Site icon Vistara News

Theft Case : ಬೆಂಗಳೂರಿನಲ್ಲಿ ಪ್ರೇಯಸಿಗಾಗಿ ಕಳ್ಳತನಕ್ಕೆ ಇಳಿದ ಪ್ರಿಯತಮ! ಮದುವೆಯಾಗಲು ಹೊರಟವರು ಜೈಲುಪಾಲು

Theft Case

ಬೆಂಗಳೂರು: ಅವರಿಬ್ಬರು ಜೋಡಿ ಆ್ಯಪ್‌ನಲ್ಲಿ ಪರಿಚಯವಾಗಿದ್ದರು. ಪರಿಚಯವು ಪ್ರೀತಿಗೂ ತಿರುಗಿತ್ತು. ಪ್ರೇಯಸಿಗಾಗಿ ಖದೀಮನಾದ ಪ್ರಿಯಕರ ಕಳ್ಳತನ (Theft Case) ಮಾಡಿ ಇದೀಗ ಪೊಲೀಸರಿಗೆ ಲಾಕ್‌ ಆಗಿದ್ದಾನೆ. ಪ್ರಿಯಕರನಿಗೆ ಕಳ್ಳತನದ ಐಡಿಯಾ ಕೊಟ್ಟಿದ್ದ ಪ್ರಿಯತಮೆಯೂ ಜೈಲುಪಾಲಾಗಿದ್ದಾಳೆ. ನಾರಾಯಣಸ್ವಾಮಿ (34) ಹಾಗೂ ನವೀನ (39) ಈ ಇಬ್ಬರು ಖತರ್ನಾಕ್ ಪ್ರೇಮಿಗಳನ್ನು ಬೆಂಗಳೂರಿನ ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.

ನಾರಾಯಣಸ್ವಾಮಿ ಮೂಲತಃ ತಮಿಳುನಾಡು ಮೂಲದವನು. ನಾರಾಯಣಸ್ವಾಮಿ ಹೆಂಡತಿಗೆ ಪ್ಯಾರಲಿಸಿಸ್ ಆಗಿತ್ತು. ಇತ್ತ ತಾಯಿ ಬೆಳ್ಳಿಯಮ್ಮ ಮನೆಕೆಲಸ ಮಾಡುತ್ತಿದ್ದರು. ನಾರಾಯಣಸ್ವಾಮಿ ಸಹ ಆಗಾಗ ಮನೆಕೆಲಸ ಮಾಡಲು ಹೋಗುತ್ತಿದ್ದ. ಈ ನಡುವೆ ನಾರಾಯಣಸ್ವಾಮಿಗೆ ಜೋಡಿ ಆ್ಯಪ್‌ನಲ್ಲಿ ನವೀನ ಎಂಬ ಮಹಿಳೆಯ ಪರಿಚಯವಾಗಿತ್ತು. ನವೀನಾಳ ಗಂಡನಿಗೂ ಪ್ಯಾರಲಿಸಿಸ್ ಆಗಿತ್ತು.

ಹೀಗಾಗಿ ಡೇಟಿಂಗ್ ಆ್ಯಪ್‌ಗಳಲ್ಲಿ ಯುವಕರನ್ನು ಹುಡುಕಿ ಮಾತನಾಡುತ್ತಿದ್ದಳು. ಈ ನಾರಾಯಣಸ್ವಾಮಿ ಹಾಗೂ ನವೀನ ಇವರಿಬ್ಬರಿಗೂ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಪರಿಚಯವಾದ ಬಳಿಕ ಮಕ್ಕಳನ್ನು ಬಿಟ್ಟು ಇಬ್ಬರು ಮದುವೆಯಾಗುವ ನಿರ್ಧಾರ ಮಾಡಿದ್ದರು. ಇದಕ್ಕಾಗಿ ಹಣ ಬೇಕಾಗಿದ್ದ ಕಾರಣ ಕಳ್ಳತನದ ಪ್ಲ್ಯಾನ್ ಮಾಡಿದ್ದರು. ನಾರಾಯಣಸ್ವಾಮಿ ತಾಯಿ ಕೆಲಸ ಮಾಡುತ್ತಿದ್ದ ಮನೆಯಲ್ಲಿ ಚಿನ್ನಾಭರಣ ಇರುವ ಕುರಿತು ಮಾಹಿತಿ ಸಂಗ್ರಹಿಸಿದ್ದರು.

ನಾರಾಯಣಸ್ವಾಮಿ ತಾಯಿ ಬೆಳ್ಳಿಯಮ್ಮ ಅವರು ಲಕ್ಕಸಂದ್ರದ ರಿಹಾನ್ ಅಸ್ಮ ಎಂಬುವವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಆಗಾಗ ಅಲ್ಲಿಗೆ ಹೋಗುತ್ತಿದ್ದ ನಾರಾಯಣಸ್ವಾಮಿ ರಿಹಾನ್ ಅಸ್ಮ ಮನೆಯಲ್ಲಿದ್ದ ಸುಮಾರು 330 ಗ್ರಾಂ ಚಿನ್ನಾಭರಣ ಕದ್ದಿದ್ದ. ನಂತರ ಕದ್ದ ಚಿನ್ನವನ್ನು ಈ ಜೋಡಿ ಸುಮಾರು 16 ಕಡೆಗಳಲ್ಲಿ ಅಡವಿಟ್ಟಿದ್ದರು.

ಹೆಂಡತಿ ಮಕ್ಕಳನ್ನು ಬಿಟ್ಟು ಚೆನ್ನೈಗೆ ಪರಾರಿಯಾದ ಜೋಡಿ

ನಂತರ ಆ ಹಣದೊಂದಿಗೆ ಹೆಂಡತಿ ಮಕ್ಕಳನ್ನು ಬಿಟ್ಟು ಚೆನ್ನೈಗೆ ಪರಾರಿಯಾಗಿದ್ದರು. ಚೆನ್ನೈನಲ್ಲಿ ಬಾಡಿಗೆ ಮನೆ ಮಾಡಿ ವಾಸವಿದ್ದರು. ಮನೆ ಮಾಲೀಕ ರಿಹಾನ್ ಅಸ್ಮ ಕಳ್ಳತನದ ವಿಷಯ ತಿಳಿದು ನಾರಾಯಣಸ್ವಾಮಿ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಬಳಿ ತನಿಖೆಗಿಳಿದ ಪೊಲೀಸರು ನಾರಾಯಣಸ್ವಾಮಿಯನ್ನು ಬಂಧಿಸಿ ವಿಚಾರಣೆ ಮಾಡಿದಾಗ ವಿಚಾರ ಬಯಲಿಗೆ ಬಂದಿದೆ. ಸದ್ಯ ಬಂಧಿತ ಆರೋಪಿಗಳಿಂದ 330 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: Train services: ಎಡಕುಮೇರಿಯಲ್ಲಿ ದುರಸ್ಥಿ ಪೂರ್ಣ; ರೈಲುಗಳ ಪುನರ್‌ ಆರಂಭವಾದರೂ ವೇಗದ ಮಿತಿಗೆ ನಿರ್ಬಂಧ

ಹಗಲು ಡೆಲಿವರಿ ಬಾಯ್, ರಾತ್ರಿಯಾದರೆ ಕಳ್ಳತನ

ಹಗಲು ಹೊತ್ತು ಡೆಲಿವರಿ ಬಾಯ್‌ ಆಗಿದ್ದ ಯುವಕ ರಾತ್ರಿಯಾದರೆ ಕಳ್ಳತನಕ್ಕೆ ಇಳಿಯುತ್ತಿದ್ದವನು ಪೊಲೀಸರಿಗೆ ಲಾಕ್‌ ಆಗಿದ್ದಾನೆ. ವೈಟ್ ಫೀಲ್ಡ್ ಪೊಲೀಸರು ಅಭಿಜಿತ್ (23) ಎಂಬಾತನನ್ನು ಬಂಧಿಸಿದ್ದಾರೆ. ಡೆಲಿವರಿ ಕೆಲಸ ಮಾಡುತ್ತಾ ಮನೆಯ ಪರಿಸ್ಥಿತಿಯನ್ನು ಗಮನಿಸುತ್ತಿದ್ದ ಈ ಖರ್ತನಾಕ್‌, ಬಳಿಕ ಕಳ್ಳತನಕ್ಕೆ ಇಳಿಯುತ್ತಿದ್ದ.

ಅಪಾರ್ಟ್‌ಮೆಂಟ್‌ಗಳನ್ನೇ ಟಾರ್ಗೆಟ್ ಮಾಡಿ ರಾತ್ರಿ ವೇಳೆ‌ ಹಿಂಭಾಗದಿಂದ ಎಂಟ್ರಿ ಕೊಡುತ್ತಿದ್ದ. ನಂತರ ಸ್ಲೈಡ್ ಡೋರ್ ಸರಿಸಿ ಕಳ್ಳತನ ಮಾಡುತ್ತಿದ್ದ. ನಲ್ಲೂರು ಹಳ್ಳಿ ಭಾಗದ ಅಪಾರ್ಟ್‌ಮೆಂಟ್‌ಗೆ ಕನ್ನ ಹಾಕಿದ್ದ. ಮಾಲೀಕರ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿರುವ ಪೊಲೀಸರು, 50 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ವಶಕ್ಕೆ ಪಡೆದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version