ಬೆಂಗಳೂರು: ಟಿಪ್ಪು ಸುಲ್ತಾನನನ್ನು ಹತ್ಯೆ ಮಾಡಿದವರು ಎಂದು ಬಿಜೆಪಿ ಹೇಳುತ್ತಿರುವ ಉರಿಗೌಡ ಹಾಗೂ ನಂಜೇಗೌಡ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಮಾಡುವ ನಿರ್ಮಾಪಕ ಹಾಗೂ ಬಿಜೆಪಿ ಶಾಸಕ ಮುನಿರತ್ನ ಪ್ರಯತ್ನಕ್ಕೆ ಹಿನ್ನಡೆ ಆಗುವ ಸಾಧ್ಯತೆಯಿದೆ. ಸಿನಿಮಾ ನಿರ್ಮಾಣ ಮಾಡುವ ಕುರಿತು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಅಂತರ ಕಾಯ್ದುಕೊಂಡಿದ್ದರೆ ಇತ್ತ ಸಿನಿಮಾ ಕುರಿತು ಚರ್ಚೆ ನಡೆಸಲು ಆಗಮಿಸುವಂತೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಹ್ವಾನ ನೀಡಿದ್ದಾರೆ.
ಬೆಂಗಳೂರಿನಲ್ಲಿ ವಿವಿಧ ವಿಚಾರಗಳ ಕುರಿತು ಪ್ರತಿಕ್ರಿಯೆ ನೀಡಿದ ನಳಿನ್ ಕುಮಾರ್ ಕಟೀಲ್, ಸಿನಿಮಾ ಕುರಿತು ಪ್ರತಿಕ್ರಿಯಿಸಲು ಹಿಂದೇಟು ಹಾಕಿದರು. ಉರಿಗೌಡ ನಂಜೇಗೌಡ ಸಿನಿಮಾದ ಬಗ್ಗೆ ಮುನಿರತ್ನ ಅವರನ್ನೇ ಕೇಳಿ ಎಂದು ಹೊರಟುಹೋದರು.
ಶ್ರೀಗಳು ಆಹ್ವಾನ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಸಚಿವ ಮುನಿರತ್ನ, ಈಗಾಗಲೇ ಆರ್. ಅಶೋಕ್, ಡಾ. ಸಿ.ಎನ್. ಅಶ್ವತ್ಥನಾರಾಯಣಾವರುಗಳು ಉರಿಗೌಡ-ನಂಜೇಗೌಡರ ಇತಿಹಾಸ ಬಗ್ಗೆ ಮಾತಾಡಿದಾರೆ. ನಾನು ಒಬ್ಬ ನಿರ್ಮಾಪಕನಾಗಿ ಅವರ ಚಿತ್ರ ಮಾಡೋಣ ಎಂದುಕೊಂಡಿದ್ದೇನೆ. ಇದಕ್ಕೆ ಸಂಬಂಧಿಸಿದಂತೆ ಆದಿಚುಂಚನಗಿರಿ ಶ್ರೀಗಳು ಚರ್ಚೆ ಮಾಡಲು ನನ್ನನ್ನು ಕರೆದಿದ್ದಾರೆ.
ಸೋಮವಾರ ಬೆಳಗ್ಗೆ ಶ್ರೀಗಳ ಭೇಟಿ ಮಾಡ್ತಿದೀನಿ. ಇತಿಹಾಸದ ಬಗ್ಗೆ ಮಾತಾಡೋರು ಅದಕ್ಕೆ ಜಾತಿ ಬಣ್ಣ ಕೊಡಬಾರದು. ಸಿನಿಮಾ ಈಗ ಚರ್ಚೆಯಲ್ಲಿದೆ. ಶ್ರೀಗಳನ್ನು ಭೇಟಿ ಮಾಡೋವರೆಗೂ ಚಿತ್ರದ ಬಗ್ಗೆ ಹೆಚ್ಚಾಗೇನೂ ಮಾತಾಡಲ್ಲ ಎಂದಿದ್ದಾರೆ.
ಭರ್ಜರಿ ಪ್ರಚಾರವನ್ನೂ ಗಳಿಸುತ್ತಿದ್ದ ಚಲನಚಿತ್ರದ ಕುರಿತು ಇದೀಗ ಪ್ರಶ್ನೆಗಳೆದ್ದಿವೆ. ಸ್ವತಃ ಮುನಿರತ್ನ ಪ್ರತಿನಿಧಿಸುವ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತಗಳೇ ನಿರ್ಣಾಯಕವಾಗಿದ್ದು, ಮುನಿರತ್ನ ಅವರ ಗೆಲುವಿಗೆ ಈ ಮತಗಳು ಅತ್ಯಗತ್ಯವಾಗುತ್ತವೆ.