರಾರಿಯಾಗಿದ್ದ. ಸಾಮಾನ್ಯವಾಗಿ ಕೃತ್ಯವನ್ನು ಎಸಗಿದ ಆರೋಪಿಗಳು ಊರು ಬಿಟ್ಟು ಹೋಗುತ್ತಾರೆ. ಆದರೆ ಆರೋಪಿ ಗುಲಾಬ್ ಖಾನ್ ಸ್ಟೈಲ್‌ ಬೇರೆ, ಪೊಲೀಸರು ಏನ್ ಮಾಡುತ್ತಾರೆ ಎಂಬ ಭಂಡ ಧೃರ್ಯವನ್ನು ಹೊಂದಿದ್ದ. ಸರಗಳ್ಳ ಗುಲಾಬ್‌ ಸರ್ಕಾರಿ ಕಚೇರಿಯಲ್ಲಿಯೇ ಕೆಲಸ ಮಾಡಿಕೊಂಡು ಆರಾಮ್‌ ಆಗಿದ್ದ.

ಇದನ್ನೂ ಓದಿ: Physical Abuse : ಮದ್ಯದ ನಶೆಯಲ್ಲಿ ಪತಿಗೆ ಥಳಿಸಿದ ಕಿರಾತಕರು; ಪತ್ನಿ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ

1998ರಲ್ಲಿ ಗುಲಾಬ್ ಖಾನ್ ಜಯನಗರದಲ್ಲಿ ವಸಂತ್ ಎಂಬುವವರ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿದ್ದ. ಅಂದು ವಸಂತ ಅವರ ಕುತ್ತಿಗೆಗೆ ಗಾಯವು ಆಗಿತ್ತು. ಘಟನೆ ಸಂಬಂಧ ದೂರು ನೀಡಿದ್ದರು. ಪೊಲೀಸರ ಬಳಿ ಈಗಿರುವಂತೆ ಮೊಬೈಲ್ ನೆಟ್‌ವರ್ಕ್‌, ಸಿಸಿಟಿವಿಯಂತಹ ಟೆಕ್ನಾಲಜಿಗಳಿರಲಿಲ್ಲ. ಬೇಸಿಕ್ ಪೊಲೀಸಿಂಗ್ ಮಾದರಿಯಲ್ಲಿಯೇ ಹುಡುಕಬೇಕಾಗಿತ್ತು.

ಈ ಚಾಣಾಕ್ಷ ಗುಲಾಬ್ ಖಾನ್ ಸರ ಕಳ್ಳತನ ಮಾಡಿ ಪರಾರಿಯಾಗಿದ್ದವನು ಪೊಲೀಸರ ಕೈಗೆ ಸಿಕ್ಕಿಯೇ ಇರಲಿಲ್ಲ. ಎಫ್‌ಐಆರ್ ದಾಖಲಿಸಿ ಎಷ್ಟೇ ಮಾನಿಟರ್ ಮಾಡಿದರೂ ಸಿಗದ ಹಿನ್ನೆಲೆಯಲ್ಲಿ ಆರೋಪಿ ಸಾವನ್ನಪ್ಪಿರಬಹುದು ಎಂದು ಪೊಲೀಸರು ಭಾವಿಸಿದ್ದರು. ಆದರೆ ಗುಲಾಬ್ ಖಾನ್ ಎಲ್ಲಿಯೂ ಪರಾರಿಯಾಗದೆ ಕನಕಪುರ ನಗರ ಸಭೆಯ ಕಚೇರಿಯಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದ. ಜತೆಗೆ ಫ್ರೀ ಟೈಮ್‌ನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ.

ನ್ಯಾಯಾಲಯದಲ್ಲಿದ್ದ ಪ್ರಕರಣವನ್ನು ಕ್ಲೋಸ್ ಮಾಡುವ ಸಿದ್ಧತೆ ನಡೆದಿತ್ತು. ಕೊನೆಗೆ ಜಯನಗರ ಪೊಲೀಸರು ತನಿಖೆಯನ್ನು ನಡೆಸಿ ಕನಕಪುರದಿಂದ ಬಂಧಿಸಿ ಕರೆ ತಂದಿದ್ದಾರೆ. ಗುಲಾಬ್‌ ಅಪರಾಧ ಎಸಗಿದಾಗ 24 ವರ್ಷ ವಯಸ್ಸು ಆಗಿತ್ತು. ಆದರೀಗ ಆತನಿಗೆ 50 ವರ್ಷ ದಾಟಿದ್ದು, 26 ವರ್ಷಗಳ ಬಳಿಕ ಸಿಕ್ಕಿ ಬಿದ್ದಿದ್ದಾನೆ.

ಜಯನಗರದಲ್ಲಿ ಕಳ್ಳತನ ಮಾಡಿದ‌ ನಂತರ ಯಾವುದೇ ಪ್ರಕರಣದಲ್ಲಿ ಭಾಗಿಯಾಗಿರಲಿಲ್ಲ. ಸದ್ಯ ಪ್ರಕರಣವನ್ನು ರೀ ಓಪನ್ ಮಾಡಿ ಆರೋಪಿಯನ್ನು ಕೋರ್ಟ್ ಮುಂದೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರಾಗದ ಇಂತಹ ಉದ್ಘೋಷಿತ ಆರೋಪಿಗಳು ನಗರದಲ್ಲಿ ಸಾಕಷ್ಟು ಜನರಿದ್ದಾರೆ. ಪೊಲೀಸರು ಅಂತಹ ವ್ಯಕ್ತಿಗಳನ್ನು ಹುಡುಕಿ ನ್ಯಾಯಲಯದಲ್ಲಿ ನಿಲ್ಲಿಸಲು ಎಲ್ಲಾ ಸಿದ್ದತೆಗಳನ್ನು ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version