ಬೆಂಗಳೂರು: ಪಟಾಕಿ ಹಚ್ಚುವ ಸಂಭ್ರಮ ಕೆಲವರಿಗೆ ಪುಂಡಾಟಿಕೆ ಮೆರೆಯಲು ಸಾಧನವಾಗಿದೆ. ಪಟಾಕಿ ಹಚ್ಚಿ ರಸ್ತೆಯಲ್ಲಿ ಓಡಾಡುವವರ ಮೇಲೆಸೆದು ಪುಂಡಾಟ ಮಾಡಿ, ಪ್ರಶ್ನಿಸಿದಾಗ ಹಲ್ಲೆ ಮಾಡಿದ ಘಟನೆ ತಡರಾತ್ರಿ ಜ್ಞಾನಭಾರತಿ ವ್ಯಾಪ್ತಿಯ ಮಾರುತಿ ನಗರದಲ್ಲಿ ನಡೆದಿದೆ.
ಮೈಮೇಲೆ ಪಟಾಕಿ ಎಸೆಯುವುದನ್ನು ಪ್ರಶ್ನಿಸಿದ್ದೇ ತಪ್ಪಾಗಿ ಮಹಾದೇವಸ್ವಾಮಿ ಎಂಬವರು ಏಟು ತಿಂದಿದ್ದಾರೆ. ನಿನ್ನೆ ಬೆಳಗ್ಗೆಯಿಂದಲೂ ಈ ಏರಿಯಾದಲ್ಲಿ 7-8 ಯುವಕರ ಗುಂಪು ಪಟಾಕಿ ಸಿಡಿಸುತ್ತಿತ್ತು. ರಸ್ತೆಯಲ್ಲಿ ಓಡಾಡುವ ಮಹಿಳೆಯರು, ವೃದ್ಧರ ಮೇಲೆ ಪಟಾಕಿ ಎಸೆಯುತ್ತಿದ್ದರು. ರಾತ್ರಿ ರಸ್ತೆಯಲ್ಲಿ ತೆರಳುತ್ತಿದ್ದ ಮಹಾದೇವಸ್ವಾಮಿ ಎಂಬವರ ಮೇಲೂ ಪಟಾಕಿ ಎಸೆದಿದ್ದರು. ಪ್ರಶ್ನಿಸಿದ್ದಕ್ಕೆ ಪ್ಲಾಸ್ಟಿಕ್ ಟ್ರೇನಿಂದ ಮಹಾದೇವಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ.
ಪುಡಿ ರೌಡಿಗಳ ಈ ಗುಂಪು ಕುತ್ತಿಗೆಯ ಮೂಳೆ ಮುರಿಯುವಂತೆ ಮಹಾದೇವಸ್ವಾಮಿ ಅವರಿಗೆ ಹಲ್ಲೆ ಮಾಡಿದೆ. ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಲ್ಲೆಗೊಳಗಾದ ಮಹಾದೇವಸ್ವಾಮಿ ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ | Cracker danger | ಪಟಾಕಿ ಕಿಡಿ ಬಿದ್ದು ಗ್ಯಾಸ್ ಸಿಲಿಂಡರ್ ಸ್ಫೋಟ, ಧಗಧಗನೆ ಹೊತ್ತಿ ಉರಿದ ಅಂಗಡಿ, ಮನೆ