ಟ್ರಾಫಿಕ್ಕಿಗೆ ಇನ್ನೊಂದು ಹೆಸರೇ ಬೆಂಗಳೂರು ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಟ್ಯಾಕ್ಸಿ ಡ್ರೈವರುಗಳು, ಆಟೋವಾಲಾಗಳಿಗೆ ಈ ಟ್ರಾಫಿಕ್ಕು ದಿನನಿತ್ಯದ ಅಗ್ನಿಪರೀಕ್ಷೆಯಾದರೂ, ಎಲ್ಲರೂ ಇದಕ್ಕೆ ತಮ್ಮದೇ ಬಗೆಯಲ್ಲಿ ಹೊಂದಿಕೊಂಡಾಗಿದೆ. ಆಟೋರಿಕ್ಷಾ ಯೂನಿಯನ್ ಕೂಡಾ ʻನಮ್ಮ ಯಾತ್ರಿʼ ಎಂಬ ಮೊಬೈಲ್ ಆಪ್ಲಿಕೇಶನ್ ಕೂಡಾ ಆರಂಭಿಸಿದ್ದು, ಪ್ರಯಾಣಿಕರಿಗೆ ಸುಲಭವಾಗಿ, ಪಯಣಿಸುವ ಆಟೋ ಸೇವೆ ಇದಾಗಿದೆ.
ಆದರೆ, ಟ್ರಾಫಿಕ್ಕಿನಲ್ಲಿ ಕೊಳೆಯುವ ಗ್ರಾಹಕರಿಗೆ ಆಟೋನಲ್ಲಿ ಕೂತು, ತಲೆಬಿಸಿ ಮಾಡಿಕೊಂಡಿರುವುದ ಬೇಡ ಎಂದೇ, ಗ್ರಾಹಕರ ಹಿತಚಿಂತಕರಾಗಿರುವ ಆಟೋ ಡ್ರೈವರೊಬ್ಬರು, ತನ್ನ ಆಟೋನ ಒಳಗೇ ತನ್ನ ಕೈಲಾದಷ್ಟು ಸೌಲಭ್ಯ ಮಾಡಿದ್ದಾರೆ. ಇಲ್ಲಿ ನೀರಿದೆ, ಒಂದಿಷ್ಟು ಚಾಕೋಲೇಟ್ ಇದೆ. ಸುಮ್ಮನೆ ತಿರುವಿ ಹಾಕಲು ಪುಸ್ತಕ ಇದೆ. ಫಸ್ಟ್ ಏಡೂ ಇದೆ!
ಈ ಆಟೋ ಡ್ರೈವರ್ ಮಾಡುತ್ತಿರುವ ವಿನೂತನ ಸೇವೆ ಎಲ್ಲರ ಗಮನ ಸೆಳೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ. ತನ್ನ ಆಟೋನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸೌಲಭ್ಯಕ್ಕಾಗಿ ಆಟೋ ಒಳಗೆ ಸ್ಯಾನಿಟೈಸರ್, ಒಂದಿಷ್ಟು ಕ್ಯಾಂಡಿ, ಚಾಕೋಲೇಟುಗಳು, ಬ್ಯಾಂಡೇಜು, ಫಸ್ಟ್‌ಏಡ್ ಹಾಗೂ ಇತರ ಕೆಲವು ವಸ್ತುಗಳನ್ನು ಇಟ್ಟಿದ್ದಾರೆ.
ಉತ್ತಮ್ ಕಶ್ಯಪ್ ಎಂಬವರು ಈ ಆಟೋ ಡ್ರೈವರ ಈ ಸೇವೆಯ ಬಗ್ಗೆ ಬರೆದು ಅವರ ಫೋಟೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದರು. ಇದರಲ್ಲಿ, ʻರಾಜೇಶ್ ಎಂಬ ಈ ಆಟೋ ಡ್ರೈವರು ತನ್ನ ಆಟೋನಲ್ಲಿ ಒಂದಿಷ್ಟು ನೀರಿನ ಬಾಟಲಿ, ಸ್ಯಾನಿಟೈಸರ್, ಚಾಕೋಲೇಟುಗಳು, ಬಿಸ್ಕತ್ತುಗಳು, ಫಸ್ಟ್‌ಏಡ್ ಕಿಟ್ ಮೊದಲಾದ ವಸ್ತುಗಳನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಇಟ್ಟಿದ್ದಾರೆʼ ಎಂಬ ವಿವರಗಳೊಂದಿಗೆ ಫೋಟೋ ಹಂಚಿಕೊಂಡಿದ್ದರು. ರಾಜೇಶ್ ಅವರಲ್ಲಿ, ಆಟೋನಲ್ಲಿ ಇದ್ಯಾಕೆ ಹೀಗೆ ಇಡಲಾಗಿದೆ ಎಂದು ಕೇಳಿದ್ದಕ್ಕೆ ಅವರು, ʻನನಗೆ ನನ್ನ ಗ್ರಾಹಕರೇ ಎಲ್ಲವೂ, ಅದಕ್ಕಾಗಿ ಇಟ್ಟಿದ್ದೇನೆʼ ಎಂದಿದ್ದಾರೆ. ಅವರ ಈ ಒಳ್ಳೆಯ ಯೋಚನೆಗೆ ವ್ಯಾಪಕ ಮೆಚ್ಚುಗೆ ಇದೀಗ ವ್ಯಕ್ತವಾಗುತ್ತಿದೆ. ಪೋಸ್ಟ್ ಮಾಡಿದ ಉತ್ತಮ್ ಕಶ್ಯಪ್, ʻನನ್ನ ಇಂದಿನ ದಿನ, ಇವರ ಆಟೋನಲ್ಲಿ ಕುಳಿತು ಸಂಪನ್ನವಾಯಿತುʼ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ಕೇರಳ ಆಟೋ ಚಾಲಕನಿಗೆ ಲಾಟರಿಯಲ್ಲಿ ಒಲಿದ 25 ಕೋಟಿ ರೂ.; ಹಣದ ಹಿಂದೆಯೇ ಬಂದ ಸಾಲುಸಾಲು ಸಮಸ್ಯೆಗಳು !
ಸಮಸ್ಯೆಗಳು ಎಲ್ಲಾ ಕಡೆ ಇದೆ. ಆದರೆ, ಸಮಸ್ಯೆಗಳಿಗೆ ಹೀಗೆ ನಮ್ಮಲ್ಲೇ ಪರಿಹಾರ ಕಂಡುಹಿಡಿದುಕೊಳ್ಳೋದು ಇದೆಯಲ್ಲ, ಅದು ಮುಖ್ಯ. ನಮ್ಮ ನಡುವೆ ಇಂಥ ಸಹೃದಯರ ಸಂಖ್ಯೆ ಬೆಳೆಯಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಇದೊಂದು ಗ್ರಾಹಕರಿಗೆ ನೀಡುತ್ತಿರುವ ಅತ್ಯುತ್ತಮ ಸೇವೆ. ಹೀಗೆ ಯೋಚಿಸಿರುವುದೇ ಅವರ ದೊಡ್ಡತನ ಎಂದು ಕಾಮೆಂಟಿಸಿದ್ದಾರೆ.
ತಾನು ಮಾಡುವ ಕೆಲಸದ ಬಗ್ಗೆ ಅತೀವ ಪ್ರೀತಿಯಿರುವ ವ್ಯಕ್ತಿಗೆ ಮಾತ್ರ ತನ್ನ ಗ್ರಾಹಕರಿಗೆ ಇಂತಹ ಸೇವೆ ನೀಡಲು ಸಾಧ್ಯ. ನೀವು ಈ ಆಟೋನ ನಂಬರ್ ಪೋಸ್ಟ್ ಮಾಡಿದ್ದರೆ ಒಳ್ಳೆಯದಿತ್ತು. ರಾಜೇಶ್ ಒಳ್ಳೆಯದಾಗಲಿ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ | Auto fare | ಓಲಾ, ಉಬರ್ ಜತೆ ಸಾರಿಗೆ ಇಲಾಖೆ ಸಭೆ ಬರೀ ಕಾಟಾಚಾರ; ನಿರ್ಧಾರವಾಗದ ಆಟೋ ಕನಿಷ್ಠ ದರ