ಬೆಂಗಳೂರು: ಆ ಖತರ್ನಾಕ್ ದಂಪತಿ ಮನೆ ಕೆಲಸಕ್ಕೆ ಸೇರಿಕೊಂಡು ಮಾಲೀಕರ ವಿಶ್ವಾಸವನ್ನು ಗಳಿಸಿದ್ದರು. ಗಂಡ ಮನೆ ಹೊರಗೆ ಕಾವಲು ಕಾಯುವ ಕೆಲಸಕ್ಕೆ ಇದ್ದರೆ, ಹೆಂಡತಿ ಮನೆಕೆಲಸ ಮಾಡಿಕೊಂಡು ಇದ್ದಳು. ಹೀಗೆ ಮಾಲೀಕರ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡಿದ್ದ ದಂಪತಿ ಇದೀಗ ಕೋಟಿ ಕೋಟಿ ಲೂಟಿ ಮಾಡಿ (Theft Case) ಸಿಕ್ಕಿ ಬಿದ್ದಿದ್ದಾರೆ.
ಮನೆ ಲೂಟಿ (Theft Case) ಮಾಡಿ ಪರಾರಿ ಆಗಿದ್ದ ನೇಪಾಳಿ ದಂಪತಿಯ ಬಂಧನವಾಗಿದೆ. ದಿನೇಶ್ (21), ಮೇನಕಾ (20) ಬಂಧಿತ ಆರೋಪಿಗಳಾಗಿದ್ದಾರೆ. ತಾವು ಕೆಲಸ ಮಾಡುತ್ತಿದ್ದ ಮನೆಯನ್ನೇ ದೋಚಿದ್ದಾರೆ. ಮನೆ ಮಾಲೀಕ ಹೊರಗೆ ಹೋದಾಗ ಮನೆಯಲ್ಲಿದ್ದ ಅವರ ಸೊಸೆಗೆ ಪೌಡರ್ ಮಿಶ್ರಿತ ಜ್ಯೂಸ್ ನೀಡಿದ್ದಾರೆ. ಆಕೆ ಪ್ರಜ್ಞೆ ತಪ್ಪುತ್ತಿದ್ದಂತೆ ಲಕ್ಷಾಂತರ ನಗದು ಸೇರಿ ಒಂದು ಕೋಟಿ ಮೌಲ್ಯದ ವಸ್ತುಗಳನ್ನು ದೋಚಿ ಕಾಲ್ಕಿತ್ತಿದ್ದರು.
ಇದನ್ನೂ ಓದಿ:Physical Abuse : ಪಿಎಚ್‌ಡಿ ವಿದ್ಯಾರ್ಥಿನಿಗೆ ಅಕ್ಕಮಹಾದೇವಿ ಮಹಿಳಾ ವಿವಿಯ ಪ್ರೊಫೆಸರ್‌ರಿಂದ ಲೈಂಗಿಕ ಕಿರುಕುಳ
ಕಳೆದ ಎರಡು ತಿಂಗಳ ಹಿಂದೆ ದಿನೇಶ್ ಹಾಗು ಮೇನಕಾ ಕೊಡಿಗೇಹಳ್ಳಿಯ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದರು. ಆರೋಪಿ ದಿನೇಶ್ ಸೆಕ್ಯೂರಿಟಿ ಗಾರ್ಡ್ ಕೆಲಸ ಹಾಗೂ ಮೇನಕಾ ಮನೆಕೆಲಸ ಮಾಡಿಕೊಂಡಿದ್ದಳು. ಕಳೆದ ಫೆ. 27ರಂದು ಉದ್ಯಮಿ ಕೆಲಸದ ಮೇಲೆ ಹೊರಹೋಗಿದ್ದರು. ಫೆ. 28ರಂದು ರಾತ್ರಿ ಉದ್ಯಮಿ ವಾಪಸ್ ಮನೆಗೆ ಬಂದಾಗ ಅವರ ಸೊಸೆ ಅರೆ ಪ್ರಜ್ಞೆಯಲ್ಲಿದ್ದರು.
ಆತಂಕಗೊಂಡ ಉದ್ಯಮಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಮನೆ ಪರಿಶೀಲಿಸಿದಾಗ ಸುಮಾರು 40 ಲಕ್ಷ ರೂ. ನಗದು, ವಿದೇಶಿ ಕರೆನ್ಸಿ, ಎರಡು ಚಿನ್ನದ ಉಂಗುರ, ಮೂರು ದುಬಾರಿ ವಾಚ್ ಕಳ್ಳತನವಾಗಿತ್ತು. ಜತೆಗೆ ಮನೆಯಲ್ಲಿ ದಿನೇಶ್ ದಂಪತಿ ನಾಪತ್ತೆಯಾಗಿರುವುದು ತಿಳಿದು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಕೊಡಿಗೆಹಳ್ಳಿ ಪೊಲೀಸರು ನೇಪಾಳಿ ದಂಪತಿಯನ್ನು ಮಾಲು ಸಮೇತ ಬಂಧಿಸಿದ್ದಾರೆ. ಆರೋಪಿಗಳು ದೋಚಿದ್ದ 40 ಲಕ್ಷ ರೂ. ನಗದು ಸೇರಿ 1 ಕೋಟಿ ರೂ.ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ