ನವದೆಹಲಿ: ತಿರುಪತಿ ಪ್ರಕರಣದ (Tirupati laddu Row) ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಪವಿತ್ರ ಕ್ಷೇತ್ರಗಳ ಪ್ರಸಾದವನ್ನೂ ಪರೀಕ್ಷೆಗೆ ಒಳಪಡಿಸಲು ರಾಜ್ಯ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದ್ದಾರೆ. ನವದೆಹಲಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ತಿರುಪತಿ ಪ್ರಸಾದದ ವಿಚಾರವಾಗಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದರು.
ತಿರುಮಲ ತಿರುಪತಿಯಲ್ಲಿ ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಬಳಸಿದ ಕಾರಣ ರಾಜ್ಯದಲ್ಲಿನ ಪವಿತ್ರ ಕ್ಷೇತ್ರಗಳ ಪ್ರಸಾದವನ್ನು ತಕ್ಷಣ ಪರೀಕ್ಷೆಗೆ ಒಳಪಡಿಸುವುದು ಒಳಿತು ಎಂದು ಸಚಿವರು ಅಭಿಪ್ರಾಯಿಸಿದರು. ಹಿಂದೂಗಳ ಪವಿತ್ರ ಕ್ಷೇತ್ರವಾದ ತಿರುಮಲ ತಿರುಪತಿಯಲ್ಲಿ ಪ್ರಸಾದಕ್ಕೆ ಜಾನುವಾರುಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಬಳಸುತ್ತಿದ್ದರು!? ಎಂಬ ಸಂಗತಿ ಹಿಂದೂ ಸಮಾಜವನ್ನು ಚಿಂತೆಗೀಡು ಮಾಡಿದೆ ಎಂದು ಜೋಶಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಅಧಿಕಾರ ಅವಧಿಯಲ್ಲಿ ಈ ರೀತಿ ಹಲವು ಹಿಂದೂ ವಿರೋಧಿ ಕ್ರಮಗಳಿಗೆ ಬೆಂಬಲವಾಗಿ ನಿಂತಿರುವುದು ಅಕ್ಷಮ್ಯ ಎಂದು ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲ, ತಿರುಮಲ ತಿರುಪತಿಯ ಟ್ರಸ್ಟ್ ನಲ್ಲಿ ಜಗನ್ ರೆಡ್ಡಿ ಅವರು ಹಿಂದೂಯೇತರರನ್ನೂ ಟ್ರಸ್ಟ್ ಸದಸ್ಯರನ್ನಾಗಿ ಮಾಡಿದ್ದರು ಎಂದು ಜೋಶಿ ಆರೋಪಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ಮತ್ತೆ ಈ ರೀತಿಯ ವಿಚಾರಗಳು ಮರುಕಳಿಸಬಾರದು. ಆ ನಿಟ್ಟಿನಲ್ಲಿ ನೂತನ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಸದಾ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
ಕರ್ನಾಟಕದಲ್ಲೂ ಎಚ್ಚರ ವಹಿಸಿ: ಆಂಧ್ರಪ್ರದೇಶ ಪ್ರಕರಣದಿಂದ ಕರ್ನಾಟಕ ಸಹ ಎಚ್ಚೆತ್ತುಕೊಳ್ಳಬೇಕು. ಎಲ್ಲಾ ಪವಿತ್ರ ಕ್ಷೇತ್ರಗಳ ಪ್ರಸಾದಗಳನ್ನ ತ್ವರಿತವಾಗಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಸಚಿವ ಜೋಶಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಧಾರ್ಮಿಕ ಟ್ರಸ್ಟ್ ಗೆ ಬೇಡ ಹಿಂದೂಯೇತರರ ನೇಮಕ: ಹಿಂದೂ ಧಾರ್ಮಿಕ ಟ್ರಸ್ಟ್ ಗಳಲ್ಲಿ ಹಿಂದೂಯೇತರರನ್ನು ನೇಮಕ ಮಾಡಬಾರದು ಎಂದೂ ಸಚಿವ ಪ್ರಲ್ಹಾದ ಜೋಶಿ ಸರ್ಕಾರಕ್ಕೆ ಆಗ್ರಹಿದ್ದಾರೆ.
ಲಡ್ಡು ಪ್ರಸಾದಕ್ಕೆ ಪ್ರಾಣಿಯ ಕೊಬ್ಬು ಬಳಕೆ- ತನಿಖೆಗೆ ಸಿಟಿ ರವಿ ಆಗ್ರಹ
ತಿರುಪತಿ ತಿಮ್ಮಪ್ಪನ ಪ್ರಸಾದಕ್ಕೆ ಪ್ರಾಣಿ ಕೊಬ್ಬು ಬಳಕೆ ಆರೋಪದ ಕುರಿತು ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ. ತಿರುಪತಿ ಕೋಟ್ಯಾಂತರ ಭಕ್ತರ ಶ್ರದ್ಧೆಯ ಧಾರ್ಮಿಕ ಸ್ಥಳವಾಗಿದೆ. ಸಾವಿರಾರು ವರ್ಷಗಳಿಂದ ಬಾಲಾಜಿ ಜತೆ ಅವಿನಾಭಾವ ಸಂಬಂಧವಿದೆ. ವಾರಕ್ಕೊಮ್ಮೆ ಬಾಲಾಜಿ ದರ್ಶನಕ್ಕೆ ಹೋಗುವವರು ಇದ್ದಾರೆ. ತಿರುಪತಿ ಲಡ್ಡು ಪ್ರಸಾದಕ್ಕೆ ಇರುವ ಭಾವನೆಯೇ ಬೇರೆ.
ಅದು ಕೋಟ್ಯಾಂತರ ಭಕ್ತರಿಗೆ ಕೇವಲ ಸಿಹಿ ಅಲ್ಲ ಭಕ್ತಿಯ ಪ್ರಸಾದವಾಗಿದೆ. ಇಂತಹ ಪ್ರಸಾದ ತಯಾರಿಸುವಾಗ ಧಾರ್ಮಿಕ ಸ್ಯಾಂಟಿಟಿ ಕಾಪಾಡಿಕೊಳ್ಳಬೇಕು. ಕರ್ನಾಟಕದಿಂದಲೇ ನಂದಿನಿ ತುಪ್ಪ ಅಲ್ಲಿಗೆ ಸರಬರಾಜಾಗುವುದನ್ನ ಕೇಳಿದ್ದೇನೆ. ಪ್ರಸಾದಕ್ಕೆ ಪ್ರಾಣಿಯ ಕೊಬ್ಬು ಬಳಕೆ ಎಂಬ ಮಾತು ಆಶ್ಚರ್ಯ-ಆಘಾತ ಎರಡೂ ಆಗಿದೆ. ಧಾರ್ಮಿಕ ಶ್ರದ್ಧಾ ಕೇಂದ್ರದಲ್ಲಿ ಈ ರೀತಿ ಮಾಡುವ ಯೋಚನೆಯಾದರೂ ಯಾರಿಗೆ ಬರುತ್ತೆ. ಯಾರಿಗೆ ಗುತ್ತಿಗೆ ನೀಡಿದ್ದರು ಎಲ್ಲವನ್ನು ಗಂಭೀರವಾಗಿ ತನಿಖೆ ನಡೆಸಬೇಕು. ಇದು ನಮ್ಮ ಭಾವನೆ, ನಂಬಿಕೆ, ಶ್ರದ್ಧೆಯ ಪ್ರಶ್ನೆ, ಅದಕ್ಕೆ ಧಕ್ಕೆಯಾಗುತ್ತೆ. ಸಮಗ್ರ ತನಿಖೆಯಾದರೆ ಭಕ್ತರ ಮನಸ್ಸಿಗೆ ಸ್ಪಷ್ಟತೆ ಬರಲಿದೆ ಎಂದರು.
ತಿರುಪತಿಗೆ 350 ಮೆಟ್ರಿಕ್ ಟನ್ ತುಪ್ಪ ರವಾನೆ
ತಿರುಪತಿ ಪ್ರಸಾದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಆರೋಪ ವಿಚಾರವಾಗಿ ಕೆಎಂಎಫ್ ಅಧ್ಯಕ್ಷ ಭೀಮಾನಾಯಕ್ ಪ್ರತಿಕ್ರಿಯಿಸಿದ್ದಾರೆ. ಮೊದಲಿಗೆ ಸಿಎಂ ಚಂದ್ರಬಾಬು ನಾಯ್ಡು ಮಾಡಿರುವ ಆರೋಪಕ್ಕೂ, ನಮ್ಮ ನಂದಿನಿಗೂ ಯಾವುದೇ ಸಂಬಂಧವಿಲ್ಲ. ಕಳೆದ ಕೆಲ ದಿನಗಳ ಹಿಂದೆ ಟಿಟಿಡಿ ಪ್ರೆಸ್ ಮೀಟ್ ಮಾಡಿದೆ. ನಂದಿನಿ ಹಾಲು ಹೊರಗಿಟ್ಟು ಬೇರೆ ಬೇರೆ ತುಪ್ಪ ತೆಗೆದುಕೊಂಡಿದ್ದಾರೆ. ಇದರ ಉದ್ದೇಶ ಏನು ಅಂತ ಟಿಟಿಡಿ ಅವರು ಕೇಳಿದ್ದಾರೆ. ಹಿಂದೆ ನಂದಿನಿ ತುಪ್ಪ ಏಕೆ ಬೇಡ ಅಂತ ಹೇಳಿದ್ದರು ಅನ್ನೋದು ನಮ್ಮಗೆ ಗೊತ್ತಿಲ್ಲ.
ಈಗ ಮತ್ತೆ ನಂದಿನಿ ಹಾಲು ಬೇಕು ಅಂತ ಶಿಫಾರಸ್ಸು ಮಾಡಿದ್ದಾರೆ.ಈಗ ಮತ್ತೆ ಕಳೆದ ಒಂದು ತಿಂಗಳಿನಿಂದ 350 ಮೆಟ್ರಿಕ್ ಟನ್ ತುಪ್ಪ ಹೋಗುತ್ತಿದೆ. ಈಗ ಆರೋಪ ಅಷ್ಟೇ ಪ್ರಾಣಿ ಕೊಬ್ಬಿನ ಅಂಶ ಬಳಕೆ ಆಗ್ತಾಯಿತ್ತಾ ಅನ್ನೋ ವರದಿ ಬರಬೇಕು. ಒಂದೂ ವೇಳೆ ಬಳಕೆ ಆಗ್ತಾಯಿತ್ತು ಅಂದರೆ ದುರದೃಷ್ಟಕರ ವಿಚಾರ ಇದು. ಒಟ್ಟಾರೆ ಈಗ ನಾವು ನಂದಿನಿಯಿಂದ ತುಪ್ಪ ಕೊಡಲು ತಯಾರಿ ಇದ್ದೀವಿ ಅಂದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ