Site icon Vistara News

Theft Case : ದೇವರ ಪೂಜೆ ದಿನ ಉಂಡು ಹೋದವರು 21 ಕೆಜಿ ಚಿನ್ನ, ಬೆಳ್ಳಿ ಕೊಂಡೂ ಹೋದರು!

Devara pooje theft case

ಬೆಂಗಳೂರು: ಕಂಡ ಕಂಡವರನ್ನು ಮನೆಗೆ ಕರೆದು ಊಟ ಹಾಕೋ ಮುಂಚೆ ಇನ್ನೊಮ್ಮೆ ಯೋಚಿಸಿ. ಯಾಕೆಂದರೆ, ಇಲ್ಲೊಂದು ಪ್ರಕರಣದಲ್ಲಿ, ದೇವರ ಪೂಜೆ ದಿನ ಊಟ ಮಾಡಲು ಬಂದವರೇ ಕೆಲವು ದಿನ ಬಿಟ್ಟು ಬಂದು ಮನೆಗೆ ಕನ್ನ (Theft Case) ಹಾಕಿದ್ದಾರೆ. ಉಂಡು ಹೋದ ಕೊಂಡು ಹೋದ ಖತರ್ನಾಕ್ ಕಳ್ಳರ ಈ ಕರಾಮತ್ತು ನಡೆದಿರುವುದು ಮಾದನಾಯಕನಹಳ್ಳಿ ಆಲೂರಿನಲ್ಲಿ. ಇಲ್ಲಿನ ರೇವತಿ ಎಂಬವರಿಗೆ ಸೇರಿದ ವಿಲ್ಲಾದಲ್ಲಿ. ಕಳೆದ ಸೆಪ್ಟೆಂಬರ್‌ 6ರಂದು ನಡೆದ ಈ ಕೃತ್ಯದ ನಿಜವಾದ ಕಳ್ಳರನ್ನು ಹಿಡಿಯಲು ಇಷ್ಟು ಸಮಯ ತೆಗೆದುಕೊಂಡಿತು. ವಿಷಯ ತಿಳಿದಾಗ ಕಳ್ಳರು ಇವರೇನಾ ಎಂದು ಮನೆಯವರೇ ಅಚ್ಚರಿಗೊಂಡರು. ಯಾಕೆಂದರೆ ಅಂದು ಈ ಮನೆಯವರೇ ಅವರನ್ನು ಕರೆದು ಪ್ರೀತಿಯಿಂದ ಊಟ ಹಾಕಿದ್ದರು!

ರೇವತಿ ಅವರ ಮನೆಯಲ್ಲಿ ಕಳವಾಗಿರುವ ಚಿನ್ನ ಕಡಿಮೆ ಏನಿಲ್ಲ. ಒಂದು ಕೆಜಿ ಚಿನ್ನ ಮತ್ತು 20 ಕೆಜಿ ಬೆಳ್ಳಿ ಅಲ್ಲಿ ಕಳವಾಗಿತ್ತು.

ಏನಿದು ಘಟನೆ? ಯಾರಿವರು ಕಳ್ಳರು!?

ಕಳೆದ ಸೆಪ್ಟೆಂಬರ್‌ 6ರಂದು ರೇವತಿ ಅವರು ತಮ್ಮ ಮನೆಗೆ ಬೀಗ ಹಾಕಿ ಕುಟುಂಬದವರೊಂದಿಗೆ ಮೈಸೂರಿಗೆ ಹೋಗಿದ್ದರು. ಸೆ. 7ರಂದು ಮರಳಿ ಬಂದಾಗ ಮನೆಯಲ್ಲಿ ಕಳ್ಳತನವಾಗಿತ್ತು. ಮನೆಯ ಗೋಡೆಯನ್ನೇ ಒಡೆದು ಒಳ ನುಗ್ಗಿದ್ದ ಕಳ್ಳರು ಎಲ್ಲ ಕಡೆ ಜಾಲಾಡಿದ್ದರು. ಬೀರುವನ್ನು ಒಡೆದು ಹಾಕಿದ್ದರು. ಸುಮಾರು 20 ಕೆಜಿ ಬೆಳ್ಳಿ ಮತ್ತು 1 ಕೆಜಿಯಷ್ಟು ಚಿನ್ನವನ್ನು ದೋಚಿದ್ದರು.

ಈ ಬಗ್ಗೆ ರೇವತಿ ಅವರ ಮನೆಯವರು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ, ಪೊಲೀಸರಿಗೆ ಕಳ್ಳರನ್ನು ಪತ್ತೆ ಹಚ್ಚುವುದು ಅಷ್ಟು ಸುಲಭವಾಗಿರಲಿಲ್ಲ. ಸಿಸಿ ಟಿವಿ ಫೂಟೇಜ್‌ಗಳಲ್ಲಿ ಕೆಲವರು ಕಾಣಿಸಿದರೂ ಅವರು ಯಾರೆಂದು ಗುರುತಿಸಲು ಸಾಧ್ಯವಾಗಿರಲಿಲ್ಲ. ಭಾರಿ ಪ್ರಯತ್ನದ ಬಳಿಕ ಈಗ ಕೊಟ್ಟಿಗೆ ಪಾಳ್ಯದ ಪವನ್‌ ಮತ್ತು ನಾಲ್ವರು ಎಳೆ ವಯಸ್ಸಿನ ಯುವಕರು (18 ವರ್ಷಕ್ಕಿಂತ ಕೆಳಗಿನವರು) ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಹಾಗಿದ್ದರೆ ಇವರು ಯಾರು? ಕದಿಯಲು ಹೇಗೆ ಸಾಧ್ಯವಾಯಿತು?

ಕಳವು ಮಾಡಿದವರು ಯಾರು ಎಂಬುದು ತಿಳಿಯಲು ಕಷ್ಟವಾದಾಗ ಪೊಲೀಸರು ರೇವತಿ ಅವರ ಮನೆಗೆ ಕಳವು ನಡೆದ ಆಸುಪಾಸಿನಲ್ಲಿ ಯಾರೆಲ್ಲ ಬಂದಿದ್ದರು ಎಂಬುದರ ಕಡೆಗೆ ಗಮನ ಹರಿಸಿದರು.

ವಿಚಾರಣೆ ನಡೆಸಿದಾಗ ಆಗಸ್ಟ್ 28 ರಂದು ರೇವತಿ ಅವರ ಮನೆಯಲ್ಲಿ ಪೂಜೆ ನಡೆದಿದ್ದು ಗೊತ್ತಾಯಿತು. ಆವತ್ತು ಪೂಜೆಯ ದಿನ ರೇವತಿ ಅವರು ಬಾಡೂಟ ಮಾಡಿಸಿ ಸ್ಥಳೀಯರನ್ನು ಕರೆದಿದ್ದರು. ಅಕ್ಕಪಕ್ಕದ ಪರಿಚಿತರೆಲ್ಲರನ್ನೂ ಕರೆದಿದ್ದ ರೇವತಿ ಅವರು ಆಗ ಪಕ್ಕದ ಅಪಾರ್ಟ್ಮೆಂಟ್ ಗಳಲ್ಲಿ ಪೈಂಟಿಂಗ್‌ ಮಾಡುತ್ತಿದ್ದವರೂ ಊಟ ಹಾಕಿದ್ದರು. ಆದರೆ, ನಿಜವಾಗಿ ತಪ್ಪಾಗಿದ್ದೇ ಅಲ್ಲಿ!

ನಿಜವೆಂದರೆ ಆವತ್ತು ಊಟಕ್ಕೆ ಬಂದಿದ್ದ ಈ ಪೈಂಟರ್‌ಗಳು ಮನೆ ಮಂದಿ ಸಾಕಷ್ಟು ಪ್ರಮಾಣದ ಚಿನ್ನವನ್ನು ಧರಿಸಿದ್ದನ್ನು ಗಮನಿಸಿದ್ದರು. ಮನೆಯಲ್ಲಿ ದೇವರಿಗೂ ಸಾಕಷ್ಟು ಚಿನ್ನ ಹಾಕಿದ್ದರು. ಬೆಳ್ಳಿಯ ಆಭರಣಗಳೂ ದೊಡ್ಡ ಸಂಖ್ಯೆಯಲ್ಲಿ ಇದ್ದವು.

ಇದನ್ನೂ ಓದಿ: Theft Case : ಫ್ರೀ ಬಸ್‌ ಎಫೆಕ್ಟ್‌;15 ತೊಲೆ ಬಂಗಾರ ಎಗರಿಸಿದ ಚಲಾಕಿ ಕಳ್ಳರು

ಬಾಡೂಟ ಮಾಡಿ ಬಂದ ಮೇಲೆ ಅವರು ಪ್ರತಿ ದಿನ ಆ ಮನೆಯ ಚಿನ್ನಾಭರಣದ ಬಗ್ಗೆಯೇ ಮಾತನಾಡುತ್ತಿದ್ದರು. ಪ್ರತಿನಿತ್ಯ ಮನೆ ವಾಚ್ ಮಾಡುತ್ತಿದ್ದರು. ಮನೆಯವರು ಯಾವಾಗ ಹೊರಗೆ ಹೋಗುತ್ತಾರೆ? ಯಾವ ಹೊತ್ತಿಗೆ ಯಾರು ಇರುತ್ತಾರೆ ಎಂದೆಲ್ಲ ಲೆಕ್ಕ ಹಾಕಿದ್ದರು. ಈ ನಡುವೆ ಸೆ. 6ರಂದು ಅವರ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಿತ್ತು. ಅಂದು ಮನೆಯವರೆಲ್ಲರೂ ಬಾಗಿಲು ಹಾಕಿ ಹೋಗಿದ್ದರು. ರಾತ್ರಿಯಾದರೂ ಬಂದಿರಲಿಲ್ಲ. ಇನ್ನು ರಾತ್ರಿ ಬರುವುದಿಲ್ಲ ಎನ್ನುವುದನ್ನು ಖಾತ್ರಿಪಡಿಸಿಕೊಂಡ ಅವರು ರಾತ್ರಿಯೇ ಗೋಡೆ ಕೊರೆದು ಒಳಗೆ ಹೋಗಿ ಎಲ್ಲವನ್ನೂ ಎಳೆದು ಹಾಕಿ ಚಿನ್ನಾಭರಣ ದೋಚಿದ್ದರು.

ರೇವತಿ ಅವರ ಮನೆಗೆ ಯಾರೆಲ್ಲ ಬಂದಿದ್ದರು ಎಂಬ ಮಾಹಿತಿಯನ್ನು ಪಡೆದ ಪೊಲೀಸರು ಪವನ್‌ ಟೀಮನ್ನು ವಿಚಾರಣೆ ಮಾಡುತ್ತಿದ್ದಂತೆಯೇ ಕಳ್ಳತನದ ಎಲ್ಲ ವಿವರಗಳು ಸಿಕ್ಕಿದವು.

Exit mobile version